ದೇವರ ಮೇಲೆ ನಂಬಿಕೆ, ಗುರು ಭಕ್ತಿ, ಸಂಘಟನೆ ಮೇಲೆ ನಿಷ್ಠೆಯಿದ್ದಾಗ ಯಶಸ್ಸು ಜೊತೆಗಿರುತ್ತದೆ. ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಅವರು ಭಾನುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಮಂಡಲ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ ಮನುಷ್ಯನ ಭಾವನೆಗಳಷ್ಟು ದೊಡ್ಡ ವಿಷಯ ಬೇರೊಂದು ಇಲ್ಲ. ಸಂಘಟನೆ ಇಟ್ಟ ಪ್ರೀತಿ ಆಶೀರ್ವಾದಿಂದ ಈ ಸ್ಥಾನ ಲಭಿಸಿದೆ. ಕಾಲದ ನಿರ್ಧಾರದ ಮುಂದೆ ಯಾವ ಪೈಪೋಟಿಯೂ ಅಗತ್ಯವಿಲ್ಲ. ಅಭಿವೃದ್ಧಿಯ ವಿಚಾರಗಳಲ್ಲಿ ಯಾವುದೇ ಗೊಂದಲ ಬೇಡ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ ಜನರ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಕಾರ್ಯವನ್ನು ಮಾಡುತ್ತೇವೆ. ಮಿತ್ತಪೆರಾಜೆ – ಬೊಳ್ಳುಕಲ್ಲು ಮಾರ್ಗ ಅಭಿವೃದ್ಧಿಯ ಪ್ರಸ್ತಾಪನೆ ಈಗಾಗಲೇ ಹೋಗಿದ್ದು, ಒಂದು ತಿಂಗಳಲ್ಲಿ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.
ನೂತನ ಗುರಿಕಾರರಿಗೆ ಸಾಠಿ ಸನದು ಪ್ರಧಾನ, ಪ್ರತಿಭಾ ಪುರಸ್ಕಾರ, ವಿವಿಗೆ ಸಮರ್ಪಣೆ ನಡೆಯಿತು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಬಿಂದುಸಿಂದು ಪ್ರಧಾನ ಅರವಿಂದ ದರ್ಭೆ, ಮುಷ್ಟಿ ಅಕ್ಕಿ ಪ್ರಧಾನ ಶ್ರೀಕೃಷ್ಣ ಮಿನಗದ್ದೆ, ಉಪಾಧ್ಯಕ್ಷೆ ಶೈಲಜಾ ಕೆ. ಟಿ. ಭಟ್, ಮಾತೃ ಪ್ರಧಾನೆ ದೇವಿಕಾ ಶಾಸ್ತ್ರೀ, ಗುರಿಕಾರರು, ಶಾಸನತಂತ್ರದ ಪದಾಧಿಕಾರಿಗಳು, ಮಾಣಿ ಮಠ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ಬಂಗಾರಡ್ಕ ಜನಾರ್ಧನ ಭಟ್, ಕೋಶಾಧಿಕಾರಿ ಮೈಕೆ ಗಣೇಶ್ ಭಟ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.
ಗೌರವ ಪ್ರಧಾನ – ಆಶೀರ್ವಾದ:
ನೂತನ ಸಚಿವ ಎಸ್. ಅಂಗಾರ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ಅವರನ್ನು ಗೌರವಿಸಲಾಯಿತು. ವಿವಿವಿ ಸಂಶೋಧನಾ ಕೇಂದ್ರದ ಸಂಪೂರ್ಣ ಪ್ರಾಯೋಜಕತ್ವವನ್ನು ಕರ್ನಾಟಕ ಬ್ಯಾಂಕ್ ವಹಿಸಿದ್ದು, ಜನರಲ್ ಮ್ಯಾನೇಜರ್ ಮಹಾಲಿಂಗೇಶ್ವರ ಭಟ್ ದಂಪತಿ ಆಶೀರ್ವಾದಪಡೆದರು.