ಇರುವ ಸ್ಥಳ ಪರಿಶುದ್ಧತೆಯನ್ನು ಸೂಚಿಸುತ್ತದೆ – ಗಿರೀಶ್ ಭರದ್ವಾಜ

ಗೋಶಾಲಾ

ಸುಳ್ಯ: ಶ್ರದ್ಧೆಯಿಂದ ಸೇವೆ ಮಾಡಿದರೆ ಸಂಪತ್ತು ಹಾಗೂ ಕೀರ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಯುವ ಸಮುದಾಯ ವಿದೇಶದ ಶೋಕೀ ಜೀವನದಕ್ಕೆ ಮಾರು ಹೋಗದೆ ಸ್ವದೇಶೀ ಸಂಸ್ಕೃತಿಯನ್ನು ಪ್ರೀತಿಸುವ ಕಾರ್ಯ ಮಾಡಬೇಕು. ಮಳೆ ನೀರು ಬೀಳುವ ಸ್ಥಳದ ಮೇಲೆ ಪರಿಶುದ್ಧತೆಯನ್ನು ಪಡೆಯುತ್ತದೆ. ವಿದೇಶಿ ತಳಿಗಳನ್ನು ಬಿಟ್ಟು, ನಮ್ಮ ತಳಿಗಳನ್ನು ಸಾಕಿ ಲಾಭ ಪಡೆಯುವ ಸಮಯ ಈಗ ಬಂದಿದೆ. ದೇಶೀ ದನಗಳಷ್ಟು ನಾಜೂಕು ಪ್ರಾಣಿಗಳು ಬೇರೊಂದಿಲ್ಲ, ಅವುಗಳ ದೇಹವನ್ನು ಸವರುವುದರಿಂದ ನಮ್ಮಲ್ಲಿನ ಒತ್ತಡವನ್ನು ಕಮ್ಮಿಮಾಡಿಕೊಳ್ಳಬಹುದಾಗಿದೆ ಎಂದು ಪದ್ಮಶ್ರೀ ಗಿರೀಶ್ ಭರದ್ವಾಜ ಹೇಳಿದರು.

ಅವರು ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ರಾಷ್ಟ್ರೀಯ ಹೈನು ಸಂಶೋಧನ ಸಂಸ್ಥೆ (ಎನ್. ಡಿ. ಆರ್. ಐ.) ದಕ್ಷಿಣ ವಲಯ ಕೇಂದ್ರ ಬೆಂಗಳೂರು, ಕೆ. ಎಲ್. ಡಿ. ಎ. ನ ಎಂಇಎಫ್‌ಸಿಸಿ ಅನುದಾನಿತ ಯೋಜನೆಯ ಆಶ್ರಯದಲ್ಲಿ ಶ್ರೀಸಂಸ್ಥಾನ ಗೋಕರ್ಣ ಜಗದ್ಗುರು ಮಹಾ ಸಂಸ್ಥಾನಮ್ ಶ್ರೀರಾಮಚಂದ್ರಾಪುರಮಠ ಅಂಗಸಂಸ್ಥೆಗಳಾದ ಹವ್ಯಕ ಮಹಾಮಂಡಲ, ಕಾಮದುಘಾ ಟ್ರಸ್ಟ್, ಜೇಡ್ಲ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರ, ಮಾತೃತ್ವಮ್, ಭಾರತೀಯ ಗೋಪರಿವಾರ ದಕ್ಷಿಣ ಕನ್ನಡ ಇದರ ಸಹಯೋಗದಲ್ಲಿ ನಡೆದ ಮಲೆನಾಡ ಗಿಡ್ಡ ಹಬ್ಬ ಹಾಗೂ ರೈತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ಎನ್‌ಡಿಆರ್‌ಐ ಮುಖ್ಯಸ್ಥ ಡಾ. ಕೆ.ವಿ.ರಮೇಶ್ ಮಾತನಾಡಿ ಮಲೆನಾಡು ಗಿಡ್ಡ ತಳಿ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಸೀಮಿತವಾಗಿರುವ ವಿಶಿಷ್ಟ ಭಾರತೀಯ ಗೋ ತಳಿಯಾಗಿದ್ದು ತಾಯಿಯ ಎದೆಹಾಲು ಹೊರತುಪಡಿಸಿದರೆ ಈ ತಳಿಯ ಗೋವಿನ ಹಾಲು ಸರ್ವಶ್ರೇಷ್ಠ ಎನ್ನುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳಿಂದ ದೃಢಪಟ್ಟಿದೆ. ಎಲ್ಲ ತಳಿಯ ಗೋವುಗಳ ಹಾಲಿಗಿಂತ ಅಽಕ ಪ್ರಮಾಣದ ಲ್ಯಾಕ್ಟೋಫೆರಿನ್ ಅಂಶ ಮಲೆನಾಡು ಗಿಡ್ಡ ತಳಿಯ ಹಸುಗಳ ಹಾಲಿನಲ್ಲಿದ್ದು ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಆರೋಗ್ಯ ಪೂರ್ಣ ಎಂದರು.

ವಿಶಿಷ್ಟ ಬಣ್ಣದ ಮಲೆನಾಡ ಗಿಡ್ಡ ಗೋವುಗಳ ಪ್ರದರ್ಶನ, ಮಲೆನಾಡ ಗಿಡ್ಡ ಗೋ ಆಧಾರಿತ ಆಹಾರ ಮತ್ತು ಕೃಷಿ ಪ್ರಾತ್ಯಕ್ಷಿಕೆಗಳು/ ಪ್ರದರ್ಶಿನಿಗಳು, ವಿವಿಧ ಜಾತಿಯ ಹುಲ್ಲಿನ ಪ್ರದರ್ಶನ, ಮಲೆನಾಡ ಗಿಡ್ಡ ಸಾಕುವವರಿಗೆ ಸಮ್ಮಾನ, ಮಲೆನಾಡ ಗಿಡ್ಡದ ವೈಶಿಷ್ಟ್ಯದ ಬಗ್ಗೆ ಹಾಲಿನ/ ಇತರ ಉತ್ಪನ್ನಗಳು ವಿಶೇಷತೆ ಬಗ್ಗೆ ತಜ್ಞರಿಂದ ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗೋಷ್ಠಿ, ಗೋ ಸಂದೇಶ, ಹಾಲು ಹಬ್ಬ, ಸಾತ್ವಿಕ ಆಹಾರೋತ್ಸವ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಮಲೆನಾಡ ಗಿಡ್ಡದ ಹಾಲಿನಿಂದ ತಯಾರಿಸಿದ ವಿವಿಧ ಸಿಹಿತಿಂಡಿಗಳು, ಗ್ರಾಮೀಣ ತಿಂಡಿ ತಿನಿಸುಗಳು ಮತ್ತು ಹಲಸಿನ ವಿವಿಧ ತಿಂಡಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ನಬಾರ್ಡ್ ಎಜಿಎಂ ರಮೇಶ್ ಎಸ್., ಡಾ. ಜಯಕುಮಾರ್, ಪಶುವೈದ್ಯ ಇಲಾಖೆಯ ಡಾ. ಗುರುಮೂರ್ತಿ, ಸುಳ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಕೆಎಂಎಫ್‌ನ ಡಾ. ಕೇಶವ ಸುಳ್ಳಿ, ಪ್ರೊ. ಕೃಷ್ಣ ಭಟ್, ಕಾಮದುಘಾ ಟ್ರಸ್ಟ್ ಅಧ್ಯಕ್ಷ ವೈ. ವಿ. ಕೃಷ್ಣ ಮೂರ್ತಿ, ಉಪಾಧ್ಯಕ್ಷೆ ಶೈಲಜಾ ಕೆ. ಟಿ. ಭಟ್, ಮಾತೃತ್ವಮ್ ವಿಭಾಗದ ಈಶ್ವರಿ ಬೇರ್ಕಡವು ಉಪಸ್ಥಿತರಿದ್ದರು.

ಮೈತ್ರಿ, ಅಶ್ವಿನಿ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *