ಒಂದು ದಿನ ಒಬ್ಬ ವ್ಯಕ್ತಿ ಒಂದು ಬಟ್ಟೆ ಅಂಗಡಿಗೆ ಬರುತ್ತಾನೆ. ಅದು ದೀಪಾವಳಿಯ ಸಮಯ. ಅವನಿಗೆ ಒಂದು ಸೀರೆ ತೆಗೆದುಕೊಳ್ಳಬೇಕಿತ್ತು. ಅಂಗಡಿಯಲ್ಲಿರುವ ಎಲ್ಲ ಸೀರೆಗಳನ್ನು ನೋಡಿ ಕೊನೆಗೆ ಒಂದು ಸೀರೆ ಆಯ್ಕೆ ಮಾಡಿಕೊಳ್ಳುತ್ತಾನೆ. ಅದಕ್ಕೆ ಬೆಲೆ ಎಷ್ಟು ಎಂದು ಕೇಳಿದಾಗ, ಅಂಗಡಿಯವನು-
“ಎರಡು ಸಾವಿರ ರೂಪಾಯಿ” ಎಂದು ಹೇಳುತ್ತಾನೆ.
ಆಗ ಇವನು-
“ಒಂದು ಸಾವಿರಕ್ಕೆ ಕೊಡುತ್ತೀರಾ?” ಎಂದು ಕೇಳುತ್ತಾನೆ.
ಅಂಗಡಿಯವನು ಇವನು ಈ ದಿನದ ಮೊದಲ ಗಿರಾಕಿ ಎಂದು ಆಲೋಚಿಸಿ ಆಯ್ತು ಎನ್ನುತ್ತಾನೆ.
ಆಗ ಅವನು-
“೫೦೦ಕ್ಕೆ ಕೊಡುತ್ತೀರಾ?” ಎನ್ನುತ್ತಾನೆ.
ಅಂಗಡಿಯವನು ಸಮಾಧಾನದಿಂದಲೇ ಆಯ್ತು ಎನ್ನುತ್ತಾನೆ.
ಆಗ ಇವನು-
“೨೫೦ ಕ್ಕೆ ಕೊಡುತ್ತೀರಾ?”ಎನ್ನುತ್ತಾನೆ.
ಅಂಗಡಿಯವನು ತಲೆ ಚಿಟ್ಟು ಹಿಡಿದು ಇವನು ಒಮ್ಮೆ ಇಲ್ಲಿಂದ ಹೋದರೆ ಸಾಕು ಎಂದು ಏನೂ ಕೊಡುವುದು ಬೇಡ; ಹಾಗೇ ಅದನ್ನು ಕೊಂಡು ಹೋಗು ಎಂದು ಹೇಳಿ, ಕೊಟ್ಟು, ಅವನನ್ನು ಕಳಿಸುತ್ತಾನೆ.
ಹೌದು, ಜೀವನದಲ್ಲಿ ನಮಗೆ ಎಷ್ಟು ಇದ್ದರೂ ಸಾಕು ಎನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಬೇಕು ಅನಿಸುತ್ತದೆ.
ಒಮ್ಮೆ ಭರ್ತೃಹರಿಯ ಹತ್ತಿರ ಒಬ್ಬ ರಾಜ-
“ನಿನ್ನ ಹತ್ತಿರ ಏನುಂಟು! ನಿನೋಬ್ಬ ಬಿಕಾರಿ!” ಎನ್ನುತ್ತಾನೆ.
ಆಗ ಭರ್ತೃಹರಿ-
“ನಾನು ಕಾವಿ ಬಟ್ಟೆ ಧರಿಸಿದ್ದರೆ ನೀನು ಪೀತಾಂಬರ ಧರಿಸಿದ್ದೀಯ; ನಿನ್ನ ಹತ್ತಿರ ಅಪಾರ ಸಂಪತ್ತಿರಬಹುದು; ಆದರೆ ನನ್ನ ಹತ್ತಿರ ನೆಮ್ಮದಿ ಇದೆ; ನಿನಗೆ ಇನ್ನಷ್ಟು ಬೇಕು ಎಂದಿದೆ; ನನಗೆ ಇನ್ನು ಬೇಡ ಎನಿಸಿದೆ; ಹಾಗಾಗಿ ನಾನು ಶ್ರೀಮಂತ ನೀನೇ ಬಿಕಾರಿ” ಎನ್ನುತ್ತಾನೆ.
ಸಾಕು ಎಂದವ ಸಂನ್ಯಾಸಿ, ಬೇಕು ಎಂದವ ಸಂಸಾರಿ ಎನ್ನುತ್ತಾನೆ. ಈ ಬೇಕು ಸಾಕಾದಾಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ.