ಗೋಸ್ವರ್ಗ: ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿನ ಮಹತ್ವ ನೀಡಿದಾಗ ಕೃಷಿಯಲ್ಲಿ ಯಶಸ್ಸು ಪಡೆಯಬಹುದು. ಅನಾವೃಷ್ಠಿ ಅತೀವೃಷ್ಠಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಹಿಂದೆ ಪ್ರತಿ ಗ್ರಾಮಗಳಲ್ಲಿ ಗೋಮಾಳಗಳಿತ್ತು. ಬೆಳೆಯುತ್ತಿರುವ ಪಟ್ಟಣ – ಕಾರ್ಖಾನೆಗಳಿಂದ ವಾತಾವರಣ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಇಂದ್ರೇಶ್ ಹೇಳಿದರು.
ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ೧ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳನ್ನೊಳಗೊಂಡ ಮಾಹಿತಿ ಸಿಡಿ ಮೃದ್ಬೋಘ ವನ್ನು ಬಿಡುಗಡೆ ಮಾಡಲಾಯಿತು. ಗೋತುಲಾಭಾರ, ಗೋಚಿಕಿತ್ಸಾ ಶಿಬಿರ, ಭಿತ್ತಿ ಚಿತ್ರ ಪ್ರದರ್ಶನಗಳು ಇದೇ ಸಂದರ್ಭದಲ್ಲಿ ನಡೆಯಿತು. ಗೋಗಂಗಾರತಿ, ಗೋದೀಪೋತ್ಸವ ಎಲ್ಲರಿಂದ ನಡೆಯಿತು. ಭಾಸ್ಕರ ಹೆಗಡೆ ಕುಡ್ಗಿಬೈಲು ವಿಚಾರ ಸಂಕಿರಣದ ಅಭಿಪ್ರಾಯ ತಿಳಿಸಿದರು.
ಶ್ರೀರಾಮಚಂದ್ರಾಪುರಮಠದ ಸೇವಾ ಖಂಡ ಶ್ರೀಸಂಯೋಜಕ ಮಹೇಶ್ ಚಟ್ನಳ್ಳಿ ಸಮನ್ವಯ ಭಾಷಣ ಮಾಡಿದರು. ಶಿರಸಿ ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಡಾ. ಎನ್. ಕೆ. ಹೆಗಡೆ ಸಭಾ ನಿರ್ಣಯಗಳನ್ನು ಮಂಡಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್. ಎಸ್. ಹೆಗಡೆ, ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸಂಗೊಳ್ಳಿಮನೆ ಮತ್ತಿತರರು ಉಪಸ್ಥಿತರಿದ್ದರು.