ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಶಂಕರಶ್ರೀ ವೇದಪಾಠಶಾಲೆ ಸಮಿತಿ, ಭಾರತೀ ಎಜುಕೇಶನ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ 3ನೇ ವರ್ಷದ ಶಂಕರಶ್ರೀ ವೇದಪಾಠಶಾಲೆ ಮತ್ತು ಪರಂಪರಾ ಶಿಬಿರವು ವೈಶಾಖ ಶುದ್ಧ ಬಿದಿಗೆಯಂದು (19-04-2026) ಆರಂಭಗೊಂಡಿತು.
ಮಕ್ಕಳ ಚಿಕಿತ್ಸೆ ತಜ್ಞರಾದ ಡಾ. ಸದಾಶಿವ ರಾವ್ ಉದ್ಘಾಟಿಸಿ ವೇದದ ಮಹತ್ತ್ವ, ಪರಂಪರೆಯ ಉಳಿಕೆ, ಕರ್ಮಪ್ರಧಾನ ಜೀವನದ ಆವಶ್ಯಕತೆ, ಫಲಾಪೇಕ್ಷೆ ಇಲ್ಲದೆ ಪರಂಪರೆಯನ್ನು ರಕ್ಷಿಸಬೇಕಾದುದರ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಮುರಲಿಮೋಹನ ಚೂಂತಾರು ಮಾತನಾಡಿ ‘ನ್ಯಾನೋ ಕುಟುಂಬ, ಸಂಬಂಧ ಕುಸಿತ ತಡೆಗಾಗಿ ಪರಂಪರಾ ಶಿಬಿರದ ಆವಶ್ಯಕತೆ ಸಮಯೋಚಿತ ಯೋಜನೆಯಾಗಿದೆ. ಇದರ ಪ್ರಯೋಜನ ಸಮಾಜಕ್ಕೆ ಸಿಗಲಿ’ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿರಾದ ಡಾ. ರಾಮಕೃಷ್ಣ ಭಟ್ ಕೂಟೇಲು ಅವರು ಮಾತನಾಡಿ, ‘ಅನುಷ್ಠಾನವಿಮುಖತೆ ಆಗಕೂಡದು. ಮೌಢ್ಯ ಅಡ್ಡಿಯಾಗಬಾರದು. ಸಮಾಜ ಜಾಗೃತವಾಗುವುದು ಅಗತ್ಯ. ಶಿಬಿರದ ಪ್ರಯೋಜನ ಮನೆ ಮನೆಗಳಲ್ಲಿ ಅನುರಣಿಸಲಿ. ಅದಕ್ಕಾಗಿ ಸರ್ಕಾರದ ನಿಯಮಾನುಸಾರ ವಿ.ವಿ.ವಿ ಮೂಲಕ ಪ್ರಮಾಣಪತ್ರ ಕೊಡುಗೆ ಅತ್ಯಂತ ಉಪಯುಕ್ತ’ ಎಂದರು.
ವಿದ್ವಾಂಸ ಡಾ. ವಿನಾಯಕ ಭಟ್ ಗಾಳಿಮನೆ ಅವರು ಮಾತನಾಡಿ ಪರಂಪರಾ ಶಿಬಿರದ ಉದ್ದೇಶ-ಪಾಠ್ಯ-ಆವಶ್ಯಕತೆ-ಅನಿವಾರ್ಯತೆ ಹಾಗೂ ಸಂಧ್ಯಾವಂದನೆಯ ಮಹತ್ತ್ವ-ಕರ್ತವ್ಯ-ಪ್ರಯೋಜನ-ಹೊಣೆಗಾರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು.
ದ. ಕ. ಕಾಸರಗೋಡು ಬ್ರಾಹ್ಮಣ ಮಹಾಜನಸಭಾ ಉಪಾಧ್ಯಕ್ಷ ಎಮ್. ಟಿ. ಭಟ್, ನಿಡುಗಳ ಕೃಷ್ಣ ಭಟ್, ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಸಿ., ಭಾರತೀ ಸಹಕಾರಿ ನಿರ್ದೇಶಕ ಕೆ ಸುಬ್ರಹ್ಮಣ್ಯ ಶಾಸ್ತ್ರಿ, ರುದ್ರ ಸಮಿತಿಯ ಡಾ. ರಾಜೇಂದ್ರಪ್ರಸಾದ್, ವೇದಪಾಠಶಾಲೆ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಕಾಶೀಮಠ ಉಪಸ್ಥಿತರಿದ್ದರು.
ಮುಖ್ಯಗುರು ಅಮೈ ಶಿವಪ್ರಸಾದ ಭಟ್ ಪ್ರಸ್ತಾಪಿಸಿದರು. ಭಾರತೀ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಸ್ವಾಗತಿಸಿ, ಶಂಕರಶ್ರೀ ವೇದಪಾಠಶಾಲೆ ಸಮಿತಿ ಸಂಚಾಲಕ ಬಾಲಸುಬ್ರಹ್ಮಣ್ಯ ಕಬೆಕ್ಕೋಡು ವಂದಿಸಿದರು. ಕಾರ್ಯದರ್ಶಿ ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.
ಗಣಪತಿ ಹವನ, ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗೆ ಮಹಾಮಂಗಳಾರತಿ, ವೇದಘೋಷ ನಡೆಯಿತು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಮಂಗಳೂರು ಹವ್ಯಕ ಮಂಡಲ, ಹವ್ಯಕ ಸಭಾ, ದ.ಕ. ಕಾಸರಗೋಡು ಹವ್ಯಕಮಹಾಜನಸಭಾ, ಭಾರತೀ ಸೌಹಾರ್ದ ಸಹಕಾರಿ, ರುದ್ರ ಸಮಿತಿ, ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳು ಸಹಕಾರ ನೀಡಿದ್ದವು.