ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ : ಹರಿಕೃಷ್ಣ ಪುನರೂರು

ಸುದ್ದಿ

ನಂತೂರು: ಕರ್ನಾಟಕದಲ್ಲಿ ಶೇ.35ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯದವರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿಯುತ್ತಿಲ್ಲ. ಇಂಗ್ಲಿಷ್ ಮಾಧ್ಯಮಕ್ಕೆ ವಿರೋಧವಲ್ಲ. ಆದರೆ ಕನ್ನಡ ಮತ್ತು ತುಳುವನ್ನು ಮರೆಯಬಾರದು. ಎಲ್ಲ ಭಾಷೆ ಕಲಿಯಬಹುದು. ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹೇಳಿದರು.

 

ಅವರು ಬುಧವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಕನ್ನಡ ಸಂಘ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಿಗೆ ಆಯೋಜಿಸಿರುವ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಜಿಲ್ಲಾ ಮಟ್ಟದ ಕವನ ಸ್ಪರ್ಧೆ-ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

 

ನಿವೃತ್ತ ಪ್ರಾಂಶುಪಾಲ-ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಕನ್ನಡ ಮತ್ತು ಸಂಸ್ಕೃತ ಜತೆಗಿದ್ದರೆ ಹಾಲು ಜೇನು ಸೇರಿದಂತೆ. ಕನ್ನಡ ಭಾಷೆಯ ಮಹತ್ವ ಅರಿತಿದ್ದರೂ ತಪ್ಪು ಮಾಡುವ ಕೆಲ ಹೆತ್ತವರು ತಿದ್ದಿಕೊಳ್ಳಬೇಕು. ಅಪ್ಪ, ಅಮ್ಮ ಶಬ್ದದಲ್ಲಿ ಬಂಧುತ್ವವಿದೆ. ಅದು ಬೇರೆ ಭಾಷೆಗಳಲ್ಲಿಲ್ಲ ಎಂದು ಹೇಳಿದರು.

 

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಮಾತನಾಡಿ, ಮಕ್ಕಳು ಬರವಣಿಗೆಯನ್ನು ಮುಚ್ಚಿಡಬಾರದು. ಹೊರಹಾಕಬೇಕು. ಅದನ್ನು ಅನುಭವಿಗಳಿಗೆ ತೋರಿಸಿ, ತಿದ್ದಿಕೊಳ್ಳಬೇಕು. ಆಗ ಅವರ ಪ್ರತಿಭೆಗೆ ಮಾನ್ಯತೆ ಸಿಗುತ್ತದೆ ಎಂದರು.

 

ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನದಾಸ್ ಎ., ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಭಟ್, ಹಿರಿಯ ವಿದ್ಯಾರ್ಥಿ ಶಶಾಂಕ್ ಮಾವಿನಸರ ಶುಭ ಹಾರೈಸಿದರು. ಇದೇ ಸಂದರ್ಭ ಜಿಲ್ಲಾ ಮಟ್ಟದ ಕವನಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

 

ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್, ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್., ಕಲಾಭಾರತಿ ಸಂಯೋಜಕ ಪ್ರವೀಣ್ ಪಿ., ಕನ್ನಡ ಸಂಘದ ಕಾರ್ಯದರ್ಶಿ ಅಕ್ಷತ್ ಉಪಸ್ಥಿತರಿದ್ದರು.

 

ಕನ್ನಡ ಸಂಘದ ಸಂಯೋಜಕಿ-ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಪ್ರಸ್ತಾಪಿಸಿದರು. ಉಪನ್ಯಾಸಕಿ ಪವನ ಕುಮಾರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಸೂರ್ಯನಾರಾಯಣ ಭಟ್ ವಂದಿಸಿದರು. ಕನ್ನಡ ಸಂಘದ ಅಧ್ಯಕ್ಷೆ ಅಂಕಿತಾ ನೀರ್ಪಾಜೆ ನಿರೂಪಿಸಿದರು. ಪ್ರಶಾಂತ್ ಗಾಂವ್ಕರ್ ಆಶಯಗೀತೆ ಹಾಡಿದರು.

Author Details


Srimukha

Leave a Reply

Your email address will not be published. Required fields are marked *