ಸಾರ್ಥಕ ಜೀವನಕ್ಕೆ ಸಂದ ‘ಹವ್ಯಕ ವಿಭೂಷಣ’

ಸುದ್ದಿ

ಹೊನ್ನಾವರ: ಹವ್ಯಕ ವಿಭೂಷಣ ಪ್ರಶಸ್ತಿಗೆ ಭಾಜನರಾದ ಪ್ರೊ| ಎಸ್. ಶಂಭು ಭಟ್ಟ ಕಡತೋಕಾ ಇವರಿಗೆ ಕುಮಟಾ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧಿಕ ಜ್ಯೇಷ್ಠ ಹುಣ್ಣಿಮೆಯಂದು (31-05-2026) ಶ್ರೀಮಠದ ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದ ‘ಜಯಗುರು’ ಮಂದಿರದದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು.

ಕುಮಟಾ ಮಂಡಲದ ಅಧ್ಯಕ್ಷರಾದ ಸೀತಾರಾಮ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಂಭು ಭಟ್ಟರ ವ್ಯಕ್ತಿತ್ವವನ್ನು, ಸಂಘಟನೆಯಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಪ್ರಾಂತ ಉಪಾಧ್ಯಕ್ಷರಾದ ಜಿ. ಎಸ್ ಹೆಗಡೆಯವರು ಮಾತನಾಡುತ್ತಾ ಸೀಮಾ ಪರಿಷತ್ತು, ಮಂಡಲ ಹಾಗೂ ವಲಯಗಳ ರಚನೆಯಲ್ಲಿ ಶ್ರೀಯುತರು ವಹಿಸಿದ ಪ್ರಮುಖ ಪಾತ್ರವನ್ನು ಸ್ಮರಿಸಿಕೊಂಡರು. ಅಜ್ಜಿಗದ್ದೆಯ ಸುಬ್ರಹ್ಮಣ್ಯ ಹೆಗಡೆಯವರು ಮಾತನಾಡುತ್ತಾ ಶಂಭು ಭಟ್ಟರ ಸಮಯ ಪಾಲನೆಯನ್ನು ನೆನಪು ಮಾಡಿಕೊಂಡರು. ಮಹಾದೇವಿ ಭಟ್ಟ, ಲಲಿತಾ ಹೆಬ್ಬಾರ್ ಅವರು ಶ್ರೀಯುತರ ಸೇವೆಯ ವಿವಿಧ ಮಜಲುಗಳನ್ನು ನೆನಪು ಮಾಡಿಕೊಂಡರು.

ಉಪನ್ಯಾಸಕರಾದ ಡಿ. ಪಿ. ಹೆಗಡೆ, ಊರಿನ ಗಣ್ಯರಾದ ಪಿ. ಕೆ. ಭಟ್ಟ ಯಾಲಕ್ಕಿ ಸನ್ಮಾನಿತರ ಬಗ್ಗೆ ಮಾತನಾಡುತ್ತಾ ಅವರ ವೈವಿಧ್ಯಮಯ ವ್ಯಕ್ತಿತ್ವವನ್ನು, ಸರ್ವರನ್ನೂ ಒಂದುಗೂಡಿಸಿಕೊಂಡು ಹೋಗುವ ಅವರ ಸಂಘಟನಾ ಪ್ರವೃತ್ತಿಯನ್ನು ಪ್ರಶಂಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭು ಭಟ್ಟರು
‘ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಅಂದಿಗಿಂತಲೂ ಇಂದು ನಮ್ಮವರು ಹೆಚ್ಚು ಸಂಘಟಿತರಾಗಿದ್ದಾರೆ. ಹವ್ಯಕ ಮಹಾಸಭೆ
ಅತ್ಯುತ್ತಮ ಸಂಘಟನೆಗೆ ಮಾದರಿಯಾಗಿದೆ. ಅದು ನಡೆಸಿದ ವಿಶ್ವ ಹವ್ಯಕ ಸಮ್ಮೇಳನ ಇಡಿ ವಿಶ್ವಕ್ಕೇ ಮಾದರಿಯಾಗಿದೆ. ಸಜ್ಜನರ ಸಂಘಟನೆ ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ಶ್ರೀಸಂಸ್ಥಾನದವರ ಮಾರ್ಗದರ್ಶನ. ಶ್ರೀಗುರುಗಳ ಸಾಧನೆ ತುಂಬಾ ದೊಡ್ಡದು. ಅವರ ಮಾರ್ಗದರ್ಶನದಲ್ಲಿ ಹಲವಾರು ಮಹತ್ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ, ನಡೆಯುತ್ತಿವೆ. ಇಂದು ಗುರುಗಳ ಮಾರ್ಗದರ್ಶನದಲ್ಲಿ ದೊಡ್ಡ ವಿಶ್ವವಿದ್ಯಾಲಯವೇ ಪ್ರವರ್ಧಮಾನಕ್ಕೆ ಬರುತ್ತಿದೆ. ಅಖಿಲ ಹವ್ಯಕ ಮಹಾಸಭಾ, ಶ್ರೀಗುರುಗಳ ಮಾರ್ಗದರ್ಶನದಲ್ಲಿ ಬಹಳ ಚೆನ್ನಾಗಿ ನಡೆಯುತ್ತಿದೆ’ ಎಂದು ಭಾವಾಭಿವ್ಯಕ್ತಿಗೊಳಿಸಿದರು.

ಬಹಳ ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಮಟಾ ಮಂಡಲ, ಹೊನ್ನಾವರ ಮಂಡಲ, ಕೆಕ್ಕಾರು ವಲಯದ ಹಲವಾರು ಪದಾಧಿಕಾರಿಗಳು, ಗುರಿಕಾರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *