ಸಂತೋಷವಾಗಿ ಸಾತ್ತ್ವಿಕವಾಗಿ ಸಕಾರಾತ್ಮಕವಾಗಿ ಅಮೃತಮಹೋತ್ಸವದಲ್ಲಿ ಭಾಗವಹಿಸೋಣ – ಶ್ರೀಸಂಸ್ಥಾನ

ಸುದ್ದಿ

ಬೆಂಗಳೂರು : ಸಮಾಜಪುರುಷ ಮೈಕೊಡವಿ ಮೇಲೇಳುವ ಕಾಲ ಈ ಹವ್ಯಕ ವಿಶ್ವಸಮ್ಮೇಳನ. ಹನೂಮಂತನ ಹನೂಮತ್ತ್ವವೂ ಪ್ರಕಟವಾಗಿದ್ದು ಒಮ್ಮೆ ಮಾತ್ರ ಅದು ಸಾಗರೋಲ್ಲಂಘನದ ಸಮಯ. ಹಾಗೆಯೇ ಹವ್ಯಕ ಸಮಾಜವು ತನ್ನ ಮಹತ್ತನನ್ನು ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ. ಅದು ಮೂರುದಿನಗಳ ಮಹೋನ್ನತ ಹಬ್ಬ. ಆ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯೂ ಭಾಗಿಯೂ ಆಗಬೇಕು. ಮಹಾನಗರದ ಮೂಲೆಮೂಲೆಯಿಂದ ಗುರಿಕ್ಕಾರರು ಬಂದು ಸೇರಿದ್ದೀರಿ. ನಿವೆಲ್ಲರೂ ತಮ್ಮ ವ್ಯಾಪ್ತಿಯ ಮನೆಗಳಿಗೆ ನಿಮಂತ್ರಣವನ್ನು ನೀಡಿ ಎಲ್ಲ ಆಪ್ತರಿಗೂ ಪ್ರೀತಿಯ ಆಮಂತ್ರಣವನ್ನು ಕೊಡಿ. ಎಂದು ಶ್ರೀಪೀಠದ ನೇರಪ್ರತಿನಿಧಿಗಳಾದ ಗುರಿಕ್ಕಾರರಿಗೆ ಅಪ್ಪಣೆಯಿತ್ತರು. ಅವರು ಬೆಂಗಳೂರಿನ ರಾಮಶ್ರಮದಲ್ಲಿ ನಡೆದ ಸಮಗ್ರ ಬೆಂಗಳೂರು ಮಂಡಲದ ಗುರಿಕ್ಕಾರರ ವಿಶೇಷ ಸಭೆಯಲ್ಲಿ ಆಶೀರ್ವಚನ ಅನುಗ್ರಹಿಸುತ್ತಿದ್ದರು.
ಬಾ ಎನ್ನುವುದು ಸಂಸ್ಕೃತಿ ಬರಬೇಡಿ ಹೋಗಬೇಡಿ ಎನ್ನುವುದು ವಿಕೃತಿ. ಅದು ನಮಗಲ್ಲ. ಸಮಾಜದ ಪ್ರತಿಯೊಬ್ಬರೂ ಈ ಮಹೋತ್ಸವದಲ್ಲಿ ಭಾಗವಹಿಸಬೇಕೆಂದು ಪೀಠವು ಕರೆಕೊಡುತ್ತಿದೆ. ಬೆಂಗಳೂರಿನ ಗುರಿಕ್ಕಾರರು ಮಾತ್ರವಲ್ಲ. ಸಮಗ್ರ ಗೋಕರ್ಣಮಂಡಲದ ಗುರಿಕ್ಕಾರರು ಈ ನಿಮಂತ್ರಣದ ಕಾರ್ಯವನ್ನು ಮಾಡಬೇಕು. ತಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ತೊಡಗಿಸಿಕೊಳ್ಳಬೇಕು. ಎಂದು ಕರೆನೀಡಿದರು.
ಇತ್ತೀಚಿನ ದಿನಗಳಲ್ಲಿ ಮಹಾಸಭೆಯು ಸಮಾಜೋತ್ಥಾನದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ತುಂಬಾ ಸಂತೋಷವನ್ನು ತಂದಿದೆ. ಮಹಾಸಭೆಯ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ಗಮನಿಸಿದ್ದೇವೆ. ನಿಜವಾದ ಗುರುಕೃಪೆಯಿಂದ ಇಂಥ ಸುಧಾರಣೆಯೆಂಬ ಬದಲಾವಣೆ ಉಂಟಾಗುತ್ತಿದೆ. ಇದು ಅನವರತ ವಾಗಿ ನಡೆಯಲಿ. ಅದಕ್ಕೆ ಈ ಸಮ್ಮೇಳನ ಮಹೋತ್ಸವಗಳು ಓಘವನ್ನು ಹೆಚ್ಚಿಸಲಿ. ನಾವೆಲ್ಲರೊಂದಾಗಿ ಸಾತ್ತ್ವಿಕವಾಗಿ ಸಂತೋಷವಾಗಿ ಸಕಾರಾತ್ಮಕವಾಗಿ ಭಾಗವಹಿಸೋಣ. ಶ್ರೀರಾಮಾದಿ ಸಕಲದೇವತಾಗಣ ಮತ್ತು ಗುರುಪರಂಪರೆಯ ಪೂರ್ಣಾನುಗ್ರಹ ಮಹಾಸಭೆಯ ಮೇಲಿದೆ.ಎಂದು ಹರಸಿದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಅಖಿಲಹವ್ಯಕಮಹಾಸಭೆಯ ಅಧ್ಯಕ್ಷರಾದ ಗಿರಿಧರ ಕಜೆಯವರು ಮಾತನಾಡಿ, ಮಹಾಸಭೆಗೆ ತನ್ನ ಗುರಿ ಸ್ಪಷ್ಟವಾಗಿದೆ. ಅದನ್ನು ತಲುಪಲು ಶ್ರೀಪೀಠದ ಗುರಿಕ್ಕಾರರ ಸಹಕಾರದ ಅಗತ್ಯ ಇದೆ. ಅಮೃತಮಹೋತ್ಸವದ ಈ ಹೊಸ್ತಿಲಿನಲ್ಲಿ ಎಲ್ಲ ಗುರಿಕ್ಕಾರಬಂಧುಗಳೂ ತಮ್ಮ ಸಂಪರ್ಕದ ಎಲ್ಲ ಶಿಷ್ಯರ ಮನೆಗಳಿಗೂ ನಿಮಂತ್ರಣವನ್ನು ತಲುಪಿಸಬೇಕು. ತಮ್ಮ ಆಪ್ತ ಹವ್ಯಕೇತರನ್ನೂ ಪ್ರೀತಿಯಿಂದ ಕರೆಯಬೇಕು. ಎಂದು ಕೇಳಿಕೊಂಡರು ಮತ್ತು ಸಂಪೂರ್ಣ ಸಮ್ಮೇಳನ-ಮಹೋತ್ಸವದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರು. ಮತ್ತು ಮಹಾಸಭೆಯ ಮತ್ತು ಹವ್ಯಕ ಸಮಾಜದ ಇತಿಹಾಸವನ್ನು ಸ್ಥೂಲವಾಗಿ ಬಿಚ್ಚಿಟ್ಟರು. ಸಮಾಜವನ್ನು ಇಡಿಯಾಗಿ ತೆಗೆದುಕೊಂಡುಹೋಗುವುದು ನಮ್ಮ ಕರ್ತವ್ಯ. ಕೆಲವು ಕ್ಷುಧ್ರಶಕ್ತಿಗಳು ವಿಘಟನೆಯ ಪ್ರಯತ್ನವನ್ನು ಮಾಡುತ್ತಿವೆ. ಅದನ್ನು ಮೀರಿನಿಂತು ನಾವು ಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಶ್ರೀಗುರುದೇವತೆಗಳು ಅನುಗ್ರಹಿಸಬೇಕು ಮತ್ತು ಸಮಾಜವು ಸ್ಪಂದಿಸಬೇಕು ಎಂದು ಕೇಳಿಕೊಂಡರು.

 

ಉತ್ತರ/ದಕ್ಷಿಣ ಬೆಂಗಳೂರು ಮಂಡಲದ ಪದಾಧಿಕಾರಿಗಳು, ಮಹಾಮಂಡಲದ ಪ್ರತಿನಿಧಿಗಳು, ಶಾಸನತಂತ್ರದ ಪ್ರಮುಖರೂ ಉಪಸ್ಥಿತರಿದ್ದರು. ಹವ್ಯಕ ಮಹಾಸಭೆಯ ಕಾರ್ಯದರ್ಶಿ ವೇಣುವಿಘ್ನೇಶ ಸಂಪ ಮಾತನಾಡಿ ಶ್ರೀಸಂಸ್ಥಾನದವರು ಒಂದು ಲಕ್ಷರೂಪಾಯಿ ಸ್ವರ್ಣಮಂತ್ರಾಕ್ಷತೆ ನೀಡಿ ಹರಸಿದ್ದನ್ನು ಉಲ್ಲೇಖಿಸಿದರು. ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಶ್ರೀಸಂಸ್ಥಾನದವರಿಗೆ ನಿಮಂತ್ರಣಪತ್ರಿಕೆಯನ್ನು ಸಮರ್ಪಿಸಿದರು.

Author Details


Srimukha

Leave a Reply

Your email address will not be published. Required fields are marked *