ಸಿದ್ದಾಪುರ: ಹವ್ಯಕರಿಗೆ ಹುಟ್ಟಿನಿಂದಲೇ ಸಂಸ್ಕಾರ ಬರುತ್ತದೆ. ಇಲ್ಲಿಯ ಪ್ರತಿಭೆಗಳು ಶಾಲೆಗೆ ಹೋಗಿ ಬುದ್ಧಿವಂತಿಕೆ ಕಲಿತು ಬಂದಿದ್ದಲ್ಲ. ಹವ್ಯಕರ ವಂಶವಾಹಿನಿಯಲ್ಲಿಯೇ ಪ್ರತಿಭೆ ನೀರಿನಂತೆ ಹರಿಯುತ್ತಿರುತ್ತದೆ. ಅದಕ್ಕೆ ಆಣೆಕಟ್ಟು ಕಟ್ಟಿದರೂ ಅವಕಾಶ ಮಾಡಿಕೊಂಡು ಬೇರೆಡೆ ಹರಿಯುತ್ತದೆ ಎಂದು ಶ್ರೀಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ವತಿಯಿಂದ ಉತ್ತರ ಕನ್ನಡ ಪ್ರಾಂತದ ಹವ್ಯಕರಿಗಾಗಿ ಗೋಸ್ವರ್ಗಸಂಸ್ಥಾನ ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ ಆಯೋಜಿಸಲಾಗಿದ್ದ “ಪ್ರತಿಬಿಂಬ” (ಉತ್ತರ) ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹವ್ಯಕರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಗ್ರಾಮೀಣ ಮಟ್ಟದಿಂದ ಹಿಡಿದು ಎಲ್ಲೆಡೆಯಲ್ಲಿಯೂ ನಮ್ಮ ಸಂಘಟನೆಯ ಶಕ್ತಿ ತೋರಬೇಕು. ಈ ಹಿನ್ನೆಲೆಯಲ್ಲಿ ಹಿರಿಯರು ಕಟ್ಟಿ ಬೆಳೆಸಿರುವ ಅಖಿಲ ಹವ್ಯಕ ಮಹಾಸಭಾದ ಅಮೃತಮಹೋತ್ಸವವು ಡಿಸೆಂಬರ್ 28 ರಿಂದ ಮೂರು ದಿವಸಗಳ ಕಾಲ ಜರುಗಲಿದ್ದು, ಅದರಲ್ಲಿ ಹವ್ಯಕ ಬಾಂಧವರೆಲ್ಲ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ಸಂಖ್ಯೆಯ ದೃಷ್ಟಿಯಲ್ಲಿ ನಾವು ಕಡಿಮೆ ಎನಿಸಿದರೂ ಸಮಾಜದ ಪರಿವರ್ತನೆ, ಆದರ್ಶಕ್ಕೆ ಮೇಲ್ಪಂಕ್ತಿ ಹಾಕುವಲ್ಲಿ ಹವ್ಯಕ ಸಮಾಜ ಪ್ರಮುಖ ಸಮಾಜವೆನಿಸಿದೆ. ನಾವು ನಮ್ಮ ಪೂರ್ವಜರ ಪರಿಶ್ರಮ ತ್ಯಾಗದ ಹಿನ್ನೆಲೆಯಲ್ಲಿ ಬದುಕಿದ್ದೇವೆ. ಸಮಾಜದ ಎಲ್ಲ ಜಾತಿ, ಉಪಜಾತಿಗಳವರೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿದ್ದೇವೆ. ಇಡೀ ಭಾರತ ದೇಶದಲ್ಲಿ ಪೂಜ್ಯರಾದ ಮಠಾಧೀಶರು ಸುಸಂಸ್ಕೃತವಾಗಿ ಬದುಕಲು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಹವ್ಯಕ ಮಹಾಸಭಾ ಮಾಜಿ ಉಪಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ, ಹವ್ಯಕ ಮಹಾಸಭಾ ಉಪಾಧ್ಯಕ್ಷರಾದ ಶ್ರೀಧರ ಭಟ್ಟ ಕೆಕ್ಕಾರ, ನಿರ್ದೇಶಕರಾದ ಸುಬ್ರಾಯ ಭಟ್ಟ ಮೂರೂರು, ಪ್ರಶಾಂತ ಹೆಗಡೆ ಯಲ್ಲಾಪುರ, ಗೋಸ್ವರ್ಗಸಂಸ್ಥಾನ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಮಹಾಸಭಾ ಕಾರ್ಯದರ್ಶಿಗಳಾದ ಪ್ರಶಾಂತ ಭಟ್ಟ ಮಲವಳ್ಳಿ, ಶ್ರೀಧರ ಭಟ್ಟ ಸಾಲೇಕೊಪ್ಪ, ಟಿಎಂಎಸ್ ನಿರ್ದೇಶಕರಾದ ಎಂ.ಆರ್. ಹೆಗಡೆ ನೇಗಾರ, ಜಿ.ಎಂ. ಭಟ್ಟ ಕಾಜಿನಮನೆ, ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಜಿ.ಎಸ್. ಭಟ್ಟ ಕಲ್ಲಾಳ, ಸಾಮಾಜಿಕ ಮುಖಂಡ ಎನ್.ವಿ. ಹೆಗಡೆ ಮುತ್ತಿಗೆ, ಭಾಸ್ಕರ ಹೆಗಡೆ ಕೊಡಗಿಬೈಲು, ಸತೀಶ ಆಲ್ಮನೆ, ಡಾ. ರಾಜು ಕೆ.ಭಟ್ಟ, ಪ್ರಾಚಾರ್ಯೆ ಡಾ. ರೂಪಾ ಭಟ್ಟ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ದಾನಿಗಳಾದ ಪರಮೇಶ್ವರ ಹೆಗಡೆ ಬೈಲಳ್ಳಿ, ಪ್ರಕಾಶ ಹೆಗಡೆ ಗುಂಜಗೋಡು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹವ್ಯಕ ಮಹಾಸಭಾ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ಗಣಪತಿ ಹೆಗಡೆ ಗುಂಜಗೋಡು ವಂದಿಸಿದರು.