ಸ್ವಂತಕ್ಕಾಗಿ ಏನನ್ನೂ ಬಯಸದೇ ನಿರಂತರ ದುಡಿಯುವ ನಿಸ್ವಾರ್ಥಿಯವನು. ತುಂಬಾ ಓದಬೇಕು, ತುಂಬಾ ಬರೆಯಬೇಕು ಎಂಬ ಆಸೆ ಎದೆಯೊಳಗಿದ್ದರೂ, ಹುದುಗಿಸಿಕೊಂಡು ಸಂಸಾರರಥದ ಹಗ್ಗ ಹಿಡಿದವನು. ತನಗೆಷ್ಟೇ ನೋವಿದ್ದರೂ, ರಾತ್ರಿಯಾದಾಗ ಮಕ್ಕಳ ಪಾದಕ್ಕೆ ಎಣ್ಣೆ ಸವರಿ ನಕ್ಕವನು. ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮವಿದ್ದಾಗ, ಕೆಲಸಗಳನ್ನೆಲ್ಲ ಬದಿಗೊತ್ತಿ, ಶ್ರದ್ಧೆಯಿಂದ ಕವನ ಇಲ್ಲವೇ ಭಾಷಣಗಳನ್ನು ಬರೆದುಕೊಟ್ಟವನು. ದೂರದ ಊರಿಗೆ ಓದಲೆಂದು ಹೋಗಿದ್ದಾಗ ಉದ್ದುದ್ದ ಹಾಳೆಗಳಲ್ಲಿ ಪತ್ರ ಬರೆದವನು.ಹಾಸ್ಟೆಲ್ನಿಂದ ರಜೆಗೆಂದು ಮನೆಗೆ ಬಂದಾಗ, ಮಗಳಿಗಿಷ್ಟ ಎಂದು ಡೈರಿಗೆ ಕೊಡದೇ ಹಾಲನ್ನು ತೆಗೆದಿರಿಸುತ್ತಿದ್ದವನು.
ಮಗಳ ಮದುವೆ ಮಾಡಿ, ತವರುಮನೆಯಿಂದ ಬೀಳ್ಕೊಟ್ಟು, ಗಂಡನ ಮನೆಯಲ್ಲಿ ಮಗಳೊಬ್ಬಳನ್ನೇ ಬಿಟ್ಟು ಎಲ್ಲರೂ ಹೊರಡುವಾಗ, ಅದೆಲ್ಲಿಂದಲೋ ತಂದ ಆರೆಂಜ್ ಪೆಪ್ಪರ್ಮೆಂಟುಗಳನ್ನು, ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಗಳ ಕೈಗೆ ತನ್ನ ಒರಟು ಬೊಗಸೆಯಿಂದ ಸುರಿದು “ಖುಷಿಯಾಗಿರು” ಎಂದು ನಗಿಸಿದವನು.
ಇವನು ನನ್ನ ಹೆಮ್ಮೆ, ನನ್ನ ಪ್ರೀತಿಯ ಅಪ್ಪ
ಎಲ್ಲರ ಅಪ್ಪಂದಿರೂ ಒಂದೇ ರೀತಿ ಇರಬೇಕೆಂದಿಲ್ಲಅಲ್ಲವೇ? ಆದರೆ ಅಪ್ಪನೆಂದರೆ ವ್ಯಕ್ತಿಯಲ್ಲ. ಅದೊಂದು ವ್ಯಕ್ತಿತ್ವ.
ಅಪ್ಪನೆಂದರೆ ಕೆಲವು ಮಕ್ಕಳಿಗೆ ಲಾಲಿ ಹಾಡಿಮಲಗಿಸುವ ಅಮ್ಮನಾಗಿರಬಹುದು. ಹಲವರಿಗೆ ಬದುಕಲು ಕಲಿಸಿದ ಗುರುವಾಗಿರಬಹುದು. ಹಲವರಿಗೆ ಮೊದಲ ಗೆಳೆಯನಾಗಿರಬಹುದು. ಹೆಣ್ಣುಮಕ್ಕಳ ವಿಷಯದಲ್ಲಿ ತುಸು ಹೆಚ್ಚು ಪ್ರೊಟೆಕ್ಟಿವ್ ಆಗಿರುವ ‘Bodyguard Dad’ ಇರಬಹುದು. ಯಾವ ವಿಷಯಕ್ಕೂ ತಲೆಕೆಡಿಸಿಕೊಳ್ಳದೇ ಸದಾ ಹಸನ್ಮುಖಿಯಾಗಿರುವ ‘Cool Dad’ ಆಗಿರಬಹುದು. ಮನಸ್ಸಿನಲ್ಲಿ ಎಷ್ಟೇ ಪ್ರೀತಿಯಿದ್ದರೂ ತೋರಿಸಿಕೊಳ್ಳದೇ, ಸ್ವಲ್ಪ ಜಾಸ್ತಿಯೇ ಸ್ಟ್ರಿಕ್ಟ್ ಆಗಿ ಕಾಣುವ ‘Angry Dad’ ಇರಬಹುದು. ಎಲ್ಲ ರೀತಿಯ ಆಟೋಟಗಳನ್ನು ಹೇಳಿಕೊಡುವ ‘SportsMan Dad’ ಆಗಿರಬಹುದು. ಅಮ್ಮ ಹೊಡೆಯಲು ಬಂದಾಗ ಅಡಗಿಕೊಳ್ಳಲು ಬೆನ್ನ ಹಿಂದೆ ಜಾಗ ಕೊಡುವ ಮರವಾಗಿರಬಹುದು. ಮಕ್ಕಳ ಮೇಲೆ ಯಾವಾಗಲೂ ಒಂದು ಕಣ್ಣನ್ನಿಟ್ಟು, ಅವರ ಫೋನು, ಮೆಸೇಜ್ ಗಳನ್ನು ಚೆಕ್ ಮಾಡುತ್ತಲೇ ಇರುವ ‘Detective Dad’ ಇರಬಹುದು. ಹಣ ಕೇಳಿದಾಗ, ಬೈದರೂ ಕೊನೆಯಲ್ಲಿ ಕೇಳಿದ್ದಕ್ಕಿಂತಲೂ ಜಾಸ್ತಿಯೇ ಕೊಡುವ ‘Money Bank’ ಆಗಿರಬಹುದು.
ಹೀಗೆ ಸ್ವಭಾವ ಯಾವುದೇ ಇರಲಿ, ಮಕ್ಕಳ ಜೀವನದಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸುತ್ತಾನೆ ತಂದೆ. ಸಾಮಾನ್ಯವಾಗಿ ಮಕ್ಕಳ ಪಾಲಿನ ‘Super Hero’ ಆಗಿರುತ್ತಾನೆ ಎಂದೇ ಹೇಳಬಹುದು. ಮಕ್ಕಳ ಬದುಕಿನ ಸುಡುಬಿಸಿಲಿನಲ್ಲಿ ನೆರಳಾಗುತ್ತಾನೆ. ಸುರಿವ ಕಷ್ಟಗಳ ಮಳೆಗೆ ಸೂರಾಗುತ್ತಾನೆ. ನೋವಿನಲ್ಲಿ ಹೆಗಲಾಗುತ್ತಾನೆ.
ಅದು ಕೃತಯುಗ
ವಿಶ್ವಾಮಿತ್ರರು ಲೋಕಕಲ್ಯಾಣಕ್ಕಾಗಿ ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದರು. ಲೋಕದಲ್ಲಿ ನಡೆಯುವ ಒಳ್ಳೆಯ ಕೆಲಸಗಳನ್ನು ಕೆಡಿಸುವುದೇ ರಾಕ್ಷಸರ ಕೆಲಸವಾಗಿತ್ತು. ಅವರ ಆಶ್ರಮಕ್ಕೂ ಬಂದರು ಘೋರತಾಟಕಿ ಹಾಗೂ ಅವಳ ಮಕ್ಕಳು, ಅಲ್ಲಿ ನಡೆಯುತ್ತಿರುವ ಯಜ್ಞವನ್ನು ಕೆಡಿಸಲು. ವಿಶ್ವಾಮಿತ್ರರು ಅಯೋಧ್ಯೆಯ ರಾಜ ದಶರಥನಲ್ಲಿಗೆ ಹೋಗಿ, “ಆ ರಾಕ್ಷಸರ ಸಂಹಾರಕ್ಕೆ ನಿಮ್ಮ ಮಕ್ಕಳಾದ ರಾಮ – ಲಕ್ಷ್ಮಣರನ್ನು ಕಳುಹಿಸು” ಎಂದರು. ಆಗ ಚುರ್ರೆಂದಿದ್ದು ತಂದೆಯ ಕರುಳು. “ಮಕ್ಕಳೇಕೆ? ನಾನೇ ಬರುತ್ತೇನೆ” ಎಂದನವನು. ಕಾಡಿನಲ್ಲಿ ದುಷ್ಟಮೃಗಗಳಿರಬಹುದು, ಮಕ್ಕಳ ಮೃದುವಾದ ಪಾದಗಳಿಗೆ ಮುಳ್ಳು ಚುಚ್ಚಬಹುದು. ಕಷ್ಟಗಳು ನನ್ನ ಪಾಲಿಗಿರಲಿ, ಮಕ್ಕಳು ಅರಮನೆಯಲ್ಲಿ ಸುಖವಾಗಿರಲಿ ಎಂಬ ಪ್ರೇಮ ತಂದೆ ದಶರಥನಿಗೆ.
ದ್ವಾಪರಯುಗದ ಘಟನೆಯಿದು
ಅದು ಕಂಸನ ಸೆರೆಮನೆ. ಮಧ್ಯರಾತ್ರಿ ಸಮಯ. ಧಾರಾಕಾರ ಮಳೆ. ಜಗವೆಲ್ಲ ಮಲಗಿದ್ದಾಗ ಕೃಷ್ಣನ ಜನನ. ಆಗ ತಾನೇ ಹುಟ್ಟಿದ ಮಗುವನ್ನು ಬುಟ್ಟಿಯಲ್ಲಿ ಮಲಗಿಸಿಕೊಂಡು, ಬುಟ್ಟಿಯನ್ನು ತಲೆಯ ಮೇಲೆ ಹೊತ್ತು, ಸುರಿವ ಮಳೆಯಲ್ಲಿ, ಭೋರ್ಗರೆದು ಹರಿವ ಯಮುನೆಯನ್ನು ದಾಟಿ, ಸ್ನೇಹಿತ ನಂದನಿಗೆ ಮಗುವನ್ನೊಪ್ಪಿಸಿದ ದಿಟ್ಟ ತಂದೆ ವಸುದೇವ. ಗೆಳೆಯನ ಮಗನನ್ನು ಸ್ವಂತ ಮಗನಂತೆ ಸಲಹಿದ ತಂದೆ ನಂದ.
ಇದೀಗ ಕಲಿಯುಗ
ತಮ್ಮ ಕಾಲಿಗೆ ಚಪ್ಪಲಿ ಹಾಕದೇ, ಕಲ್ಲು-ಮುಳ್ಳು ಎಂಬುದನ್ನೂ ಲೆಕ್ಕಿಸದೇ, ಮಗುವನ್ನು ಹೆಗಲಮೇಲೆ ಕೂರಿಸಿಕೊಂಡು, ನೋವಿನಲ್ಲಿಯೂ ನಗುತ್ತಾ ನಡೆದು, ಹೂವಿನಂತೆ ಜೋಪಾನ ಮಾಡುವ ಎಷ್ಟೋ ಜನ ಅಪ್ಪಂದಿರು ಈಗಲೂ ಇದ್ದಾರೆ.
ಸುಡುಬಿಸಿಲಿರಲಿ, ಕೊರೆವ ಚಳಿಯಿರಲಿ, ಸುರಿವ ಮಳೆಯಿರಲಿ, ಯಾವುದನ್ನೂ ಲೆಕ್ಕಿಸದೇ ಹಗಲಿರುಳೂ ದುಡಿದು, ಮಕ್ಕಳಿಗಾಗಿ ಎಂದು ಕೂಡಿಡುವ ಅಪ್ಪಂದಿರೂ ಇದ್ದಾರೆ. ರಕ್ತಸಂಬಂಧವಿಲ್ಲದೇ ಇದ್ದರೂ, ಸ್ವಂತಕ್ಕಿಂತ ಜಾಸ್ತಿ ಎಂಬಂತೆ ಕಣ್ರೆಪ್ಪೆಯಂತೆ ಸಾಕಿ, ಕಾಪಾಡುವ ತಂದೆಯರೂ ಇಲ್ಲಿ ಇದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ಶ್ರೀಮಂತರು ಎನಿಸಿಕೊಂಡು, ಸೂಟು-ಬೂಟುಗಳೊಳಗೆ ತೂರಿಕೊಂಡು ದೊಡ್ಡ ಕಾರಿನಲ್ಲಿ ತಂಪಾಗಿ ಕೂತ ವ್ಯಕ್ತಿಗಳ ಹಿಂದೆ ಅಪ್ಪನ ಬೆವರಿನ ಹನಿಯಿರಬಹುದು.
ಇಂತಹ ಉನ್ನತ ವ್ಯಕ್ತಿತ್ವವಿರುವ ತಂದೆಗೆ ಮಕ್ಕಳಾಗಿ ಜನಿಸುವುದೂ ಕೂಡ ಯಾವುದೋ ಜನ್ಮದ ಸುಕೃತವಿರಬಹುದೇನೋ ಅನ್ನಿಸುತ್ತದೆ. ಹೆಣ್ಣಾದರೂ, ಗಂಡಾದರೂ, ಬಡವನಾದರೂ, ಸಿರಿವಂತನಾದರೂ, ಒಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬೆನ್ನ ಹಿಂದೆ ತಂದೆಯೆಂಬ ವ್ಯಕ್ತಿತ್ವದ ನೆರಳಿರಬೇಕು. ಕೆಲವರ ಜೀವನದಲ್ಲಿ ಅಮ್ಮನೇ ಅಪ್ಪನಾಗಿರಬಹುದು. ಕೆಲವರ ಜೀವನದಲ್ಲಿ ಜನ್ಮ ಕೊಡದೇ ಇದ್ದರೂ, ಸಾಕಿ ಸಲಹಿದ ತಂದೆಯಿರಬಹುದು. ‘ಅಪ್ಪನೆಂದರೆ ವ್ಯಕ್ತಿಯಲ್ಲ. ಅದೊಂದು ವ್ಯಕ್ತಿತ್ವ’ ಎಂದಿದ್ದು ಸರಿಯಲ್ಲವೇ? ಅಂತಹ ಘನವ್ಯಕ್ತಿತ್ವದಿಂದಲೇ ಅಲ್ಲವೇ ನಮ್ಮ ವ್ಯಕ್ತಿತ್ವ ರೂಪ ಪಡೆಯುವುದು!
ಕೊನೆ ಹನಿ – ಅಂತಹ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಅಪೂರ್ಣವೆನಿಸಬಹುದು. ಹೊತ್ತು ಸಲಹಿದ ತಂದೆಯ ಬಗ್ಗೆ ಗೌರವ-ಪ್ರೀತಿ ಪೂರ್ಣವಾಗಿರಲಿ. ಅವರ ಬೆನ್ನು ಗೂನಾದಾಗ ನಮ್ಮ ಭುಜ ಆಸರೆಯಾಗಲಿ. ಎಷ್ಟೇ ಎತ್ತರವೇರಿದರೂ ತಂದೆಬೇರಿನ ನೆನಪು ಮರೆಯಾಗದಿರಲಿ.