ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನಿಗೆ ಈರ್ವರು ಮಕ್ಕಳು. ಆ ವ್ಯಕ್ತಿ ಕಳ್ಳತನ, ಕುಡಿಯುವುದು, ವ್ಯಭಿಚಾರ ಇತ್ಯಾದಿ ಎಲ್ಲ ದುರ್ಗುಣಗಳನ್ನು ಹೊಂದಿದ್ದನಲ್ಲದೇ ಪ್ರತಿದಿನ ಕುಡಿದು ಬಂದು ಹೆಂಡತಿ ಮಕ್ಕಳನ್ನು ಹಿಂಸಿಸುತ್ತಿದ್ದ. ಸಮಾಜದಲ್ಲಿ ಕೆಟ್ಟವನೆನಿಸಿಕೊಂಡಿದ್ದ. ಅವನ ಇಬ್ಬರು ಮಕ್ಕಳೂ ಒಂದೇ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಓದಿ ಒಂದೊಂದೇ ತರಗತಿ ಓದುತ್ತಾ ದೊಡ್ಡವರಾದರು, ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತಿದ್ದರೂ, ಒಂದೇ ಮನೆಯಲ್ಲಿ ಒಟ್ಟಿಗೇ ವಾಸಿಸುತ್ತಿದ್ದರೂ, ಅವರ ಗುಣಗಳಲ್ಲಿ ತುಂಬಾ ಭಿನ್ನತೆಯಿತ್ತು. ಮೊದಲ ಮಗ ತಂದೆಯಂತೆಯೇ ದುರ್ಗುಣಯಾಗಿದ್ದರೆ, ಎರಡನೆಯವನು ಸದ್ಗುಣಿಯಾಗಿ ಎಲ್ಲರಿಂದಲೂ ಪ್ರಶಂಸೆ ಪಡೆದು ಸಮಾಜಸೇವಕನಾಗುತ್ತಾನೆ.
ಒಮ್ಮೆ ಇವರಿಬ್ಬರೂ ಒಬ್ಬ ಸಂತನನ್ನು ಭೇಟಿಯಾಗುತ್ತಾರೆ. ಆ ಸಂತ ಅವರಿಬ್ಬರನ್ನೂ “ನೀವು ಈ ರೀತಿಯಾಗಿರಲು ಸ್ಫೂರ್ತಿ ಯಾರು?” ಎಂದು ಕೇಳುತ್ತಾನೆ. ಇಬ್ಬರೂ “ತಂದೆಯೇ ಸ್ಫೂರ್ತಿ” ಎನ್ನುತ್ತಾರೆ. ಆಗ ಸಂತ ಆಶ್ಚರ್ಯದಿಂದ “ಅದು ಹೇಗೆ?!” ಎಂದು ಕೇಳುತ್ತಾನೆ. ಮೊದಲನೆಯ ಮಗನೆಂದ, “ಪ್ರತಿದಿನ ನನ್ನ ತಂದೆಯ ಕೆಟ್ಟಕೆಲಸಗಳನ್ನು ನೋಡುತ್ತಾ ಬೆಳೆದ ನನಗೆ ಬೇರೆ ಇನ್ನೇನು ಆಗಲು ಸಾಧ್ಯ; ಹಾಗಾಗಿ ಅವನಂತೆಯೇ ನಾನು ಕೆಟ್ಟವನಾದೆ.”
ಆಗ ಎರಡನೆಯವನು, “ನಾನು ಪ್ರತಿದಿನ ತಂದೆಯವರ ಕೆಟ್ಟಕೆಲಸಗಳನ್ನು ನೋಡಿ ಮತ್ತು ಅವರಿಗೆ ಸಮಾಜದಲ್ಲಿ ಗೌರವ ಕಡಿಮೆ ಇರುವುದನ್ನು ಕಂಡು, ನಾನು ಅವರಂತೆ ಆಗಬಾರದು; ಸದ್ಗುಣಿಯಾಗಬೇಕು ಎಂದು ನಿರ್ಧಾರ ಮಾಡಿ ಈ ರೀತಿ ಒಳ್ಳೆಯ ವ್ಯಕ್ತಿಯಾಗಿದ್ದೇನೆ” ಎನ್ನುತ್ತಾನೆ.
ನಮ್ಮ ಸುತ್ತಮುತ್ತ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ನಾವು ಒಳ್ಳೆಯದನ್ನು ಮಾತ್ರ ಸ್ವೀಕಾರ ಮಾಡಿ ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಂಡಾಗ ಸಮಾಜಕ್ಕೆ ಉಪಕಾರ, ನಮಗೆ ನೆಮ್ಮದಿ ದೊರೆಯುತ್ತದೆ.