ಒಗ್ಗಟ್ಟಿನ ಸಂದೇಶ ಸಾರಿದ 76 ನೇ ವರ್ಷದ ಸರ್ವಸದಸ್ಯರ ಮಹಾಸಭೆ

ಇತರೆ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) ಯ 76ನೇ ವರ್ಷದ ಸರ್ವಸದಸ್ಯರ ಮಹಾಸಭೆ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ , ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ ಎಲ್ಲಾ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತವಾಯಿತು. ಚುನಾವಣಾಧಿಕಾರಿ ರಾಮಭಟ್ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಉದ್ಘೋಷಿಸಿದರು.

ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಡಾ. ಗಿರಿಧರ ಕಜೆ, ಮಹಾಸಭೆಯ ಕಾರ್ಯಕ್ರಮಗಳಿಗೆ ಸಮಾಜದಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಗಳಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಬಲ ತುಂಬಲು 25 ವಿವಿಧ ಹವ್ಯಕ ವೇದಿಕೆಗಳಿಗೆ ಚಾಲನೆ ನೀಡಲಾಗಿದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಈ ಬಾರಿ ಚುನಾವಣೆಯ ಬದಲು, ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವಂತಾಗಿರುವುದು ಸಮಾಜದಲ್ಲಿ ಸಂಘಟನೆಯ ಶಕ್ತಿಯನ್ನು ಹಾಗೂ ಒಗ್ಗಟ್ಟನ್ನು ತಿಳಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿಕುಂದಿದ್ದು, ಅಂತಹ ಹೀನಮನಸ್ಕರ ಧ್ವನಿ ಕುಂದಿದೆ. ಅಂತಹ ಪ್ರಯತ್ನಗಳನ್ನು ಸಮಾಜ ಮೆಟ್ಟಿನಿಂತಿರುವುದಕ್ಕೆ ಈ ಅವಿರೋಧ ಆಯ್ಕೆಯೇ ಸ್ಪಷ್ಟನಿದರ್ಶನ ಎಂದರು.

ಕೆಲವರು ಹೆಸರಿಗಾಗಿ, ಫಲಕಗಳಲ್ಲಿ ತಮ್ಮ ಹೆಸರನ್ನು ಹಾಕಬೇಕು ಎಂದು ಕೋರ್ಟಿನ ಮೆಟ್ಟಿಲನ್ನು ಹತ್ತುತ್ತಾರೆ. ಆದರೆ ನಮ್ಮ ಕಾರ್ಯಕರ್ತರು ಹೆಸರಿಲ್ಲದೇ ಮಹಾಸಭೆಯ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣುತ್ತೇವೆ ಹಾಗೆಯೇ ಕೆಲವು ಹೆಸರು ಹೇಳಲು ಇಚ್ಛಿಸಿದ ದಾನಿಗಳು ಲಕ್ಷಾಂತರ ದಾನ ನೀಡುವುದನ್ನು ನೋಡುತ್ತಿದ್ದೇವೆ,ಇದು ಸ್ತುತ್ಯರ್ಹ ಎಂದರು. ಕಳೆದ ನಾಲ್ಕುವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಸಮಾಜಮುಖೀ ಕಾರ್ಯಗಳ ಪ್ರಗತಿಯ ಮಾಹಿತಿ ನೀಡಿದರು.

ಗಾಯತ್ರೀ ಮಹೋತ್ಸವ : ಹವ್ಯಕ ಮಹಾಸಭೆಯಿಂದ ಗಾಯತ್ರೀ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ ಗಾಯತ್ರಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸಂಪ ಕಾರ್ಯಕ್ರಮ ನಡೆಸಿಕೊಟ್ಟು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಲೆಕ್ಕಪತ್ರಗಳನ್ನು ಸರ್ವಸದಸ್ಯರ ಸಭೆಯಲ್ಲಿ ಮಂಡಿಸಿದರು.

ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ:

ಅಧ್ಯಕ್ಷರಾಗಿ ಡಾ. ಗಿರಿಧರ ಕಜೆ 5ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ
ಶ್ರೀಧರ ಜೆ ಭಟ್, ಕೆಕ್ಕಾರು ಹಾಗೂ
ಆರ್. ಎಂ. ಹೆಗಡೆ,ಬಾಳೇಸರ. ಪ್ರಧಾನ ಕಾರ್ಯದರ್ಶಿಯಾಗಿ
ಸಿಎ. ವೇಣುವಿಘ್ನೇಶ ಸಂಪ,
ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ ಹಾಗೂ ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ
ಕೃಷ್ಣಮೂರ್ತಿ ಎಸ್ ಭಟ್ ಆಯ್ಕೆಯಾದರು.

ನೂತನವಾಗಿ ಆಯ್ಕೆಯಾದ 15 ನಿರ್ದೇಶಕರು :

ಉತ್ತರ ಕನ್ನಡ – ರಾಮಚಂದ್ರ ಗಣೇಶ ಹೆಗಡೆ, ರಾಮಚಂದ್ರ ಎಮ್ ಹೆಗಡೆ, ಹಂಡ್ರಮನೆ ಗೋಪಾಲಕೃಷ್ಣ ಭಟ್,

ಬೆಂಗಳೂರು – ಶ್ರೀಧರ ಭಟ್ ಕೆಕ್ಕಾರು, ಡಾ ಗಿರಿಧರ ಕಜೆ, ಯು ಎಸ್ ಜಿ ಭಟ್, ಮೋಹನ ಭಾಸ್ಕರ ಭಟ್, ನಾರಾಯಣ ಭಟ್ ಹುಳೇಗಾರು, ರಮಾನಾಥ ಹೆಗಡೆ.

ಶಿವಮೊಗ್ಗ – ಬಾಲಸುಬ್ರಮಣ್ಯ ಕೆ, ಅಶೋಕ ಹೆಚ್ ಬಿ, ರಾಜಲಕ್ಷ್ಮೀ ದೇವಪ್ಪ,

ಕೊಡಗು – ಪುರುಷೋತ್ತಮ ಡಿ.ಐ , ಕಾಸರಗೋಡು – ಗೋವಿಂದ ಭಟ್ , ಹೊರರಾಜ್ಯ – ರಮಣ ಎಸ್ ಭಟ್

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ ಭಟ್, ಎಂ ಆರ್ ಹೆಗಡೆ ಬಾಳೆಸರ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್, ಸಾಲೆಕೊಪ್ಪ ಶ್ರೀಧರ ಭಟ್ ಹಾಗೂ ಚುನಾವಣಾಧಿಕಾರಿ ರಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಸಭೆಯ ಮಾಜಿ ಅಧ್ಯಕ್ಷರಾದ ಎಸ್ ಜಿ ಹೆಗಡೆ, ಕಲಸಿ ಶ್ರೀಧರ ಭಟ್ ಸೇರಿದಂತೆ ಹಿರಿಯ ಮಾಜಿ ಪದಾಧಿಕಾರಿಗಳು ಹಾಗೂ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ, ಕಾಸರಗೋಡು ಹಾಗೂ ಬೆಂಗಳೂರಿನ ನೂರಾರು ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *