ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದತ್ತು ಸ್ವೀಕರಿಸಿದ ಕುರ್ನಾಡು ಗ್ರಾಮದ ಗದ್ದೆಯಲ್ಲಿ ಭತ್ತದ ಕೊಯ್ಲು ನೆರವೇರಿಸಿತು.
ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್., ಸಹಶಿಬಿರಾಧಿಕಾರಿ ಪ್ರವೀಣ್ ಪಿ. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ಅವರ ನೇತೃತ್ವದಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರು ಶುಕ್ರವಾರ ಬೆಳಗ್ಗೆ ಗದ್ದೆಗಿಳಿದು ಕೊಯ್ಲು ಆರಂಭಿಸಿದರು.
ಅರ್ಧ ಎಕರೆ ಗದ್ದೆಯಲ್ಲಿ ಎಂ.ಆರ್.೪ ಮತ್ತು ಭದ್ರಾ ತಳಿಯನ್ನು ಬೆಳೆಯಲಾಗಿತ್ತು. ವಿದ್ಯಾರ್ಥಿಗಳೇ ನೇಜಿ ನೆಟ್ಟಿದ್ದರು. ಆಗಾಗ ಗೊಬ್ಬರ ನೀಡಿದ್ದರು. ಸಂಸ್ಥೆಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಗೊಬ್ಬರ ಒದಗಿಸಿದ್ದರು.
ಭತ್ತದ ನಡುವೆ ಇದ್ದ ಕಳೆಯನ್ನು ಕಿತ್ತು, ಬೆಳೆಯನ್ನು ಪಡೆಯುವ ಆಶಯದೊಂದಿಗೆ ಕೆಲಸ ಮುಂದುವರಿದಿತ್ತು. ಪರೀಕ್ಷೆಯ ಸಮಯ. ಓದುವ ಮತ್ತು ಬರೆಯುವ ನಡುವೆ ಶುಕ್ರವಾರ ಗದ್ದೆಯಲ್ಲಿ ಬಿಸಿಲನ್ನು ಲೆಕ್ಕಿಸದೇ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳು ಶ್ರಮವಹಿಸಿದರು.
ಇಲ್ಲಿನ ೫ ಸೇರು ಭತ್ತವನ್ನು ನಮ್ಮ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸಮರ್ಪಿಸಲಾಗುವುದು ಮತ್ತು ಉಳಿದ ಬೆಳೆಯನ್ನು ನಮ್ಮ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಹಾಗೂ ಬಿಸಿಯೂಟ ಯೋಜನೆಗೆ ಬಳಸಲಾಗುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ.