ಬೆಂಗಳೂರು: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನಕ್ಕೆ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಲ್ಲರೂ ಪ್ರೀತಿಸಿದ, ಎಲ್ಲರನ್ನೂ ಪ್ರೀತಿಸಿದ ಮಗುವಿನ ಮನಸ್ಸಿನ ಮಹಾಜ್ಞಾನಿಗಳು ಇಲ್ಲದ ಶೂನ್ಯ ಎಂದೂ ತುಂಬದು ಎಂದು ಸ್ವಾಮೀಜಿಯವರು ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.
ನಮ್ಮ ಸಂನ್ಯಾಸ ಸ್ವೀಕಾರ, ಪೀಠಾರೋಹಣ ಹಾಗೂ ಎಲ್ಲ ಮಹತ್ಕಾರ್ಯಗಳಲ್ಲಿ ಪೇಜಾವರ ಶ್ರೀಗಳು ಜತೆಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಜತೆಯಾಗುತ್ತಿದ್ದ ಪೇಜಾವರ ಶ್ರೀಗಳು ಕಳೆದ ವರ್ಷ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದರು. ರಾಮ-ಕೃಷ್ಣರ ಅಪೂರ್ವ ಬಾಂಧವ್ಯವನ್ನು ಬಣ್ಣಿಸಲು ಪದಗಳೇ ಇಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪಿ.ನಾಗರಾಜ್ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಪೇಜಾವರ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹವ್ಯಕ ಮಹಾಮಂಡಲ, ವಿವಿಧ ಮಂಡಲಗಳು, ವಲಯ ಹಾಗೂ ಘಟಕಗಳಲ್ಲಿ ಪೇಜಾವರ ಶ್ರೀಗಳ ಸಂತಾಪ ಸೂಚಕ ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು.