ಕೆಲ ದಿನಗಳ ಹಿಂದೆ ನಮ್ಮ ಮನೆ ಬಳಿಯ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಕಾರ್ಯಕ್ರಮ ವಿತ್ತು. ಅಲ್ಲಿನ ಪೋಷಕರಿಗೆಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ನಾನೂ ಭಾಗವಹಿಸಿದ್ದೆ. ಹೀಗೆ ರಂಗೋಲಿ ಬಿಡಿಸುವಾಗ ಒಂದು ಚುಕ್ಕಿ ತಪ್ಪಾಗಿ ಇಟ್ಟೆ. ಅಲ್ಲೇ ಇದ್ದ ಒಬ್ಬರು ಅಜ್ಜಿ ನಾ ಇಡುತ್ತಿದ್ದ ಚುಕ್ಕಿ ನೋಡಿ ‘ಮಗಾ, ಒಂದು ಚುಕ್ಕಿ ತಪ್ಪಾಯಿತ್ತಲ್ಲ ಸರಿ ಮಾಡು’ ಅಂದರು. ನಾನು, ‘ಹೇಗೂ ಒಂದೇ ಚುಕ್ಕಿ ಅಲ್ವಾ ಬಿಡಜ್ಜೀ, ರಂಗೋಲಿ ಬಿಡಿಸುವಾಗ ಸರಿ ಆಗತ್ತೆ’ ಅಂತ ಹಾಗೆ ಮುಂದು ವರೆಸಿದೆ. ಅಜ್ಜೀ ನನ್ನ ನೋಡಿ ನಕ್ಕರು. ಹೀಗೆ ರಂಗೋಲಿ ಬಿಡಿಸ್ತಾ ಪೂರ್ಣ ರಂಗೋಲಿ ತಪ್ಪಾಗಿಹೊಯ್ತು. ಸರಿ ಮಾಡೋಕೇ ಬರಲಿಲ್ಲ. ಆಗ ಅಜ್ಜಿ ನನ್ನ ಹತ್ರ ಬಂದು, ‘ನೋಡು ಮಗ ರಂಗೋಲಿ ಒಂದ್ ಚುಕ್ಕಿ ತಪ್ಪಾದ್ರು ಇಡೀ ರಂಗೋಲಿನೇ ಹಾಳಾಯ್ತು. ಹಾಗೆ ನಮ್ಮ ಜೀವನನೂ. ಒಂದು ಹೆಜ್ಜೆ ಎಡವಿದ್ರು ಅದು ಸರಿ ಮಾಡೋಕೆ ಬರಲ್ಲ. ಎಚ್ಚರದಿಂದ ಹೆಜ್ಜೆ ಇಡಬೇಕು ಕಣ್ ಮಗ’ ಅಂದ್ರು. ಒಮ್ಮೆ ಎಚ್ಚತ್ತ ಅನುಭವ.
ಬದುಕಿನ ಪಾಠ ಕಲಿಯಲು ಪುಸ್ತಕದ ಜ್ಞಾನವೇ
ಬೇಕಾಗಿಲ್ಲ. ಶಾಲೆಯ ಮೆಟ್ಟಿಲೇ ಏರದ ಅಜ್ಜಿ ಬದುಕಿನ ಪಾಠವನ್ನು ಅದೆಷ್ಟು ಚೆನ್ನಾಗಿ ತಿಳಿ ಹೇಳಿದರು. ಅವರ ಅನುಭವದ ಜ್ಞಾನದ ಮುಂದೆ ನಮ್ಮ ಪುಸ್ತಕದ ಅರಿವು ಲೆಕ್ಕಕ್ಕೆ ಇಲ್ಲ. ನಾವು ಡಿಗ್ರಿ ಓದುವಾಗ ಒಬ್ಬ ಉಪನ್ಯಾಸಕರ ಮಾತು ನೆನಪಿಗೆ ಬಂತು. ‘ನಾವು ಕೊಡುವ ಡಿಗ್ರಿ ಪತ್ರ ಕುತ್ತಿಗೆಗೆ ಕಟ್ಟೋ ಚಪ್ಪೆ ರೊಟ್ಟಿ ಕಣ್ರೀ. ಜೀವನದ ಅನುಭವ, ಬದುಕು ನಿಮಗೆ ಪಾಠ ಕಲಿಸತ್ತೆ’ ಅನ್ನೋ ಅವರ ಮಾತು ಅಜ್ಜಿಯ ಮಾತಿಗೆ ಸರಿ ಅನ್ನಿಸಿತು.
ಇತ್ತೀಚೆಗಂತೂ ನಾವು ತಂತ್ರಜ್ಞಾನದ ಬಳಕೆಯ ಉಪಯೋಗ ಪಡೆಯುವುದರ ಬದಲು, ಇನ್ನಷ್ಟು ಬುದ್ಧಿಗೆ ಕೆಲಸ ಕೊಡದೇ ಸೋಮಾರಿಗಳಾಗುತ್ತಿದ್ದೇವೆ. ಸಣ್ಣ ಸಣ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳುವ ಶಕ್ತಿಯೇ ಇಲ್ಲವಾಗಿದೆ. ಎಲ್ಲವನ್ನೂ ನಮ್ಮ ಮೊಬೈಲ್ ರಿಮೈನ್ಡ್ ಮಾಡಲೇಬೇಕು. ಸಣ್ಣಪುಟ್ಟ ಲೆಕ್ಕಕ್ಕೂ ಕ್ಯಾಲ್ಕ್ಯುಲೇಟರ್ ಬೇಕು. ಬಾಲ್ಯದಲ್ಲಿ ಸಂಜೆ ಬಾಯಿಪಾಠ ಹೇಳುವ ಕ್ರಮವಿತ್ತು. ಅಜ್ಜಿ ಶ್ಲೋಕ, ಕತೆ ಎಲ್ಲ ಹೇಳಿಕೊಡ್ತಾ ಇದ್ರು. ಅದಕ್ಕೂ ಮೊದಲು ನಾವು 2ರ ಮಗ್ಗಿ. ಕ ತಲಗಟ್ಟು ಕಾ ಹೇಳಿ ಒಪಿಸಬೇಕಿತ್ತು. ಈಗ ಮಗ್ಗಿಯನ್ನು, ಬಾಯಿಲೆಕ್ಕವನ್ನು ಕ್ಯಾಲ್ಕ್ಯುಲೇಟರ್ ನುಂಗಿ ಹಾಕಿದೆ. ಸಂಜೆಯಾದರೆ ಅಪ್ಪ ,ಅಮ್ಮ ಅವರವರದೇ ಆದ ಕೆಲಸದಲ್ಲಿ ಬ್ಯುಸಿ. ಅಜ್ಜಿ ಅಜ್ಜ ಮೊದಲೇ ಇಲ್ಲ. ವಿಭಕ್ತ ಕುಟುಂಬಗಳೇ ಜಾಸ್ತಿ. ಇನ್ನು ಮಕ್ಕಳೂ ಹೊರಲಾರದ ಭಾರ ಹೊತ್ತು ಹೋಗೋ ಶಾಲೆಯ ಮಕ್ಕಿ ಕಾ ಮಕ್ಕಿಯ ಮನೆ ಪಾಠ.
ನಮ್ಮ ಹಳ್ಳಿ ಕಡೆಯಲ್ಲಿ ಗದ್ದೆ ನಾಟಿ ಮಾಡುವಾಗ ಬತ್ತದ ಸಸಿಯನ್ನು ಮೆದೆ, ಕಟ್ಟು ಅಂತೆಲ್ಲ ಲೆಕ್ಕ ಮಾಡ್ತರೆ. ಅದರ ಲೆಕ್ಕ ಅದೆಷ್ಟು ಚನ್ನಾಗಿ ಆ ನಾಟಿ ಹೆಂಗಸರಿಗೆ ನೆನಪು. ಹತ್ತು ಜನರ ಒಂದು ಗುಂಪು. ಅದಕ್ಕೆ ಒಬ್ಬಳು ಯಜಮಾನಿ. ಹತ್ತು ಜನರ ಲೆಕ್ಕ ಅವಳ ಬಾಯಲ್ಲೇ ಇರುವುದು. ಯಾರ ಮನೆ ಗದ್ದೇಲಿ ಯಾರು ಯಾರು ಎಷ್ಟು ಮೆದೆ ಕಿತ್ತಿದ್ರು ಅನ್ನೋ ಲೆಕ್ಕ ಎಷ್ಟ್ ವರ್ಷ ಬಿಟ್ಟು ಕೇಳಿದ್ರೂ ಆ ಯಜಮಾನಿಯ ಬಾಯಲ್ಲೇ ಇರುವುದು. ನಮಗಾದ್ರೆ ಲೆಕ್ಕದ ಪುಸ್ತಕವೇ ಬೇಕು. ಅದ್ಯಾವ ಗಣಿತ ಪುಸ್ತಕವನ್ನೂ ಓದದೇ ಗುಣಾಕಾರ ಭಾಗಕಾರದ ಅರಿವಿಲ್ಲದೇ ಎಲ್ಲರ ಲೆಕ್ಕವನ್ನೂ ಅದೆಷ್ಟು ಸಲೀಸಾಗಿ ಹೇಳೋ ವಿದ್ಯೆಗೆ ಮೆಚ್ಚಲೇ ಬೇಕು.
ಯಾರನ್ನು ಮೇಲ್ನೋಟಕ್ಕೆ ನೋಡಿ ಅಳೆಯುವಂತಿಲ್ಲ. ಪ್ರತಿಯೊಬ್ಬರಲ್ಲೂ ಅವರದೇ ಆದ ಸಾಮರ್ಥ್ಯ ಇರುವುದು. ನಾವು ಅಂದುಕೊಂಡಂತೆ ಹಳ್ಳಿ ಶಾಲೆ, ಹಳ್ಳಿ ಮಕ್ಕಳು, ಹಳ್ಳಿ ಜನ ನೋಡಲು ಸಾಮಾನ್ಯರೆನಿಸಬಹುದು. ಆದರೆ ಅವರ ಅನುಭವ, ಜ್ಞಾನ, ನೆನಪಿನ ಶಕ್ತಿಗೆ ತಲೆಬಾಗಲೇಬೇಕು. ತಂತ್ರಜ್ಞಾನ ಒಳ್ಳೆಯದೇ. ಅದನ್ನು ಅದರ ಅನಿವಾರ್ಯತೆಗಷ್ಟೇ ಬಳಸಿ ನಮ್ಮ ಬುದ್ಧಿಗೂ ಕೆಲಸ ನೀಡೋಣ.