ನೃತ್ಯಾರಾಧಕಿ ಸುಪ್ರೀತಾ

ಅಂಕುರ

 

ದೇವಾನಾಮಿದಮಾಮನಂತಿ ಮುನಯಃ ಕಾಂತಂ ಕ್ರತುಂ ಚಾಕ್ಷುಷಮ್ |
ರುದ್ರೇಣಾಭಿಮುಖಕ್ರತೌವ್ಯತಿರಕರೇ ಸ್ವಾಂಗೇ ವಿಭಕ್ತಂ ವಿಧಾ ||
ತ್ರೈಗುಣ್ಯೋದ್ಭವಮತ್ರಲೋಕಚರಿತಂ ನಾನಾರಸಂದೃಶ್ಯತೇ |
ನಾಟ್ಯಂ ಭಿನ್ನರುಚಿರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ ||
ಎಂಬುದಾಗಿ ನೃತ್ಯವನ್ನು ತನ್ನ ಮಾಲವಿಕಾಗ್ನಿಮಿತ್ರ ಎಂಬ ನಾಟಕದಲ್ಲಿ ಕವಿಕುಲಗುರುವಾದ ಕಾಳಿದಾಸನು ಹಾಡಿಹೊಗಳಿದ್ದಾನೆ. ಅಡವು,ಮುದ್ರೆ,ಆಂಗಿಕಾಭಿನಯ,ಕುಡಿ-ಕಡೆ-ಕಿಡಿನೋಟಗಳು, ಆಭರಣಗಳು, ನೂಪುರದ ನಿನಾದ, ಸಂಗೀತದೊಂದಿಗಿನ ಸಂಬಂಧ, ಜತಿಗಳ ಜೊತೆಗಿನ ಒಡನಾಟದಿಂದ ಪರಿಪಕ್ವವಾದ ನೃತ್ಯವು ಎಂತಹವರನ್ನೇ ಆದರೂ ತನ್ನ ಒಡಲಲ್ಲಿ ಸೆಳೆದಿಟ್ಟು ಅಲೆ-ಅಲೆಯಾಗಿ ಒಳಗಿಳಿಯುತ್ತದೆ.

ನಾಟ್ಯದೇವತೆಯಾದ ಶಿವನ ಆರಾಧನೆಯು ನೃತ್ಯದಿಂದಲೂ ಸಾಧ್ಯ. ತನ್ನ ಆರನೇ ವಯಸ್ಸಿನಲ್ಲಿ ನಾಟ್ಯಾರಾಧೆಯನ್ನು ಆರಂಭಿಸಿದ ಉದಯೋನ್ಮುಖ ಪ್ರತಿಭೆ ಸುಪ್ರೀತಾ.ಕೆ.ಎಮ್. ಈಕೆ ಗುರಿಪಳ್ಳ,ಉಜಿರೆ,ಬೆಳ್ತಂಗಡಿ ಮೂಲದವರಾದ ಪ್ರಸ್ತುತ ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ಶ್ರೀಯುತ ಕೇಶವ ಪ್ರಸಾದ್.ಎಮ್.ಎಸ್ ಹಾಗು ಶ್ರೀಮತಿ ನಿವೇದಿತಾ.ಕೆ. ಪ್ರಸಾದ್ ಇವರ ಸುಪುತ್ರಿ. ಕಸ್ತೂರಿನಗರದ Presidency schoolನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಸುಪ್ರೀತಾ ತನ್ನ ಬಾಲ್ಯದಿಂದಲೇ ನೃತ್ಯಕ್ಕೆ ತನ್ನನ್ನು ಅರ್ಪಿಸಿಕೊಂಡವಳು. ತನ್ನ ಆರನೇ ವಯಸ್ಸಿನಲ್ಲಿ ವಿದುಷೀ ವಿದ್ಯಾಮುರಳಿಯವರಲ್ಲಿ ಕಲಾಕ್ಷೇತ್ರ ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಆರಂಭಿಸಿದ ಈಕೆ ಪ್ರಕೃತ ವಿದುಷೀ ವಿದ್ಯಾಮುರಳಿ ಹಾಗೂ ಕೃಪಾ ರಾಮಚಂದ್ರನ್ ಇವರ ಗರಡಿಯಲ್ಲಿ ಪಳಗುತ್ತಿದ್ದಾಳೆ.


ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಕನ್ನಡ-ಸಂಸ್ಕೃತಿ ವಿಭಾಗದ ಸಂಯೋಜನೆಯಿಂದ ನಡೆದ ದಸರಾ ಉತ್ಸವ, ಕೇರಳದಲ್ಲಿ ನಡೆದ ಆಂಚಲ್ ತಿರುನಾಳ್ ಉತ್ಸವ(ನೃತ್ಯಸಂಧ್ಯಾ) ಸ್ವಸ್ತಿಕ್ ನೃತ್ಯವೈಭವ, Melange Academy ವತಿಯಿಂದ ನಡೆಸಲಾದ ಭರತನಾಟ್ಯಮ್ Melange Expression ದ್ವಿತೀಯ ಬಹುಮಾನ, ಬಾಲಪ್ರತಿಭಾ ಉತ್ಸವದಲ್ಲಿ ದ್ವಿತೀಯ ಬಹುಮಾನ, Presidency’s got talent ನಲ್ಲಿ ತೃತೀಯ ಬಹುಮಾನ ಹೀಗೆ ಹಲವಾರು ಬಹುಮಾನಗಳನ್ನು ಪಡೆದಿರುತ್ತಾಳೆ. ಅಷ್ಟಲ್ಲದೇ ಸಾಮಾಜಿಕ ಕಳಕಳಿಯಿರುವ ಈಕೆ Save environment, save girl child, save water, save earth, and No smoking ಮುಂತಾದ ಜನಜಾಗೃತಿಗಾಗಿ ನೃತ್ಯವನ್ನು ಬಳಸಿಕೊಂಡಿರುವುದು ಅವಳೊಳಗಿರುವ ಸಮಾಜ ಸೇವೆಯ ಆಸಕ್ತಿಗೆ ಉತ್ತಮ ನಿದರ್ಶನ.
ಆಂಜನೇಯ ಸ್ವಾಮಿ ದೇವಾಲಯ, ನಾಗದೇವಿ ದೇವಾಲಯ, ಸೀತಾರಾಮ ದೇವಿ ದೇವಾಲಯ, ಮಾರ್ಗಶೀರ್ಷೋತ್ಸವ, ಶ್ರೀ ರಾಘವೇಂದ್ರ ಸ್ವಾಮಿಗಳ 348 ನೇ ವಾರ್ಷಿಕ ಆರಾಧನಾ ಮಹೋತ್ಸವ ಮುಂತಾದ ಸಂದರ್ಭದಲ್ಲಿ ದೇವತಾ ಸಾನ್ನಿಧ್ಯಗಳಲ್ಲಿ ಹಲವಾರು ಬಾರಿ ನರ್ತಿಸಿರುವ ಸುಪ್ರೀತಾ 70 ಕ್ಕೂ ಹೆಚ್ಚು ವೇದಿಕೆಗಳನ್ನು ತನ್ನ ನೃತ್ಯದಿಂದ ಅಲಂಕರಿಸಿರುತ್ತಾಳೆ.
ಭರತನಾಟ್ಯದಲ್ಲಿ ನಾಲ್ಕನೇ ವರ್ಷದ ಡಿಪ್ಲೊಮೊವನ್ನು ಪೂರೈಸಿರುವ ಈಕೆ ಪ್ರಸ್ತುತ 5ನೇ ವರ್ಷದ ಡಿಪ್ಲೊಮೊವನ್ನು ಅಭ್ಯಸಿಸುತ್ತಿದ್ದಾಳೆ. ಇಷ್ಟಲ್ಲದೇ ಕಾದಂಬರಿಗಳನ್ನು ಓದುವುದು,ಬಾಸ್ಕೇಟ್ ಬಾಲ್ ಹಾಗೂ ಬಾಟ್ಮಿಂಟನ್ ಆಡುವುದು, ಚಿತ್ರಬಿಡಿಸುವುದು ಸುಪ್ರೀತಾಳ ಹವ್ಯಾಸಗಳು.
ಹಲವಾರು ನೃತ್ಯಪ್ರಕಾರಗಳನ್ನು ಕಲಿತು ತನ್ನ ಮುಂದಿನ ಜೀವನದಲ್ಲಿ ಅದ್ಭುತ ನೃತ್ಯಕಲಾವಿದೆಯಾಗಬೇಕು ಎಂಬ ಸುಪ್ರೀತಾಳ ಹೆಬ್ಬಯಕೆಯು ಸಾಕಾರಗೊಳ್ಳಲಿ, ಸುಪ್ರೀತಾಳ ನಾಟ್ಯಾರಾಧಾನೆಯಿಂದ ತಾಂಡವಪ್ರಿಯನಾದ ಶರ್ವನು ಸುಪ್ರೀತನಾಗಲಿ ಎಂದು ಹಾರೈಸುತ್ತೇವೆ.

 

Author Details


Srimukha

Leave a Reply

Your email address will not be published. Required fields are marked *