ಕಾರವಾರ/ ಗೋಕರ್ಣ: ಭಾರತೀಯ ಪರಂಪರೆಯಲ್ಲಿ ನಿದ್ರೆಯೂ ದೈವಸ್ವರೂಪ. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ನಡೆದು ಆತ್ಮಸಾಕ್ಷಿ ಒಪ್ಪುವಂಥ ಸತ್ಕಾರ್ಯಗಳನ್ನು ಮಾಡುವ ಮೂಲಕ ನಿದ್ರಾದೇವಿಯಿಂದ ಸುಖನಿದ್ದೆಯೆಂಬ ವರ ಪಡೆಯೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಸಲಹೆ ಮಾಡಿದರು.
ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯಡಿ ‘ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ’ ಎಂಬ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಪ್ತಶತಿಯ “ಯಾದೇವಿ ಸರ್ವಭೂತೇಶು ನಿದ್ರಾರೂಪೇಣ ಸಂಸ್ಥಿತಾ..” ಎಂಬ ಸ್ತೋತ್ರ ನಮ್ಮ ಪರಂಪರೆ ನಿದ್ರೆಗೆ ನೀಡಿರುವ ಮಹತ್ವವನ್ನು ಸಾರುತ್ತದೆ. ದೇವರು ಯಾವ ರೀತಿ ಆನಂದಮಯ, ಸುಖಸಾಗರವೋ ಅಂತೆಯೇ ನಿದ್ದೆ ಕೂಡಾ ಸುಖಮಯ, ಆನಂದಕಾರಕ. ನಿದ್ದೆಯಲ್ಲಿ ಸುಖವಿದೆ. ನಿದ್ರಾಹೀನತೆ ದುಃಖಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಧ್ಯಾನ, ತಪಸ್ಸಿಂದ ಸಾಧಿಸುವಂಥ ಮೈಮರೆಯುವಿಕೆ ನಿದ್ದೆಯಿಂದ ಪ್ರಾಪ್ತವಾಗುತ್ತದೆ. ದಣಿದ ದೇಹ- ಮನಸ್ಸಿಗೆ ಚೈತನ್ಯಶಕ್ತಿಯನ್ನು ಪ್ರತಿ ದಿನವೂ ತುಂಬುವ ನಿದ್ದೆಗೆ ಚಿಕಿತ್ಸಕ ಗುಣವೂ ಇದೆ. ನಿದ್ದೆಯೂ ಒಂದರ್ಥದಲ್ಲಿ ದೇವರ ಪೂಜೆಗೆ ಸಮ. ನಿದ್ರಾಸ್ಥಳ ಪೂಜಾಸ್ಥಳದಷ್ಟೇ ಪವಿತ್ರ. ನಮ್ಮ ಜೀವನದ ಸುಖ- ದುಃಖ, ಬಲಾಬಲ, ಪುರುಷತ್ವ- ನಪುಂಸಕತ್ವ, ಜ್ಞಾನ- ಅಜ್ಞಾನ, ಬದುಕು ಮತ್ತು ಮರಣ ಎಲ್ಲಕ್ಕೂ ನಿದ್ದೆ ಕಾರಣ ಎಂಬ ಉಲ್ಲೇಖ ಚರಕ ಸಂಹಿತೆಯಲ್ಲಿದೆ. ಅಕಾಲ ನಿದ್ದೆ ನಮ್ಮ ಆಯಸ್ಸು ಮತ್ತು ಸುಖಕ್ಕೆ ಮಾರಕ ಎಂದು ಬಣ್ಣಿಸಿದರು.
ನಿದ್ರಾಹೀನತೆ ಬದುಕಿನಲ್ಲಿ ಸಹನೆ ನಾಶಕ್ಕೆ, ಕೋಪ ಮತ್ತು ಮರೆವು ಹೆಚ್ಚಳಕ್ಕೆ ಗ್ರಹಿಕೆ ಸಾಮಥ್ರ್ಯ ಕುಂದಲು ಕಾರಣವಾಗುತ್ತದೆ. ದೇಹಕ್ಕೆ ಅನ್ನ ಇದ್ದಂತೆ ಮನಸ್ಸಿಗೆ ನಿದ್ದೆ. ಆಹಾರಕ್ಕೆ ಪಥ್ಯವಿದ್ದಂತೆ ನಿದ್ದೆಗೂ ಇರುವ ಪಥ್ಯ ಪಾಲಿಸುವ ಮೂಲಕ ಸುಖನಿದ್ದೆ ನಮ್ಮದಾಗಿಸಿಕೊಳ್ಳೋಣ ಎಂಬ ಕಿವಿಮಾತು ಹೇಳಿದರು.
ಪ್ರಮುಖ ಉಪನ್ಯಾಸ ನೀಡಿದ ಮಂಗಳೂರಿನ ಖ್ಯಾತ ಮನೋವೈದ್ಯ ಡಾ.ಅನಿಲ್ ಕಾಕುಂಜೆ, “ಶಾರೀರಿಕ ಆರೋಗ್ಯಕ್ಕೆ ನೀಡುವಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡುವುದು ಅಗತ್ಯ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಮಾನಸಿಕ ಸಮಸ್ಯೆ, ಖಿನ್ನತೆ, ಉದ್ವೇಗ, ಆತಂಕ, ದುಶ್ಚಟಗಳು, ಅತಿಕ್ರಿಯಾಶೀಲತೆ, ಸಮಸ್ಯೆಗಳು, ಮರೆವು ಕಾಯಿಲೆಗಳು ನಿದ್ದೆಗೆ ಮಾರಕ” ಎಂದು ವಿವರಿಸಿದರು.
ಸ್ವಸ್ಥ ಮನಸ್ಸಿಗೆ ಮಗುವಿನಂದ ಸ್ವಚ್ಛಂದ ನಿದ್ದೆ ಅಗತ್ಯ. ನಿಗದಿತ ಸಮಯಕ್ಕೆ ಮಲಗುವುದು ಮತ್ತು ಏಳುವುದು, ಕಾಫಿ/ಚಹಾ ಆಲ್ಕೋಹಾಲ್ ಸೇವನೆ ನಿಯಂತ್ರಿಸುವುದು, ರಾತ್ರಿ ಹಾಲು ಕುಡಿಯುವುದು, ಚಾಮೋಲಿನ್ ಚಹಾ, ಬಾಳೆಹಣ್ಣಿನ ಚಹಾ ಸೇವನೆ ರೂಢಿಸಿಕೊಳ್ಳುವುದು, ಟಿವಿ ಮೊಬೈಲ್ ಬಳಕೆಗೆ ಕಡಿವಾಣ, ಧೂಮಪಾನದಂಥ ಚಟಗಳಿಂದ ದೂರ ಇರುವುದು ಮುಂತಾದ ನಿಯಮಗಳನ್ನು ಪಾಲಿಸುವ ಮೂಲಕ ಸುಖನಿದ್ದೆ ನಮ್ಮದಾಗಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಜೀವನದ ಮೂರನೇ ಒಂದಂಶ ನಿದ್ದೆಯಲ್ಲಿ ಕಳೆಯುತ್ತೇವೆ. ಉಳಿದ ಎರಡು ಅಂಶ ನಿದ್ದೆಯನ್ನು ಅವಲಂಬಿಸಿದೆ ಎಂದು ನಿದ್ದೆಯ ಮಹತ್ವವನ್ನು ವಿವರಿಸಿದರು.
ವಿವಿವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ, ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಪ್ರಾಚಾರ್ಯ ಗುರುಮೂರ್ತಿ ಮೇಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಶ್ರೀಧರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಚಾರ್ಯರಾದ ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು.