ರಾಮನ ಸೀತಾಪ್ರೀತಿ ಪ್ರಶ್ನಾತೀತ: ರಾಘವೇಶ್ವರ ಶ್ರೀ

ಮಠ

ಅಗ್ನಿಪರೀಕ್ಷೆ ಹಿನ್ನೆಲೆಯಲ್ಲಿ ಸೀತೆಯ ಬಗೆಗಿನ ರಾಮನ ಪ್ರೀತಿಯನ್ನು ಪ್ರಶ್ನಿಸುವವರಿದ್ದಾರೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ರಾಮಸೇತು ಉತ್ತರ ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಬುಧವಾರ ಆರಂಭವಾದ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೊದಲ ದಿನದ ಪ್ರವಚನ ಅನುಗ್ರಹಿಸಿದ ಅವರು, “ಜಗತ್ತಿನ ತಂದೆ ತಾಯಿಗಳನ್ನು ಒಂದಾಗಿಸಿದ್ದು ರಾಮಸೇತು. ತ್ರೇತಾಯುಗ ಯುಗದಲ್ಲಿ ಸೀತೆಗಾಗಿ ವಿಶ್ವಯುದ್ಧವನ್ನೇ ರಾಮ ನಡೆಸಿದ್ದಾನೆ. ಸಮುದ್ರಕ್ಕೆ ಸೇತುವೆ ನಿರ್ಮಿಸಿದ್ದು ಸೀತೆಗಾಗಿ. ಇಂಥ ಪ್ರೀತಿಯನ್ನು ಯಾರು ಕೂಡಾ ಪ್ರಶ್ನಿಸಲಾಗದು; ಇದು ಕಲ್ಪನೆ ಅಥವಾ ಕನಸಿಗೂ ನಿಲುಕದ್ದು” ಎಂದು ವಿಶ್ಲೇಷಿಸಿದರು.
ಅಕ್ಷರ ರೂಪ, ಗ್ರಂಥರೂಪದಲ್ಲಿ, ಭಾವರೂಪದಲ್ಲಿ ರಾಮ ಸಾನ್ನಿಧ್ಯ ನೀಡಿದ್ದಾನೆ. ಸಮುದ್ರಸೇತು ನಿರ್ಮಿಸಿದವನು ಶ್ರೀರಾಮ ಮಾತ್ರ. ಅದು ಅದ್ವೈತಕ್ಕೆ ಸೇತುವೆ. ‘ಸೇತು’ ಇಂದಿನ ಜಗತ್ತಿಗೆ ತೀರಾ ಅನಿವಾರ್ಯ. ಜೀವ- ದೇವರ ನಡುವೆ, ಗುರು- ಶಿಷ್ಯರ ನಡುವೆ, ತಂದೆ ಮಕ್ಕಳ ನಡುವೆ, ತಾಯಿ ಮಕ್ಕಳ ನಡುವೆ, ಗಂಡ ಹೆಂಡತಿ ನಡುವೆ, ಜೀವ ಪ್ರಕೃತಿ ನಡುವೆ ಸೇತುವೆ ಬೇಕು ಎಂದು ವಿವರಿಸಿದರು.
ಮೃತಪತ್ನಿ ಮುಮ್ತಾಜ್ ನೆನಪಿಗಾಗಿ ಶಹಾಜಹಾನ್ ತಾಜ್‍ಮಹಲ್ ಕಟ್ಟಿಸಿದರೆ, ಶ್ರೀರಾಮ ತನ್ನ ಪ್ರೀತಿಯ ಪತ್ನಿಯನ್ನು ಪಡೆಯುವ ಸಲುವಾಗಿ ಇಡೀ ವಿಶ್ವದಲ್ಲೇ ಅತ್ಯದ್ಭುತ ಎನಿಸಿದ ರಾಮಸೇತು ನಿರ್ಮಿಸಿದ. ಪತ್ನಿ ಜೀವಂತ ಇರುವಾಗಲೇ ಅಸದೃಶವಾದುದನ್ನು ನಿರ್ಮಿಸಿದ್ದು, ಶ್ರೀರಾಮ. ಇದು ಸರ್ವಶ್ರೇಷ್ಠ. ರಾಮಸೇತು ನಿರ್ಮಿತವಾದದ್ದು ಐದು ದಿನಗಳಲ್ಲಿ; ಇಲ್ಲಿ ಕೂಡಾ ಐದು ದಿನಗಳಲ್ಲಿ ಈ ಕಥಾಭಾಗ ಪ್ರಸ್ತುತಪಡಿಸಲಾಗುತ್ತಿದೆ ಎಂದರು.
ಸಾಮ, ದಾನ, ಭೇದ ಯಾವ ವಿಧಾನ ಪ್ರಯೋಗಕ್ಕೂ ರಾಮ ಸಿದ್ಧನಾಗಿದ್ದ. ಸಮುದ್ರವನ್ನು ವಿನೀತವಾಗಿ ಪ್ರಾರ್ಥಿಸಿ ಸೇತುವೆ ನಿರ್ಮಾಣ ಮಾಡುವುದರಿಂದ ಹಿಡಿದು ಸಮುದ್ರವನ್ನೇ ಬತ್ತಿಸಿ ಸೇತುವೆ ನಿರ್ಮಾಣಕ್ಕೂ ರಾಮ ಸಿದ್ಧನಾಗಿದ್ದ ಎಂದು ಹೇಳಿದರು.
ರಾಮಸೇತು ನಿರ್ಮಾಣಕ್ಕೆ ಮೂಲ ಆಂಜನೇಯ. ವೀರಾಧಿವೀರರನ್ನು ಸಂಹರಿಸಿ, ಲಂಕಾದಹನ ಮಾಡಿ, ರಾವಣನ ಎದೆ ನಡುಗಿಸಿ ಮರಳಿ ಬಂದ ಆಂಜನೇಯ ರಾಮಸೇತು ನಿರ್ಮಾಣಕ್ಕೆ ಮಾರ್ಗದರ್ಶಕನಾದ. ಇಂಥ ಮಹತ್ಕಾರ್ಯ ಸಾಧಿಸಿದ ಹನುಮಂತನಿಗೆ ಸೀತೆಗೆ ಸಮಾನವಾದುದನ್ನು ನೀಡುವುದು ರಾಮನ ಉದ್ದೇಶ. ರಾಮ- ಹನುಮಂತನ ಆಲಿಂಗನದ ಅದ್ವೈತದೊಂದಿಗೆ ಕಥೆ ಆರಂಭವಾಗುತ್ತದೆ. ರಾಮಾಲಿಂಗನ ಹನುಮಂತನ ಮಹತ್ಕಾರ್ಯಕ್ಕೆ ನೀಡಿದ ಉಡುಗೊರೆ. ಈ ಆಲಿಂಗನ ಸರ್ವಸ್ವದ ಸಂಕೇತ, ಸಾಮೀಪ್ಯದ ಪರಾಕಾಷ್ಠೆ. ಆನಂದದ ಅಲೆ ಈ ಅಪ್ಪುಗೆಯಲ್ಲಿ ಸಂಚಾರವಾಯಿತು ಎಂದು ವರ್ಣಿಸಿದರು.
ರಾಮಾಲಿಂಗನ ದುರ್ಲಭ. ಸೀತೆ, ಹನುಮಂತ, ಲಕ್ಷ್ಮಣನಿಗಷ್ಟೇ ಇದು ಸಾಧ್ಯ. ರಾಮಾಲಿಂಗನಕ್ಕಾಗಿ ಒಂದು ಯುಗ ಕಾದ ಋಷಿಗಳು ದ್ವಾಪರಯುಗದಲ್ಲಿ ಗೋಪಿಕೆಯರಾಗಿ ಬಂದು ಆಲಿಂಗನ ಪಡೆದರು ಎಂದು ನೆನಪಿಸಿದರು.
ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಡಾ.ಗಜಾನನ ಶರ್ಮಾ, ರಘುನಂದನ ಬೇರ್ಕಡವು, ಶ್ರೀಪಾದ ಭಟ್ ಕಡತೋಕ, ಶಂಕರಿ ಬಾಳ್ತಿಲ, ಸಾಕೇತ್ ಶರ್ಮಾ, ದೀಪಿಕಾ ಭಟ್, ಪೂಜಾ ಭಟ್, ಗಣೇಶ್ ಭಾಗ್ವತ್ ಗುಂಡ್ಕಲ್, ಪ್ರಜ್ಞಾನ್, ನಿರಂಜನ ಹೆಗಡೆ, ನೀರ್ನಳ್ಳಿ ಗಣಪತಿ, ಕೊರ್ಗಿ ಶಂಕರನಾರಾಯಣ ಶರ್ಮ ಮತ್ತಿತರರು ಸಂಗೀತ, ಚಿತ್ರಕಲೆ, ರೂಪಕ ಸೇವೆ ಸಲ್ಲಿಸಿದರು.
ರಾಮಕಥಾ ಸಮಿತಿ ಕಾರ್ಯಾಧ್ಯಕ್ಷ ಆರ್.ಜಿ.ಭಟ್, ಸಂಚಾಲಕ ಸುಬ್ರಾಯ ವಿ.ಭಟ್ ಕೊಣಾರೆ, ಪ್ರಧಾನ ಕಾರ್ಯದರ್ಶಿ ಎಸ್.ವಿ.ಹೆಗಡೆ, ಕಾರ್ಯದರ್ಶಿ ಟಿ.ಎಸ್.ಭಟ್, ಕುಮಟಾ ಹವ್ಯಕ ಮಂಡಲ ಅಧ್ಯಕ್ಷ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್.ಜಿ.ಹೆಗಡೆ ಮುಡಾರೆ. ಮುರೂರು-ಕಲ್ಲಬ್ಬೆ ವಲಯ ಅಧ್ಯಕ್ಷ ಎಲ್.ಆರ್.ಹೆಗಡೆ ಮತ್ತು ರಾಮಕಥಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *