ಗೋಕರ್ಣ: ರಥಸಪ್ತಮಿ ಪುಣ್ಯದಿನವಾದ ಇಂದು ಇಂದು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥದ ಬುಡವನ್ನು ರಥದ ಮನೆಯಿಂದ ಪೂಜೆ ಸಲ್ಲಿಸಿ ಹೊರ ತರಲಾಯಿತು.
ವೇ. ನಾರಾಯಣ ಪಂಡಿತ ಇವರು ರಥದಲ್ಲಿರುವ ಗಣಪತಿಗೆ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಉಪಾಧಿವಂತ ಮಂಡಳದ ಸದಸ್ಯರು, ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ, ರಥಕಟ್ಟುವ ಹಾಲಕ್ಕಿ ಸಮಾಜದವರು, ರಥ ಚಾಲನೆ ಮಾಡುವ ಖಾರ್ವಿ ,ಗಾಬಿತಸಮಾಜದವರು, ಆಚಾರಿಗಳು ಮತ್ತು ಊರ ನಾಗರೀಕರು ಈ ವೇಳೆ ಉಪಸ್ಥಿತರಿದ್ದರು.
ವಿಲಂಬಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಮಾಘ ಕೃಷ್ಣ ನವಮಿಯಿಂದ ಫಾಲ್ಗುಣ ಶುಕ್ಲ ದ್ವಿತೀಯಾ (28-02-2019 ರಿಂದ 08-03-2019) ವರೆಗೆ ಶ್ರೀಸಂಸ್ಥಾನದ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ದಿ.04-03-2019 ಸೋಮವಾರ ಶಿವಯೋಗ ಮತ್ತು ದಿ. 07-03-2019 ಗುರುವಾರಶ್ರೀಮನ್ಮಹಾರಥೋತ್ಸವ ಜರುಗಲಿದೆ. ಈ ಪುಣ್ಯದಿನದಂದು ಸರ್ವರೂ ಪಾಲ್ಗೊಂಡು ಪರಮಾತ್ಮನ ಹಾಗೂ ಶ್ರೀಸಂಸ್ಥಾನದ ಅನುಗ್ರಹಕ್ಕೆ ಪಾತ್ರವಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಆತ್ಮೀಯ ಆಮಂತ್ರಣ ನೀಡಿದೆ.