ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

ಉಪಾಸನೆ ಲೇಖನ

ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ.

 

ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ ಸಪ್ತಗೋತ್ರದ ಬ್ರಾಹ್ಮಣರನ್ನು ಕರೆತಂದು ಯಜ್ಞಯಾಗಾದಿಗಳೊಂದಿಗೆ ಅವರಿಗೆ ನೆಲೆ ಕಲ್ಪಿಸಿದ. ಹವ್ಯ-ಕವ್ಯಗಳನ್ನು ಆಚರಿಸುತ್ತಿದ್ದ ಈ ದ್ವಿಜರನ್ನೇ ಮುಂದೆ ಹವ್ಯಗ, ಹವೀಕ, ಹವ್ಯಕ, ಹೈಗ ಹೀಗೆ ಕರೆಯತೊಡಗಿದರು. ಹೈಗರುಳ್ಳ ಗುಂದ (ಎತ್ತರದ ಸ್ಥಳ) ‘ಹೈಗುಂದ’ ಎಂದಾಯಿತು. ಹೈಗುಂದದಲ್ಲಿ ಕಾಣಸಿಗುವ ಯಜ್ಞಕುಂಡಗಳು, ಭಗ್ನಶಿಲಾಮೂರ್ತಿಗಳು, ಕಲ್ಲು-ಇಟ್ಟಿಗೆಗಳು ಇದೊಂದು ಯಾಗಶಾಲೆಯಾಗಿತ್ತು ಎಂಬುದಕ್ಕೆ ಇಂಬು ಕೊಡುತ್ತವೆ.

 

ಹೈಗುಂದ ಎಲ್ಲಿದೆ?

 

 

ಹೊನ್ನಾವರದಿಂದ ೨೦ ಕಿ.ಮೀ. ದೂರದಲ್ಲಿ ಅಳ್ಳಂಕಿ ಎಂಬ ಊರಿದೆ. ಅಲ್ಲಿಂದ ಪುಟ್ಟದೋಣಿಯಲ್ಲಿ ಹಸಿರು ಹಸಿರಾದ ಇಕ್ಕೆಲಗಳನ್ನು ನೋಡುತ್ತಾ ಶರಾವತೀ ನದಿಯಲ್ಲಿ ೨೦ ನಿಮಿಷ ಪಯಣಿಸಿದರೆ ಸಿಗುವದು ಹೈಗುಂದ. ಇಳಿಯುತ್ತಿದ್ದಂತೆ ನಮಗೆದುರಾಗುವದು ಜಗನ್ಮಾತೆ ಶ್ರೀ ದುರ್ಗಾಂಬಿಕೆಯ ಮಂದಿರ. ಪದ್ಮಾಸನಸ್ಥಿತಳೂ ಮಂದಸ್ಮಿತೆಯೂ ಅಭಯದಾಯಕಳೂ ಆದ ದೇವಿಯ ವಿಗ್ರಹ ಕಣ್ಣನ್ನಲ್ಲ ಹೃದಯವನ್ನೇ ತುಂಬುತ್ತದೆ. ಮಂದಿರದಿಂದ ಹೊರಬಂದರೆ ಅಲ್ಲಲ್ಲಿ ಅನೇಕ ಭಗ್ನವಾದ ಶಿಲಾಮೂರ್ತಿಗಳು ಕಾಣಸಿಗುತ್ತವೆ. ಕ್ಷೇತ್ರದ ಇತಿಹಾಸವನ್ನು ಸಂಶೋಧಿಸುವ ಇಚ್ಛೆಯುಳ್ಳ ಜಿಜ್ಞಾಸುಗಳಿಗೆ ಸದವಕಾಶ. ಕಾಲಗತಿಯಲ್ಲಿ ಸವೆದು ಜೀರ್ಣವಾದ ಮಂದಿರಕ್ಕೆ ಇತ್ತೀಚಿನ ದಿನಗಳಲ್ಲಿ ಕಾಯಕಲ್ಪ ಮಾಡಲಾಗಿದೆ. ಶರನ್ನವರಾತ್ರಿಯ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು ದೂರದೂರುಗಳಿಂದ ಭಕ್ತರು ಬಂದು ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸೇತುವೆ ನಿರ್ಮಾಣವಾಗುತ್ತಿದೆ.

 

ಪರಮಪಾವನೆಯ ಈ ಪುಣ್ಯಕ್ಷೇತ್ರವು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪರಮಾನುಗ್ರಹದಿಂದ ಶ್ರೀರಾಮಚಂದ್ರಾಪುರಮಠದಲ್ಲಿ ಒಂದಾಯಿತು. ಇದು ಶಿಷ್ಯಕೋಟಿಯ ಮಹಾಭಾಗ್ಯ. ಋಷಿಮೂಲದಿಂದ ಸುಸಂಪನ್ನವಾದ ನಮ್ಮ ಹವ್ಯಕ ಪರಂಪರೆ ನದೀತೀರದೊಂದಿಗೆ ಸಮೀಕರಿಸಿಕೊಂಡು ಮಹತ್ತಿನೊಂದಿಗೆ ಕಾಲಕಾಲಕ್ಕೆ ಶ್ರುತಿಮಾಡಿಕೊಳ್ಳುತ್ತಿದೆ.

 

ಆಸ್ತಿಕತೆಯ ಹಿನ್ನೆಲೆಯಲ್ಲಿ ಆಧುನಿಕತೆಯ ಸೊಗಸನ್ನು ಅನುಭವಿಸಲು ಹೈಗುಂದ ಪ್ರಶಸ್ತ ತಾಣ. ಭಕ್ತರ ಭಕ್ತಿಯ ಕಾಣಿಕೆ ಅವರ ಮನೋಭೀಷ್ಟ ಪೂರ್ಣತೆಗೆ ಕಾಣ್ಕೆಯಾಗುತ್ತದೆ ಇಲ್ಲಿ. ಸಂಶೋಧನಾ ದೃಷ್ಟಿಯಿಂದ ದ್ವೀಪದ ಸ್ವಾರಸ್ಯವನ್ನು, ಪಾವನತೆಯ ದೃಷ್ಟಿಯಿಂದ ದೇವಿಯ ಅನುಗ್ರಹವನ್ನು, ಮನೋರಂಜನೆಯ ದೃಷ್ಟಿಯಿಂದ ದೋಣಿವಿಹಾರವನ್ನು, ಕ್ಲೇಶಮಯ ಜೀವನಕ್ಕೆ ನವೋಲ್ಲಾಸವನ್ನು ಪಡೆಯುವುದಕ್ಕಾಗಿ ಹೈಗುಂದಕ್ಕೆ ಭೇಟಿ ಕೊಡಬಹುದು.

 

ಸಂಪರ್ಕ:
ಕೆ. ಜಿ. ಹೆಗಡೆ, ಹೈಗುಂದ,

ಅಧ್ಯಕ್ಷರು, ಸೇವಾ ಸಮಿತಿ.

೯೪೮೦೦೪೨೦೫೬, ೦೮೩೮೭೨೬೧೮೫೬.

 

ಎಮ್. ಎಸ್. ಹೆಗಡೆ, ಗಾಳಿ,

ಅಧ್ಯಕ್ಷರು, ಹವ್ಯಕ ವಲಯ

ಗೇರುಸೊಪ್ಪ.

೯೪೮೩೭೫೯೩೦೦, ೦೮೩೮೭೨೬೫೫೦೦.

 

ಕೆ. ಜಿ. ಭಟ್ಟ,

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,

ಶ್ರೀರಾಮಚಂದ್ರಾಪುರ ಮಠ.

೯೪೪೯೫೯೫೨೦೯.

 

ನೀಲಕಂಠ ಯಾಜೀ,

ಉಪಾಧ್ಯಕ್ಷರು, ಹೊನ್ನಾವರ ಹವ್ಯಕ ಮಂಡಲ.

೯೪೪೮೭೨೯೪೩೩.

 

ಪಿ. ಎಸ್. ಭಟ್ಟ, ಉಪ್ಪೋಣಿ,

ಗೌರವ ಆಹ್ವಾನಿತರು.

೯೪೪೮೧೨೦೦೩೩, ೦೮೩೮೭೨೮೦೦೩.

 

ಹವ್ಯಪುರಾಧೀಶ್ವರಿ ಶ್ರೀದುರ್ಗಾಂಬಿಕಾ ದೇವಸ್ಥಾನ,

ಹೈಗುಂದ

ಅಂಚೆ: ಹೆರಂಗಡಿ, ತಾ: ಹೊನ್ನಾವರ, ಜಿಲ್ಲೆ:

ಉತ್ತರಕನ್ನಡ

 

Author Details


Srimukha

6 thoughts on “ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

 1. ಒಬ್ಬ ರಾಜ – ಯಾಗಕ್ಕಾಗಿಯೇ ಒಂದು ದ್ವೀಪವನ್ನು ನಿರ್ಮಿಸಿದ್ದನೆಂದರೆ, ಆ ರಾಜ್ಯದ ಕತೃತ್ವಶಕ್ತಿ ಮತ್ತು ವೈದಿಕಾನುಷ್ಠಾನತತ್ಪರತೆಯನ್ನು ಊಹಿಸಿಕೊಳ್ಳುವುದೂ ಈ ಕಾಲದಲ್ಲಿ ಕಷ್ಟದ ಮಾತೇ ಹೌದು.
  ಈ ಬಗ್ಗೆ ದಯವಿಟ್ಟು ಇನ್ನಷ್ಟು ಬೆಳಕು ಚೆಲ್ಲಿರಿ 🙏

 2. ಇದು ಒಂದು ಹವ್ಯಕರ ಬಗ್ಗೆ ಬೆಳಕು ಚೆಲ್ಲುವ ಅತ್ಯುತ್ತಮ ಲೇಖನ.ಇನ್ನಷ್ಟು ವಿವರಗಳನ್ನು ನಿರೀಕ್ಷಿಸಬಹುದೇ?

 3. ಒಂದು ವರ್ಷದ ಹಿಂದೆ ಹೋಗಿದ್ದೆ .ಪ್ರಶಾಂತವಾದ ಸುಂದರ ಪರಿಸರ. ನಾನು ಹೋದಾಗ ಸೇತುವೆ ನಿರ್ಮಾಣ ಆಗಿತ್ತು. ಆದರೆ ಸಾರ್ವಜನಿಕ ಓಡಾಟಕ್ಕೆ ಅಧಿಕೃತವಾಗಿ ಬಿಟ್ಟು ಕೊಟ್ಟಿರಲಿಲ್ಲ.
  ಇದು ಹೊನ್ನಾವರದಿಂದ ಶಿವಮೊಗ್ಗ ರಸ್ತೆಯಲ್ಲಿ ೨೦ ಕಿಮೀ ದೂರದಲ್ಲಿದೆ.
  ನಾನು ಹೈಗುಂದಕ್ಕೆ ಹೋಗಿದ್ದಾಗ ಅಲ್ಲಿಗೆ ಶ್ರೀ ಗುರುಗಳ ಆಗಮನವಾಗಿತ್ತು.

 4. Thanks to all who have. Worked. For. This. NOW. IF IT IS UNDER. OWNERSHIP OF HAVYAKA. MATA.MEANS..CREDIT. GOES TO. OUR. KULAGURU…. SO NICE TO HERE. THIS
  MANJUNATHA JOIS. VEDARATNA. CHATURVEDI. ACHARYA. ENVRONMENTAL SCIENCE. MASTER DEGREE UDUPI. SAGARA

Leave a Reply

Your email address will not be published. Required fields are marked *