ತಪ್ಪು ಮಾಡಿದವ ಯಮನಾದರೂ ಅಷ್ಟೇ!

ಅಂಕಣ ಕಥಾಯನ : ಜಗದೀಶಶರ್ಮಾ ಸಂಪ

ಕಾಲವನ್ನು ನಿರೀಕ್ಷಿಸುತ್ತಿದ್ದ ಸತ್ಯವತಿ ಒಂದು ದಿನ ಅಂಬಾಲಿಕೆಯ ಬಳಿ ಹೋದಳು. ಅಂಬಿಕೆಯ ಜೊತೆಗಿನ ಮಾತುಕತೆಯ ಪುನರಾವರ್ತನೆಯಾಯಿತು. ನಿಯೋಗದಿಂದ ಮಗುವನ್ನು ಪಡೆಯುವ ಮಾತು. ಅಂಬಾಲಿಕೆ ಒಪ್ಪಲ್ಲಿಲ್ಲ. ಸತ್ಯವತಿ ಬಿಡಲಿಲ್ಲ. ಧರ್ಮದ ಮಾತುಗಳು, ಹಳೆಯ ನಿದರ್ಶನಗಳು, ತರ್ಕಗಳು ಪರಸ್ಪರ ವಿನಿಮಯಗೊಂಡವು. ಕೊನೆಗೆ ಅಂಬಾಲಿಕೆ ತಲೆಬಾಗಿದಳು. ಸತ್ಯವತಿ ಸಂತಸಗೊಂಡಳು. ವ್ಯಾಸರನ್ನು ಆಹ್ವಾನಿಸಿದಳು.

 


ವ್ಯಾಸರು ಬಂದರು. ಅಂಬಾಲಿಕೆಯ ಶಯನಮಂದಿರವನ್ನು ಪ್ರವೇಶಿಸಿದರು. ವ್ಯಾಸರನ್ನು ಕಂಡ ಅಂಬಾಲಿಕೆ ಅಂಬಿಕೆಯಂತೆಯೇ ಭಯಗೊಂಡಳು. ನಡುಗಿದಳು, ಶರೀರವು ಬೆವರಿತು, ಬಿಳುಪೇರಿತು, ಬಿಳುಚಿಗೊಂಡಳು.
ನಿರ್ವಿಕಾರಚಿತ್ತದಿಂದ ವ್ಯಾಸರು ಮಗುವನ್ನು ಅನುಗ್ರಹಿಸಿದರು. ಮುಂದಾಗುವುದನ್ನು ಅರಿತರು. ಭೀತಳೂ, ವಿಷಣ್ಣಳೂ ಆದ ಅಂಬಾಲಿಕೆಗೆಂದರು- ‘ಭದ್ರೇ, ವಿರೂಪನಾದ ನನ್ನನ್ನು ಕಂಡ ನೀನು ಬಿಳುಚಿಕೊಂಡೆ. ಹಾಗಾಗಿ ನಿನ್ನ ಮಗನೂ ವಿವರ್ಣನಾಗುತ್ತಾನೆ. ಬಿಳುಚಿಕೊಂಡ ಮೈ ಅವನದಾಗುತ್ತದೆ. ಅದೇ ಅರ್ಥದ ‘ಪಾಂಡು’ ಎಂದೇ ಅವನು ಹೆಸರಾಗಲಿ.’

 


ಹೊರಬರುವ ಮಗನನ್ನೇ ಸತ್ಯವತಿ ಕಾಯುತ್ತಿದ್ದಳು. ದುಗುಡ, ಆತಂಕಗಳಿಂದ ಕೇಳಿದಳು ‘ಮಗನೇ, ಈ ಮಗುವು ಎಲ್ಲ ಲಕ್ಷಣಗಳಿಂದ ಕೂಡಿರುವುದಲ್ಲವೇ? ಸರ್ವಾಂಗಸಂಪೂರ್ಣವಾಗಿರುವುದೇ? ಕುರುಕುಲದ ಉತ್ತರಾಧಿಕಾರಕ್ಕೆ ಅರ್ಹವಾಗಿರುವುದಲ್ಲವೇ?’
ವ್ಯಾಸರೆಂದರು ‘ಅಮ್ಮಾ, ಯೋಗ್ಯವಾದ ಮಗು ಜನಿಸುವುದು. ಪರಾಕ್ರಮಿಯೂ, ವಿದ್ಯಾವಂತನೂ ಆದ ಮಗನೇ ಹುಟ್ಟಿ ಬರುವನು. ಆದರೆ, ಮಗುವಿನ ಮೈಬಣ್ಣ ಬಿಳಿಯಾಗಿರುವುದು. ಅಂಬಾಲಿಕೆ ನನ್ನನ್ನು ನೋಡಿ ಭಯಗೊಂಡು, ನಡುಗಿ, ಬಿಳುಪಾಗಿದ್ದೇ ಇದಕ್ಕೆ ಕಾರಣ.’

 


ಸತ್ಯವತಿಗೆ ವಿಧಿ ತನ್ನನ್ನು ಕಾಡುತ್ತಿದೆಯೆನಿಸಿತು. – ಇಷ್ಟಾದರೂ ಒಬ್ಬ ಪರಿಪೂರ್ಣನಾದ ರಾಜಕುಮಾರ ದೊರೆಯಲಿಲ್ಲವಲ್ಲ -ಎನಿಸಿತು. ‘ಮಗನೇ, ಇನ್ನೊಮ್ಮೆ ನನ್ನ ಮಾತು ಕೇಳಲಾರೆಯಾ? ಮತ್ತೊಂದು ಮಗುವನ್ನು ಅನುಗ್ರಹಿಸಲಾರೆಯಾ?’ ದೀನಳಾದಳು.
ವ್ಯಾಸರಿಗೆ ತಾಯಿಯ ಬಗ್ಗೆ ಕರುಣೆಯುಕ್ಕಿತು. ‘ಆಯಿತಮ್ಮಾ’ ಎಂದು ಹೇಳಿ ಹೊರಟುಹೋದರು.

 


ನವಮಾಸ ತುಂಬಿತು. ಅಂಬಾಲಿಕೆ ಹೆತ್ತಳು. ಲಕ್ಷಣಗಳಿಂದ ಕೂಡಿದ, ಅನುಪಮವಾಗಿ ಬೆಳಗುತ್ತಿದ್ದ ಮಗು ಹುಟ್ಟಿತ್ತು. ಆದರೆ ವ್ಯಾಸರೆಂದಂತೆ ಮಗುವಿನ ಮೈಯೆಲ್ಲ ಬಿಳುಪಾಗಿತ್ತು. ಅವನನ್ನು ಅನ್ವರ್ಥಕವಾಗಿ ಪಾಂಡುವೆಂದು ಕರೆದರು.
ಸತ್ಯವತಿ ಕೆಲದಿನಗಳ ಅನಂತರ ಅಂಬಿಕೆಯ ಬಳಿ ಹೋದಳು. ಆಕೆಯನ್ನು ಮಾತನಾಡಿಸಿದಳು. ‘ಮಗಳೇ, ನಮ್ಮ ಕರ್ತವ್ಯದಿಂದ ನಾವು ಚ್ಯುತರಾಗಬಾರದು. ಕುರುಕುಲದ ವೃದ್ಧಿಗೆ, ಪ್ರಜೆಗಳ ಬದುಕಿನ ಸಮೃದ್ಧಿಗೆ ನಾವು ಕಾರಣರಾಗಬೇಕು. ಅಂತಃಪುರದವರ ಬದ್ಧತೆಯಿದು. ವ್ಯಾಸರೊಂದಿಗಿನ ನಿಯೋಗದಿಂದಾಗಿ ನಿಮ್ಮಿಬ್ಬರಿಗೂ ಮಕ್ಕಳಾದವು, ನಿಜ. ಆದರೆ ಸಿಂಹಾಸನವೇರಲು ಇಬ್ಬರೂ ಅರ್ಹರಲ್ಲ. ಇಬ್ಬರಿಗೂ ಒಂದೊಂದು ಕೊರತೆಯಿದೆ. ರಾಜನಾಗಲು ಕಣ್ಣು ಬೇಕು. ಕಣ್ಣು ನೋಡಿ ತಣಿಯುವ ಬಣ್ಣವೂ ಬೇಕು. ಹಾಗಾಗಿ ಯೋಗ್ಯ ಉತ್ತರಾಧಿಕಾರಿಗಳು ಈ ಇಬ್ಬರೂ ಅಲ್ಲವೆಂದು ನನಗನ್ನಿಸುತ್ತದೆ. ನೀನು ಮನಸ್ಸು ಮಾಡಬೇಕು. ಇನ್ನೊಮ್ಮೆ ಸಿದ್ಧಳಾಗಬೇಕು.’
ಅಂಬಿಕೆಗೆ ಸಿಡಿಲು ಬಡಿದ ಅನುಭವ. ಆಗಿ ಮುಗಿದುಹೋಯಿತು ಎಂದುಕೊಂಡ ಸಮಸ್ಯೆ ಮತ್ತೆ ಎದುರಾಗಿತ್ತು. ಅವಳು ಒಪ್ಪಲೇ ಇಲ್ಲ. ಹಠ ಹಿಡಿದಳು. ತನ್ನಿಂದ ಸಾಧ್ಯವೇ ಇಲ್ಲವೆಂದಳು. ಸತ್ಯವತಿ ಬಿಡಬೇಕಲ್ಲ. ತುಂಬಾ ಮಾತುಕತೆಯ ಕೊನೆಗೆ ಒಲ್ಲದ ಮನಸ್ಸಿನಿಂದ ಅಂಬಿಕೆ ಒಪ್ಪಿಕೊಂಡಳು.

 


ನಿಯೋಗದ ದಿನ ಹತ್ತಿರವಾಯಿತು. ಅಂಬಿಕೆಗೆ ಆತಂಕ ಹೆಚ್ಚಾಗತೊಡಗಿತು. ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲವೆನಿಸತೊಡಗಿತು. ಆದರೆ ಬೇರೆ ದಾರಿ ಇರಲಿಲ್ಲ. ದಿನ ಬಂದೇಬಿಟ್ಟಿತು. ಭಯ ಆರಂಭವಾಯಿತು. ರಾತ್ರಿಯಾಯಿತು. ಎದೆ ಢವಗುಟ್ಟತೊಡಗಿತು. ಆಗುವುದೇ ಇಲ್ಲ ಎಂದು ನಿರ್ಣಯಿಸಿಬಿಟ್ಟಳು.
ಸುಂದರಿಯೂ, ಸುಶೀಲೆಯೂ ಆದ ತನ್ನ ಸೇವಕಿಯನ್ನು ಕರೆದಳು. ತನ್ನದೇ ವಸ್ತ್ರ-ಆಭರಣಗಳಿಂದ ಅವಳನ್ನು ತಾನೇ ಸಿಂಗರಿಸಿದಳು. ವ್ಯಾಸರು ಬರುವ ವಿಷಯವನ್ನು ಹೇಳಿದಳು. ಶಯನಾಗಾರಕ್ಕೆ ಅವಳನ್ನು ಕಳುಹಿಸಿಕೊಟ್ಟಳು.
ದಾಸಿ ಕಾಯತೊಡಗಿದಳು. ಮಹರ್ಷಿ ಆಗಮಿಸಿದರು. ಕರಗಳನ್ನು ಜೋಡಿಸಿ ಮಂದಸ್ಮಿತೆಯಾಗಿ ಸ್ವಾಗತಿಸಿದಳು ದಾಸಿ. ಅವರನ್ನು ಹಂಸತೂಲಿಕಾತಲ್ಪದಲ್ಲಿ ಕುಳ್ಳಿರಿಸಿದಳು. ಪೂಜಿಸಿದಳು, ಸೇವಿಸಿದಳು, ಉಪಚರಿಸಿದಳು.
ವ್ಯಾಸರು ಸಂತುಷ್ಟರಾದರು. ಅವಳ ಸದ್ವರ್ತನೆ ಅವರ ಮನಸ್ಸನ್ನು ಗೆದ್ದಿತು. ಪ್ರಸನ್ನರಾದರು. ರಾತ್ರಿಯನ್ನು ಅಲ್ಲಿಯೇ ಕಳೆದರು. ಎದ್ದವರು ಹೀಗೆಂದರು- ‘ಶುಭಾಂಗಿ ನಿನ್ನ ಬದುಕಿನ ಕಷ್ಟವಳಿಯಿತು. ನೀನು ಇನ್ನು ಮುಂದೆ ಅರಮನೆಯ ದಾಸಿಯಾಗಿರುವುದಿಲ್ಲ. ಶ್ರೇಷ್ಠನೊಬ್ಬ ನಿನ್ನ ಗರ್ಭವನ್ನು ಪ್ರವೇಶಿಸಿದ್ದಾನೆ. ನಿನ್ನನ್ನು ಮಹಾಮಾತೆಯನ್ನಾಗಿಸಲು ಅವನು ಹುಟ್ಟಿಬರುತ್ತಾನೆ. ಅವನು ಧರ್ಮದ ಮರ್ಮವನ್ನು ತಿಳಿದವನಾಗಿರುತ್ತಾನೆ. ಧರ್ಮದಂತೆ ನಡೆಯುವವನಾಗಿರುತ್ತಾನೆ. ಮಹಾಮೇಧಾವಿಯಾಗಿರುತ್ತಾನೆ. ಬಹುದೊಡ್ಡ ವಿದ್ವಾಂಸನಾಗಿರುತ್ತಾನೆ. ಯಶಸ್ಸು ಕೀರ್ತಿಗಳು ಅವನನ್ನು ಅರಸಿ ಬರುತ್ತವೆ. ಮುಂದಿನ ಜನಾಂಗಗಳು ಅವನಿಗೆ ನತಮಸ್ತಕವಾಗಿರುತ್ತವೆ’.
ಸೇವೆಗೆ ಫಲ ದೊರೆತಿತ್ತು; ದಾಸಿಯ ಮನವರಳಿತ್ತು.

 


ಹೊರಬಂದ ವ್ಯಾಸರನ್ನು ಸತ್ಯವತಿ ಆತಂಕದಿಂದ ಮಾತನಾಡಿಸಿದಳು. ‘ಏನಾಯ್ತು’ ಎಂದು ವಿಚಾರಿಸಿದಳು. ‘ಅಮ್ಮಾ, ನಿನ್ನ ಸೊಸೆಯು ಶಯನಾಗಾರಕ್ಕೆ ಬರಲಿಲ್ಲ. ಅವಳ ದಾಸಿಯನ್ನು ಕಳುಹಿಸಿಕೊಟ್ಟಳು. ದಾಸಿಯ ಸತ್ಕೃತಿ ಅವಳಿಗೆ ಶ್ರೇಯಸ್ಸನ್ನು ತಂದಿತು. ಅಪ್ರತಿಮಮೇಧಾವಿಯೂ ಅನುಪಮವಿದ್ವಾಂಸನೂ ಆದ ಮಗ ಹುಟ್ಟುತ್ತಾನೆ.
ರಾಜನಾಗಲಾರನಾದರೂ ರಾಜತ್ವಕ್ಕೆ ನೆರವಾಗುತ್ತಾನೆ’. ಸತ್ಯವತಿಯಲ್ಲಿ ಮಾತಿರಲಿಲ್ಲ. ವ್ಯಾಸರು ನಮಿಸಿ ತೆರಳಿದರು.
ನವಮಾಸ ತುಂಬಿತು. ದಾಸಿ ಹೆತ್ತಳು. ತೇಜಃಪುಂಜವಾದ ಮಗು ಜನಿಸಿತು. ಅರಮನೆ ಕುರುಕುಲದ ಆ ಮಾರ್ಗದರ್ಶಿಯನ್ನು ವಿದುರನೆಂದಿತು.

 


ವಿದುರನೆಂದರೆ ಸಾಮಾನ್ಯನಲ್ಲ; ಸಾಕ್ಷಾತ್ ಯಮಧರ್ಮನ ಅವತಾರನಾತ.
***

ಶಾಪಗ್ರಸ್ತ ಯಮನೇ ವಿದುರನಾಗಿ ಹುಟ್ಟಿದ್ದು. ಯಮನಿಗಿತ್ತು ಅಣೀಮಾಂಡವ್ಯ ಮುನಿಗಳ ಶಾಪ.

 


ಮಾಂಡವ್ಯನೆಂಬೊಬ್ಬ ಮಹರ್ಷಿ. ಧೃತಿಯುಳ್ಳವರು. ಸತ್ಯನಿಷ್ಠರು. ಧರ್ಮವನ್ನರಿತವರು. ಸದಾ ತಪೋನಿರತರು. ಒಮ್ಮೆ ಮಹರ್ಷಿ ಅತ್ಯುಗ್ರ ತಪಸ್ಸನ್ನು ಆರಂಭಿಸಿದರು. ತನ್ನ ಆಶ್ರಮದ ಪಕ್ಕದ ಮರದ ನೆರಳಲ್ಲಿ ಕುಳಿತು, ಎರಡೂ ಕೈಗಳನ್ನೂ ಮೇಲೆತ್ತಿ ತಪಸ್ಸು ಮಾಡತೊಡಗಿದರು. ಅದೂ ಮೌನವ್ರತ ಬೇರೆ. ಹೀಗೆ ಅದೆಷ್ಟೋ ವರ್ಷಗಳು ಕಳೆದು ಹೋದವು.

 


ಒಂದು ದಿನ ಕೆಲವು ಕಳ್ಳರು ಕದ್ದ ಮಾಲಿನೊಂದಿಗೆ ಮಹಾಯೋಗಿಯಿದ್ದೆಡೆಗೆ ಓಡಿಬಂದರು. ಅವರನ್ನು ರಾಜಭಟರು ಬೆನ್ನಟ್ಟಿದರು. ಕಳ್ಳರು ಆಶ್ರಮದ ಒಳಹೊಕ್ಕರು. ಕಳವಿನ ವಸ್ತುಗಳನ್ನು ಅಲ್ಲಿಯೇ ಬಚ್ಚಿಟ್ಟರು. ತಾವೂ ಅಡಗಿಕುಳಿತರು.


ಬೆನ್ನಟ್ಟಿ ಬಂದ ರಾಜಭಟರು ಆಶ್ರಮದ ಬಳಿ ಬಂದರು. ಕಳ್ಳರೆಲ್ಲೂ ಕಾಣಲಿಲ್ಲ. ಮಹರ್ಷಿಯನ್ನು ಕಂಡರು, ನಮಿಸಿದರು, ಕೇಳಿದರು. ‘ದ್ವಿಜಶ್ರೇಷ್ಠ, ಕಳ್ಳರು ಯಾವ ದಾರಿಯಲ್ಲಿ ಓಡಿದರು? ಆ ದಾರಿಯಲ್ಲಿ ಶೀಘ್ರವಾಗಿ ನಾವವರನ್ನು ಹಿಂಬಾಲಿಸುತ್ತೇವೆ. ಹೇಳಿ.’ ಮೌನವ್ರತದ ಮುನಿ ಮಾತನಾಡಲಿಲ್ಲ. ತಪೋಮಗ್ನರಿಗೆ ಕಳ್ಳರೂ ಕಂಡಿರಲಿಲ್ಲ, ಈಗ ರಾಜಭಟರೂ ಕಾಣಲಿಲ್ಲ. ಮತ್ತೆ ಮತ್ತೆ ಕೇಳಿದರು. ಮುನಿ ಮೌನದಲ್ಲೇ ಇದ್ದರು.
ಅತ್ತ-ಇತ್ತ ಹುಡುಕಿದರು. ಆಶ್ರಮದ ಒಳಹೋದರು. ಕಳ್ಳರು ಮಾಲು ಸಮೇತ ಸಿಕ್ಕಿಬಿದ್ದರು. ರಾಜಭಟರಿಗೆ ಮಹರ್ಷಿಯ ಮೇಲೆ ಸಂಶಯ ಮೂಡಿತು. ಕಳ್ಳರು ಇಲ್ಲೇ ಇದ್ದರೂ ಇವರು ಮಾತನಾಡಲಿಲ್ಲ, ಋಷಿಯಂತಿರುವ ಇವರೇ ಕಳ್ಳರ ನಾಯಕನಿರಬೇಕು. ಹಾಗಾಗಿಯೇ ಕಳ್ಳರು ಇಲ್ಲಿಗೆ ಓಡಿಬಂದಿದ್ದು ಎಂದುಕೊಂಡರು. ಕಳ್ಳರೊಂದಿಗೆ ಮಾಂಡವ್ಯರನ್ನೂ ರಾಜಸಭೆಗೆ ಎಳೆದೊಯ್ದರು.


ರಾಜನೂ ಹೆಚ್ಚು ಯೋಚಿಸಲಿಲ್ಲ. ಭಟರು ನುಡಿದದ್ದನು ಕೇಳಿದ ಎಲ್ಲರಿಗೂ ಶೂಲಕ್ಕೇರಿಸುವ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಿದ. ಶಿಕ್ಷಾಧಿಕಾರಿ ಎಲ್ಲರನ್ನೂ ಶೂಲಕ್ಕೇರಿಸಿದರು.
ಕಳ್ಳರು ಸತ್ತರು. ಆ ಧರ್ಮಾತ್ಮ ಮಾತ್ರ ಯೋಗಬಲದಿಂದ ಬದುಕುಳಿದರು. ಉಪವಾಸವೂ, ಶೂಲದ ನೋವೂ ಕಾಡಲೇ ಇಲ್ಲ ಅವರನ್ನು. ಮೈಮರೆತಿದ್ದರು. ಒಳಗೆ ಮುಳುಗಿದ್ದರು. ಶೂಲಾಗ್ರದಲ್ಲಿ ತಪಸ್ಸು ಮಾಡುತ್ತಿದ್ದ ತಪಸ್ವಿಯ ತಾಪ ಮುನಿಗಳಿಗೆ ಅರಿವಾಯಿತು. ಸಂತಾಪದಿಂದ ಕಂಗೆಟ್ಟ ಮುನಿಗಳು ರಾತ್ರಿ ಪಕ್ಷಿಗಳಾಗಿ ಅಲ್ಲಿಗೆ ಬಂದರು. ಮಾಂಡವ್ಯರಿಗೆ ಕಾಣಿಸಿಕೊಂಡರು. ಕೇಳಿದರು. ‘ಬ್ರಹ್ಮನ್, ನೀನಾವ ತಪ್ಪು ಮಾಡಿರುವಿ? ನಿನಗೇಕೆ ಶೂಲದ ಭಯಾನಕ ಶಿಕ್ಷೆ ವಿಧಿಸಲ್ಪಟ್ಟಿದೆ?’
‘ನನ್ನ ನೋವಿಗೆ ಇನ್ನಾರನ್ನು ದೋಷಿಗಳನ್ನಾಗಿಸಲಿ? ನನ್ನ ವಿಷಯದಲ್ಲಿ ಯಾರೂ ತಪ್ಪು ಮಾಡಿಲ್ಲ.’ ಮಾಂಡವ್ಯರು ಮತ್ತೆ ತಪಸ್ಸಿನಲ್ಲಿ ಮುಳುಗಿಹೋದರು.

 


ಹೀಗೆ ಅದೆಷ್ಟೋ ದಿನಗಳು ಕಳೆದವು. ಒಂದು ದಿನ ನಗರವನ್ನು ಸುತ್ತುತ್ತಿದ್ದ ರಾಜದೂತರಿಗೆ ಇದು ಕಂಡಿತು. ಅಚ್ಚರಿಯಾಯಿತು. ಓಡಿ ಬಂದು ರಾಜನಿಗೆ ತಿಳಿಸಿದರು. ಮಂತ್ರಿ, ಪುರೋಹಿತರೊಂದಿಗೆ ರಾಜ ದೌಢಾಯಿಸಿದ. ಮಾಂಡವ್ಯರ ಮುಂದೆ ನಿಂತ. ಪರಿಪರಿಯಾಗಿ ಕ್ಷಮೆ ಕೇಳಿದ. ಅಂಗಲಾಚಿ ಬೇಡಿದ. ‘ಮಹರ್ಷೇ, ತಿಳಿಯದೇ ದೊಡ್ಡ ತಪ್ಪು ಮಾಡಿಬಿಟ್ಟೆ. ಅಜ್ಞಾನಿ ನಾನು. ಪ್ರಸನ್ನರಾಗಿ. ನನ್ನ ಮೇಲೆ ಕೋಪಗೊಳ್ಳಬೇಡಿ.’ ಮಹರ್ಷಿಗೋ ಯಾರ ಮೇಲೂ ಸಿಟ್ಟು ಇರಲಿಲ್ಲ. ತನ್ನ ಯಾವುದೋ ಪಾಪಕ್ಕೆ ಇದು ಶಿಕ್ಷೆ ಎಂದು ಭಾವಿಸಿದ್ದರು. ದೊರೆಯನ್ನು ಕ್ಷಮಿಸಿದರು.
ಶೂಲದಿಂದ ಮಾಂಡವ್ಯರನ್ನು ಬಿಡಿಸುವ ಪ್ರಯತ್ನ ನಡೆಯಿತು. ಫಲ ಸಿಗಲಿಲ್ಲ. ಅನಿವಾರ್ಯವಾಗಿ ಒಳಹೊಕ್ಕ ಶೂಲದ ಭಾಗವನ್ನು ಒಳಗೆಯೇ ಬಿಟ್ಟು, ಉಳಿದ ಭಾಗವನ್ನು ತುಂಡು ಮಾಡಲಾಯಿತು.
ಏನೂ ಆಗಲೇ ಇಲ್ಲವೇನೋ ಎಂಬಂತೆ, ಮಹರ್ಷಿ ಮತ್ತೆ ತಪಸ್ಸಿಗೆ ತೆರಳಿದರು. ಯಾತನೆಯನ್ನು ಅನುಭವಿಸುತ್ತಲೇ ಮಹತ್ತರ ತಪಸ್ಸಿನಲ್ಲಿ ಮಗ್ನರಾದರು. ಮೊಳೆ ಅವರ ದೇಹದಲ್ಲೇ ಇದ್ದುದರಿಂದ ಅವರನ್ನು ಲೋಕ ‘ಅಣೀಮಾಂಡವ್ಯ’ ಎಂದು ಕರೆಯಿತು. ಕಾಲ ಕಳೆಯಿತು. ಮಹರ್ಷಿಯ ಈ ಬದುಕು ಮುಗಿಯಿತು. ಮೇಲಿನ ಲೋಕ ಸೆಳೆಯಿತು.
ಮೇಲೇರಿದ ಮಹರ್ಷಿಗೆ ‘ತನ್ನ ಯಾವ ಪಾಪಕ್ಕೆ ತಾನು ಶಿಕ್ಷೆ ಅನುಭವಿಸಿದೆ’ ಎನ್ನುವ ವಿಷಯ ಕಾಡತೊಡಗಿತು. ಯಾಕೆಂದರೆ ಅವರಿಗೆ ತಿಳಿದಂತೆ ಅವರು ಯಾವ ತಪ್ಪನ್ನೂ ಮಾಡಿರಲಿಲ್ಲ. ತಿಳಿದುಕೊಳ್ಳಲೇಬೇಕೆನ್ನುವ ಅಪೇಕ್ಷೆ ಹೆಚ್ಚಾಯಿತು. ಮಾಂಡವ್ಯಮುನಿ ಯಮಧರ್ಮನ ಆಸ್ಥಾನಕ್ಕೆ ತೆರಳಿದರು. ಸಿಂಹಾಸನಾರೂಢನಾಗಿದ್ದ ಯಮನನ್ನು ಪ್ರಶ್ನಿಸಿದರು. ‘ಧರ್ಮನೇ! ನನ್ನ ಯಾವ ತಪ್ಪಿಗೆ ನಾನು ಅನುಭವಿಸಿದೆ? ಹೇಳು. ನನ್ನ ಪಾಪವಾವುದೂ ನನಗೆ ಕಾಣುತ್ತಿಲವಲ್ಲ.’


ಯಮ ಉತ್ತರಿಸಿದ ‘ಮಹರ್ಷಿ! ಅಪರಾಧ ಮಾಡದೇ ಶಿಕ್ಷೆಯಾಗದು. ನಿನ್ನ ಬಾಲ್ಯದಲ್ಲಿ ನೀನು ಚಿಟ್ಟೆಗಳ ಪೃಷ್ಠಕ್ಕೆ ಹುಲ್ಲುಕಡ್ಡಿಯಿಂದ ಚುಚ್ಚಿ ಹಿಂಸೆ ನೀಡಿದ್ದೆ. ಅದಕ್ಕೆ ನೀನು ಶೂಲದ ಶಿಕ್ಷೆಯನ್ನು ಅನುಭವಿಸುವಂತಾಯಿತು. ಅಲ್ಪ ದಾನವನ್ನು ಕೊಟ್ಟರೂ ಅದು ಬಹುಫಲವನ್ನು ಕೊಡುವುದಲ್ಲವೇ? ಇದೂ ಹಾಗೆಯೇ. ಸಣ್ಣ ಅಧರ್ಮವೂ ದೊಡ್ಡ ದುಃಖವನ್ನು ನೀಡುತ್ತದೆ.’
ಮಹರ್ಷಿಗೆ ಅಚ್ಚರಿಯಾಯಿತು. ‘ಯಮಧರ್ಮ! ಇದೇನಿದು ನೀನಾಡುತ್ತಿರುವುದು? ಬಾಲ್ಯದಲ್ಲಿ ಮಾಡಿದ್ದಕ್ಕೆ ಶಿಕ್ಷೆಯೇ? ಹನ್ನೆರಡು ವರ್ಷಗಳವರೆಗೆ ಮಕ್ಕಳು ಮಾಡುವ ತಪ್ಪಿಗೆ ಶಿಕ್ಷೆ ನೀಡಬಾರದೆನ್ನುವುದು ಮರೆತುಹೋಯಿತೇ? ಅಲ್ಲದೇ, ಅಲ್ಪ ಅಪರಾಧನಕ್ಕೆ ನೀನು ದೊಡ್ಡ ಶಿಕ್ಷೆಯನ್ನಿತ್ತಿರುವೆ. ತಪ್ಪು ಮಾಡಿರುವೆ. ತಪ್ಪಿಗೆ ಶಿಕ್ಷೆಯನ್ನು ನೀನು ಅನುಭವಿಸಲೇಬೇಕು. ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟು.’
ಮಹರ್ಷಿ ಮತ್ತೆ ನುಡಿದರು. ‘ನಾನು ಇಂದಿನಿಂದ ಹೊಸ ನಿಯಮವನ್ನು ರೂಪಿಸುತ್ತಿದ್ದೇನೆ. ಹದಿನಾಲ್ಕು ವರ್ಷಗಳ ವರೆಗಿನ ತಪ್ಪು ಅಪರಾಧವಾಗುವುದಿಲ್ಲ, ಪಾಪವಾಗುವುದಿಲ್ಲ. ಅದರ ಅನಂತರದ ತಪ್ಪೇ ಪಾಪವಾಗುವುದು.’
ಶಾಪವೋ? ಶಿಕ್ಷೆಯೋ? ನೀಡಿದ ಮಹರ್ಷಿ, ಸ್ವಸ್ಥಾನಕ್ಕೆ ತೆರಳಿದರು. ಯಮ, ವಿದುರನಾಗಿ ಜನ್ಮ ತಾಳಿದ.
***

Author Details


Srimukha

Leave a Reply

Your email address will not be published. Required fields are marked *