ಯೋಗಿ ಕಂಡ ಕನಸು

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ವರುಷಗಳಿಂದ ಹಿಮಾಲಯದ ಆ ಚಳಿಯಲ್ಲಿ ಧ್ಯಾನಾಸಕ್ತನಾಗಿ ಹೆಪ್ಪುಗಟ್ಟಿ ಕುಳಿತಿದ್ದ ಯೋಗಿಗೊಂದು ಕನಸು ಬಿತ್ತು. ಆ ಕನಸಿನಲ್ಲಿ ಆತ ಕಂಡಿದ್ದು ದಟ್ಟ ಹಸಿರಿನಿಂದ ತುಂಬಿ ಕಂಗೊಳಿಸುವ ಪ್ರಶಾಂತವಾದ ಒಂದು ಲೋಕ. ಅಲ್ಲಿ ಫಲ ಬಿಡದ ಮಾಮರಗಳಿಲ್ಲ. ಪ್ರತಿಯೊಂದು ಹುಲ್ಲು ಕಡ್ಡಿಗಳಲ್ಲೂ ಹೂವುಗಳು ಅರಳಿ ನಿಂತಿವೆ. ಯಥೇಚ್ಛವಾಗಿ ಹರಿದು ಸಾಗರ ಸೇರುವ ತೊರೆ ನದಿಗಳಲ್ಲಿ ಕಲ್ಮಶವು ಲವಲೇಶವೂ ಇಲ್ಲ. ತಪೋವನ ತುಲ್ಯವಾದ ಆ ಪ್ರದೇಶದಲ್ಲಿ ಹೊಗೆಯಾಡುವ ಗುಡಿಸಲುಗಳೂ ಕಾಣಸಿಗುತ್ತವೆ ಅಲ್ಲಲ್ಲಿ. ಆ ಗುಡಿಸಲುಗಳ ಸುತ್ತ ಹರಡಿ ನಿಂತಿರುವ ವಿಶಾಲ ಹೊಲಗದ್ದೆಗಳಲ್ಲಿ ಕೈಕಾಲುಗಳನ್ನು ಕೆಸರಾಗಿಸಿ ದುಡಿವ ಜನರ ಕಣ್ಣುಗಳಲ್ಲಿ ಧನ್ಯತೆಯ ಹೊಳಪಿದೆ. ಗುಡಿಸಲುಗಳ ಸುತ್ತಲೂ ಕೇಕೆ ಹಾಕಿ ನಕ್ಕು ನಲಿದಾಡುವ ಪುಟ್ಟ ಮಕ್ಕಳ ಜೊತೆ ಜಾನುವಾರುಗಳೂ ಸೇರಿಕೊಳ್ಳುತ್ತವೆ.

 

ಆ ಲೋಕವನ್ನು ಸೂಕ್ಷ್ಮವಾಗಿ ದಿಟ್ಟಿಸಿದ ಯೋಗಿಯು ಅಲ್ಲೊಂದು ಅತಿಶಯವನ್ನು ಕಂಡನು. ಆ ಲೋಕದಲ್ಲಿ ಎಲ್ಲವೂ ಕ್ಷಣಿಕ! ಇಂದು ಹುಟ್ಟಿದ ಮಗುವು ಒಂದೆರಡು ವರ್ಷಗಳಲ್ಲೇ ಬೆಳೆದು ಯೌವನವನ್ನು ಪಡೆಯುತ್ತದೆ. ಹತ್ತುವರ್ಷಕ್ಕೆಲ್ಲ ವೃದ್ಧಾಪ್ಯವಾವರಿಸಿ ಮೃತವಾಗುತ್ತದೆ. ಇಂದು ಬಿತ್ತಿದ ಬೀಜ ನಾಳೆಯೇ ಗಿಡವಾಗುತ್ತದೆ! ಕಣ್ಣು ಮುಚ್ಚಿ ತೆರೆಯುವುದರೊಳಗೆ ಹುಟ್ಟು ಸಾವುಗಳು, ನೋವು ನಲಿವುಗಳು ಕಣ್ಣಮುಂದೆಯೇ ಹಾದು ಕ್ಷಣ ಕ್ಷಣಕ್ಕೂ ಕಾಲ ಬದಲಾಗುತ್ತಲೇ ಇರುತ್ತದೆ.

 

ಅಲ್ಲಿ ಕಳ್ಳರಿಲ್ಲ, ಖದೀಮರಿಲ್ಲ, ದೊಂಬಿ, ಗಲಾಟೆಗಳಿಲ್ಲ, ರೋಗ ರುಜಿನಗಳೂ ಇಲ್ಲ. ಕಪಟತೆಯೆಂದರೆ ಏನೆಂದೇ ಅರಿಯದ ಜನರು ದೈವವಿಶ್ವಾಸಿಗಳು. ಸ್ತ್ರೀಯರು, ಪುರುಷರು, ನಾನಾ ವರ್ಗದ ಜನರೆಂಬ ಭೇದವಿಲ್ಲದೆಯೇ ಸಕಲರೂ ತಮ್ಮ ಪರಿಧಿಯನ್ನರಿತು  ಧರ್ಮಕ್ಕನುಗುಣವಾಗಿಯೇ ಜೀವಿಸುವರು.

 

ಶಾಂತಸುಂದರವಾದ ಆ ಲೋಕವು ಹಾಗೆಯೇ ಮುಂದುವರಿಯುತ್ತಿರಲು, ಎತ್ತರವಾದ ಗುಡ್ಡದ ಮೇಲೊಂದು ಮುಂಜಾವ ಇದ್ದಕ್ಕಿದ್ದಂತೆಯೇ ವಿಚಿತ್ರವಾದ ಆಕೃತಿಯೊಂದು ಎದ್ದು ಬಂತು. ನೋಡಿದರೆ ನೇಣುಗಂಬದಂತಿತ್ತು ಆ ಆಕೃತಿ. ಅದೇನಿರಬಹುದು ಎಂದು ನೋಡಿದವರಿಗಾರಿಗೂ ಅರ್ಥವೇ ಆಗಲಿಲ್ಲ. ಅದರತ್ತ ಸುಳಿಯುವ ಧೈರ್ಯವೂ ಆಗಲಿಲ್ಲ. ಆದರೆ ವಿಚಿತ್ರವಾದ ವೇಷಭೂಷಣವನ್ನು ತೊಟ್ಟ ವ್ಯಕ್ತಿಯೊಬ್ಬ ನಿತ್ಯವೂ ಆ ಗುಡ್ಡವನ್ನೇರುತ್ತಿದ್ದ. ಅವನ ಕೊರಳಲ್ಲೂ ಆ ನೇಣುಗಂಬದ ಅದೇ ಆಕೃತಿಯ ಪದಕವೊಂದು ಜೋತಾಡುತ್ತಿತ್ತು. ಗುಡ್ಡದಿಂದ ಇಳಿದು ಬಂದ ಆ ವ್ಯಕ್ತಿಯು ಎಲ್ಲರೊಂದಿಗೂ ಸಹಜವಾಗಿಯೇ ಬೆರೆಯುತ್ತಿದ್ದ. ಆದರೂ ಅವನ ಬಳಿ ಜನರಿಗೇಕೋ ಒಂದು ಸಂದೇಹ. ವಿಚಿತ್ರವಾದ ಅವನ ವೇಷಭೂಷಣದಿಂದಾಗಿ ಹಾಗೂ ನಿಗೂಢವಾಗಿ ಎದ್ದು ಬಂದ ಆ ಆಕೃತಿಯ ಜೊತೆ ಅವನ ಸಂಪರ್ಕದಿಂದಾಗಿ ಜನರು ಅವನೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ.

 

ಆದರೂ ದಿನಗಳುರುಳಿದಂತೆಯೇ ಆ ವ್ಯಕ್ತಿ ಎಲ್ಲರಿಗೂ ಹತ್ತಿರವಾಗತೊಡಗಿದನು. ತನ್ನ ಪವಾಡಗಳಿಂದ ಜನರ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸತೊಡಗಿದನು ಆತ. ಜನರು ಅವನನ್ನು ಯೋಗಿಯೆಂದೇ ನಂಬಿದರು. ಅವನ ಸುತ್ತಲೂ ಗುಂಪಾಗಿ ಸೇರತೊಡಗಿದರು. ಗುಡ್ಡದ ಮೇಲಿರುವ ಆಕೃತಿಯ ರಹಸ್ಯವನ್ನವನು ಜನರ ಮುಂದೆ ಹೇಳತೊಡಗಿದನು.

 

ಅವನು ಬೇರೆಯೇ ಒಂದು ಲೋಕದಿಂದ ಬಂದವನು. ಗುಡ್ಡದ ಮೇಲಿರುವ ಆ ಆಕೃತಿಯು ಅವನು ಪೂಜಿಸುವ ದೈವದ ಸಂಕೇತ‌. ಆ ದೈವವು ಜನರ ಲೌಕಿಕವಾದ ಎಲ್ಲ ಬಾಧೆಗಳನ್ನೂ ಪರಿಹಾರ ಮಾಡುತ್ತದೆ. ಅವನು ಬಂದ ಆ ಲೋಕವೂ ಈ ಲೋಕದಂತಲ್ಲ. ತುಂಬ ಮುಂದುವರಿದಿದೆ. ಅಲ್ಲಿಯ ಜನರು ಶ್ರಮವನ್ನೇ ಪಡಬೇಕಾಗಿಲ್ಲ. ಎಲ್ಲದಕ್ಕೂ ಯಂತ್ರಗಳಿವೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಬರುವಂತೆ ಮಾಡುವ ಕೃತಕ ಗೊಬ್ಬರಗಳಿವೆ, ಯಂತ್ರಗಳಿವೆ ಅಲ್ಲಿ.

ಅವನು ವಿವರಿಸುತ್ತಾ ಹೋದಂತೆಯೇ ಜನರು ಮಂತ್ರ ಮುಗ್ಧರಾದರು. ಬಹಳಷ್ಟು ಜನರು ಇದರಲ್ಲೇನೋ ಕಪಟವಿದೆಯೆಂಬ ಭಾವದಿಂದ ಅವನ ಬಳಿಯಿಂದೆದ್ದು ನಡೆದರು. ಉಳಿದ ಕೆಲವು ಮಂದಿ ಅವನ ಅನುಯಾಯಿಗಳಾದರು. ನೋಡ ನೋಡುತ್ತಿರುವಂತೆಯೇ ಗುಡ್ಡವನ್ನೇರಿ ಇಳಿದು ಬರುವ ಊರ ಜನರ ಸಂಖ್ಯೆಯು ಅಧಿಕವಾಗತೊಡಗಿತು. ಕಂಡ ಕಂಡವರ ಕೊರಳಿನಲ್ಲಿ ಆ ಆಕೃತಿಯ ಪದಕಗಳು ನೇತಾಡತೊಡಗಿದವು. ಆ ಜನರ ಜೀವನ ಕ್ರಮವು ಬದಲಾಯಿತು. ಜನರು ಸಹಜತೆಯನ್ನೇ ನೆಚ್ಚಿ ಜೀವಿಸುತ್ತಿದ್ದ ಆ ಲೋಕದಲ್ಲೀಗ ಕೃತಕತೆಯು ಅಡಿಯಿಡತೊಡಗಿತು.

 

ಅವನ ಅನುಯಾಯಿಗಳಾದ ಜನರು ಅವನು ನೀಡಿದ ಗೊಬ್ಬರಗಳಿಂದ, ಅವನು ನೀಡಿದ ಯಂತ್ರಗಳಿಂದ ಉಳುಮೆ ಮಾಡತೊಡಗಿದರು. ಅತಿಶಯವೆಂಬಂತೆಯೇ ಅವರ ಹೊಲಗಳಲ್ಲಿ ಅತಿ ಹೆಚ್ಚಿನ ಇಳುವರಿ ಕಂಡುಬಂತು. ಕಡಿಮೆ ಸಮಯದಲ್ಲಿ, ಕಡಿಮೆ ಸ್ಥಳದಲ್ಲಿ ಹೆಚ್ಚಿನ ಇಳುವರಿ ಪಡೆದ ಆ ಜನರು ಉಳಿದವರಿಗಿಂತ ಶ್ರೀಮಂತರಾದರು. ಅವರು ತಾವು ಇದುವರೆಗೆ ಪೂಜಿಸುತ್ತಿದ್ದ ದೈವವನ್ನು ಮರೆತು ಬಿಟ್ಟರು. ತಮ್ಮ ಧರ್ಮದ ನಂಬಿಕೆಗಳು ಹುಸಿಯೆಂದು ನಂಬತೊಡಗಿದರು. ಪರಿಣಾಮವಾಗಿ ಗುಡ್ಡದ ಮೇಲೆ ಎದ್ದು ಬಂದ ಆ ಆಕೃತಿಯ ಗುಡಿಗಳು ಊರುಕೇರಿಗಳಲ್ಲಿ ತಲೆಯೆತ್ತತೊಡಗಿದವು. ಅವನು ಪರಿಚಯಿಸಿದ ಹೊಸ ಉಪಕರಣಗಳನ್ನು ಜನರಿಗೆ ಬಿಕರಿ ಮಾಡುವ ಮಳಿಗೆಗಳೂ ಹುಟ್ಟಿಕೊಂಡವು. ಹೆಚ್ಚು ಹೆಚ್ಚು ಜನರು ಅವನ ಅನುಯಾಯಿಗಳಾಗುವುದೇ ತಮ್ಮ ವ್ಯಾಪಾರವನ್ನು ವೃದ್ಧಿಸಲಿರುವ ಏಕಮಾರ್ಗ ಎಂದರಿತ ವ್ಯಾಪಾರಸ್ಥರು ಅವನ ಧರ್ಮವನ್ನು ಎಲ್ಲೆಂದರಲ್ಲಿ ಬೋಧಿಸತೊಡಗಿದರು.

 

ನೋಡ ನೋಡುತ್ತಿರುವಂತೆಯೇ ಆ ಲೋಕದಲ್ಲಿ ಎರಡು ಪಂಗಡಗಳು ಸೃಷ್ಟಿಯಾದವು. ಸನಾತನವಾಗಿ ಬಂದ ತಮ್ಮ ನೆಲದ ಧರ್ಮವನ್ನೂ, ಕೃಷಿ ಪದ್ಧತಿಯನ್ನೂ ನೆಚ್ಚಿ ಜೀವಿಸುವ ಜನರ ಒಂದು ಪಂಗಡ. ಬೇರೆ ಲೋಕದಿಂದ ಬಂದ ಆ ವ್ಯಕ್ತಿಯ ಅನುಮಾಯಿಗಳಾಗಿ ಪರಿಷ್ಕಾರದ ಜೀವನ ನಡೆಸುವ ಇನ್ನೊಂದು ಪಂಗಡ. ತಮ್ಮ ಧರ್ಮದತ್ತ ಜನರನ್ನು ಸೆಳೆವ ಅವನ ಅನುಯಾಯಿಗಳ ಯತ್ನವು ಮಿತಿ ಮೀರಿದಂತೆಯೇ ಆ ಲೋಕದಲ್ಲಿ ಪ್ರತಿರೋಧಗಳೂ ಹುಟ್ಟಿಕೊಂಡವು. ದೊಂಬಿ ಗಲಾಟೆಗಳು ನಡೆದವು. ಅವನು ಪರಿಚಯಿಸಿದ ಉಪಕರಣಗಳಿಗೆ ಮಾರು ಹೋದ ಜನರು ಆ ಉಪಕರಣಗಳನ್ನು ಸ್ವಂತವಾಗಿಸುವುದಕ್ಕಾಗಿ ಕಳ್ಳತನ, ಸುಲಿಗೆಯಂತಹ ಕಾರ್ಯಗಳನ್ನೂ ಪ್ರಾರಂಭಿಸಿಬಿಟ್ಟರು.

 

ಅಷ್ಟರೊಳಗೆಯೇ ಇನ್ನೊಂದು ಮಹಾ ದುರಂತವು ಆ ಲೋಕದ ಜನರನ್ನು ಕಾಡತೊಡಗಿತ್ತು. ಯಾವ ಪ್ರದೇಶದಲ್ಲಿ ಅವನ ಅನುಯಾಯಿಗಳು ಹೆಚ್ಚಾಗಿರುವರೋ, ಅವರು ಬಳಸುವ ಉಪಕರಣ ಹಾಗೂ ಕೃತಕ ರಸಗೊಬ್ಬರಗಳಿಂದಾಗಿ ಅಲ್ಲಿಯ ನೆಲವು ಬರಡಾಗತೊಡಗಿತು. ಅಂತರ್ಜಲವು ಬತ್ತಿ ಹೋಗತೊಡಗಿತು. ಬರಗಾಲ, ಅತಿವೃಷ್ಟಿಗಳು ಜನರನ್ನು ಕಾಡತೊಡಗಿದವು. ಅವನು ನೀಡಿದ ಗೊಬ್ಬರವನ್ನು ಬಳಸಿ ಬೆಳೆದ ಬೆಳೆಗಳನ್ನು ಉಪಯೋಗಿಸಿದ ಜನರು ರೋಗರುಜಿನಗಳಿಗೆ ತುತ್ತಾದರು.

 

ಆ ಊರಿನ ಹಿರಿತಲೆಗಳು ಸಂಭವಿಸುತ್ತಿರುವ ದುರಂತವನ್ನು ಅರಿತುಕೊಳ್ಳುವುದರೊಳಗೆ ಕಾಲ ಮಿಂಚಿಹೋಗಿತ್ತು. ಆ ಲೋಕದಲ್ಲಿರುವ ಸಕಲ ವ್ಯಾಪಾರ ವಹಿವಾಟುಗಳಲ್ಲೂ, ಆಡಳಿತ ವರ್ಗದಲ್ಲೂ ಅವನ ಅನುಯಾಯಿಗಳೇ ತುಂಬಿಹೋಗಿದ್ದರು. ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಅವರು ನಡೆಸಿದ ಪ್ರಯತ್ನಗಳು ವ್ಯರ್ಥವಾದವು.

 

ತನಗೆ ಬಿದ್ದ ಆ ಭೀಕರ ಕನಸನ್ನು ನೆನೆದುಕೊಂಡ ಯೋಗಿಯು ಹಿಮಾದ್ರಿಯ ಆ ಶಿಖರದಲ್ಲಿ ಕುಳಿತಿದ್ದರೂ ಬೆವರತೊಡಗಿದನು. ಮತ್ತೆ ಅಲ್ಲಿರಲಾಗಲಿಲ್ಲ ಅವನಿಗೆ. ತಾನು ಹುಟ್ಟಿ ಬೆಳೆದ ಆ ಲೋಕಕ್ಕೆ ಕಂಟಕವೊಂದು ಬಂದೊದಗಿದೆಯೆಂದು ದಿವ್ಯ ದೃಷ್ಟಿಯಿಂದ ಅರಿತುಕೊಂಡ ಅವನು ಅಲ್ಲಿಂದ ಕೆಳಗಿಳಿಯತೊಡಗಿದನು.

ಕೆಳಗಿಳಿಯುತ್ತಲೇ ಅವನು ಕಂಡ ದೃಶ್ಯಗಳು ಅವನನ್ನು ಚಿಂತೆಗೀಡುಮಾಡಿತು. ತಾನು ಕನಸಿನಲ್ಲಿ ಕಂಡ ಆ ಲೋಕ ಬೇರಾವುದೂ ಅಲ್ಲ. ತಾನು ಹುಟ್ಟಿ ಬೆಳೆದ ಭರತಭೂಮಿ. ಅಕ್ಷರಶಃ ಆ ಕನಸಿನಲ್ಲಿ ತಾನು ಕಂಡ ಸಕಲ ಬದಲಾವಣೆಗಳನ್ನೂ ಕಣ್ಣ ಮುಂದಿನ ಭರತಭೂಮಿಯಲ್ಲಿ ಕಂಡು ಮರುಗಿದ ಯೋಗಿಯು ಮತ್ತೆ ಈ ಲೋಕದಲ್ಲಿ ಇರಬೇಕೆಂದೆನಿಸದೇ ಮರಳಿ ಹಿಮಾದ್ರಿಯನ್ನೇರಿದನು. ಭರತಭೂಮಿಯ ಸನಾತನತೆಯು ಮರಳಿ ಬರಲೆಂದು ಪ್ರಾರ್ಥಿಸುತ್ತಾ ಮತ್ತೆ ಅಂತರಂಗದ ಶಾಂತಲೋಕಕ್ಕೆ ಜಾರಿ ಕುಳಿತನು.

Author Details


Srimukha

Leave a Reply

Your email address will not be published. Required fields are marked *