” ಗುರುಕೃಪೆಯೊಂದಿದ್ದರೆ ಜೀವನದಲ್ಲಿ ಎಲ್ಲವೂ ಸಾಧ್ಯ. ನೋವು, ಸಂಕಷ್ಟ ಎಲ್ಲವೂ ಗುರುಚರಣ ಸ್ಮರಣೆಯ ಮುಂದೆ ಮಂಜಿನಂತೆ ಕರಗಿ ಹೋಗುತ್ತವೆ. ಬದುಕಿನ ಪ್ರತಿಯೊಂದು ಹಂತದಲ್ಲೂ ಗುರುಗಳ ಅನುಗ್ರಹ ನಮ್ಮ ಮೇಲೆ ಇದೆ ಎಂಬ ಭರವಸೆಯೇ ನಮ್ಮ ಜೀವನದ ಬಹುದೊಡ್ಡ ಭಾಗ್ಯ ” ಎಂದು ಭಾವಪೂರ್ಣವಾಗಿ ನುಡಿಯುವವರು ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ವಲಯದ ಪೆರ್ಮುಖ ಈಶ್ವರ ಭಟ್ ಅವರ ಪತ್ನಿ ಕುಸುಮಾ ಪೆರ್ಮುಖ.
ಬಾಯಾರು ಕೆರೆಮೂಲೆ ತಿರುಮಲೇಶ್ವರ ಭಟ್, ವಿಜಯಲಕ್ಷ್ಮಿ ದಂಪತಿಗಳ ಪುತ್ರಿಯಾದ ಕುಸುಮಾ ಅವರು ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ, ಗುರುಭಕ್ತಿ ಮತ್ತು ಸೇವಾ ಮನೋಭಾವವನ್ನು ರೂಢಿಸಿಕೊಂಡು ಬೆಳೆದವರು. ಹಿರಿಯರ ಮಾರ್ಗದರ್ಶನದಿಂದ ಬಂದ ಶ್ರದ್ಧೆ, ಸಂಪ್ರದಾಯ ಮತ್ತು ಗುರುಭಕ್ತಿ ಅವರ ವ್ಯಕ್ತಿತ್ವವನ್ನು ರೂಪಿಸಿದೆ. ‘ಗುರು, ಗೋವು, ಧರ್ಮ ಇವುಗಳೇ ನಮ್ಮ ಬದುಕಿನ ದಿಕ್ಕು ‘ ಎಂಬ ನಂಬಿಕೆ ಅವರ ಜೀವನದಲ್ಲಿ ಪ್ರತಿಬಿಂಬಿಸುತ್ತದೆ.
ಶ್ರೀಮಠದೊಂದಿಗೆ ಇವರ ಸಂಪರ್ಕ ಹೊಸತಲ್ಲ. ೨೦೦೦ನೇ ಇಸವಿಯಿಂದ ಈಶ್ವರೀಶ್ಯಾಮ ಭಟ್ ಬೇರ್ಕಡವು ಅವರ ಮಾರ್ಗದರ್ಶನದೊಂದಿಗೆ ಶ್ರೀಮಠದ ಪದಾಧಿಕಾರಿಯಾಗಿ ಸೇವೆಗೈಯಲಾರಂಭಿಸಿದ ಕುಸುಮಾ ಪೆರ್ಮುಖ ಅವರು, ಲಲಿತಾ ಸಹಸ್ರನಾಮ ಪಾರಾಯಣದ ಸಂದರ್ಭದಲ್ಲಿ ಕುಂಬಳೆ ಸೀಮಾ ಪರಿಷತ್ ನ ಉಪಾಸನಾ ವಿಭಾಗದಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಶ್ರೀಮಠದ ಸೇವಾ ಜೀವನವನ್ನು ಆರಂಭಿಸಿದರು. ಆ ದಿನಗಳಿಂದ ಇಂದಿನವರೆಗೂ ನಿರಂತರವಾಗಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಅವರು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಳ್ಳತ್ತಡ್ಕ ವಲಯ ಮಾತೃಪ್ರಧಾನೆಯಾಗಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಇವರದ್ದು. ನಂತರ ಮುಳ್ಳೇರಿಯ ಮಂಡಲ ಮಾತೃ ಪ್ರಧಾನೆಯಾಗಿಯೂ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಂಘಟನೆ, ಸಂಯೋಜನೆ, ಸೇವೆ ಈ ಮೂರು ಅಂಶಗಳ ಸಮತೋಲನದೊಂದಿಗೆ ಕಾರ್ಯನಿರ್ವಹಿಸಿದ ಕುಸುಮಾ ಪೆರ್ಮುಖ ಅವರು ಮುಳ್ಳೇರಿಯ ಮಂಡಲ ಉಪಾಧ್ಯಕ್ಷೆಯಾಗಿಯೂ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಸೇವಾಪರತೆಯನ್ನು ಮೆರೆದಿದ್ದಾರೆ.
ಪ್ರಸ್ತುತ ಆರು ವರ್ಷಗಳಿಂದ ಮಾತೃತ್ವಮ್ ಯೋಜನೆಯ ಕಾಸರಗೋಡು ನಗರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ದೇಶೀಯ ಗೋವುಗಳ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಈಗಾಗಲೇ ನಾಲ್ಕು ಹಸುಗಳ ಗುರಿ ತಲುಪಿರುವ ಕುಸುಮಾ ಪೆರ್ಮುಖ ಅವರು ಈ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ.
” ಶ್ರೀಮಠದ ಸೇವೆಯ ಆರಂಭದಿಂದಲೇ ನನಗೆ ಸರ್ವ ಸಹಕಾರ ನೀಡಿ ಸದಾ ಮಾರ್ಗದರ್ಶಕರಾಗಿರುವ ಈಶ್ವರಿಯಕ್ಕನ ನೆರವನ್ನು ಮರೆಯುವಂತಿಲ್ಲ” ಎಂದು ಈಶ್ವರಿ ಅಕ್ಕನ ಬೆಂಬಲವನ್ನು ನೆನಪಿಸುವ ಇವರ ಜೀವನದಲ್ಲಿ ಗುರುಕೃಪೆಯ ಮಹತ್ವವನ್ನು ತೋರಿಸುವ ಘಟನೆಯೊಂದು ನಡೆದಿತ್ತು.
ಎರಡು ವರ್ಷಗಳ ಹಿಂದೆ ತೀವ್ರ ಕಾಲುನೋವು ಕಾಣಿಸಿಕೊಂಡಾಗ, ನಡೆಯಲು ಸಾಧ್ಯವಾಗದೆ, ಗಾಲಿಕುರ್ಚಿಯ ಅವಲಂಬನೆಯಲ್ಲೇ ದಿನಕಳೆಯುವಂತಹ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ವೈದ್ಯೋಪಚಾರಗಳ ಜೊತೆಗೆ ಅವರು ಸಂಪೂರ್ಣವಾಗಿ ಶ್ರೀಗುರುಚರಣಗಳನ್ನೇ ಮೊರೆ ಹೊಕ್ಕರು.
” ಮಗ ಡಾ. ನಾರಾಯಣ ಪ್ರದೀಪ್ ಹೇಳಿದಂತೆ ಔಷಧಿ ಮುಂದುವರಿಸು, ಉಳಿದ ವಿಚಾರವನ್ನು ಶ್ರೀಸಂಸ್ಥಾನಕ್ಕೆ ಬಿಡು ” ಎಂಬ ಶ್ರೀಗುರುಗಳ ಅಭಯವಚನವು ಸಂಜೀವಿನಿಯಂತೆ ಕೆಲಸ ಮಾಡಿತು. ಸಂಪೂರ್ಣ ನಂಬಿಕೆಯೊಂದಿಗೆ ಔಷಧಿಯನ್ನು ಮುಂದುವರಿಸಿದ ಕುಸುಮಾ ಪೆರ್ಮುಖ ಅವರು, ಕೆಲವೇ ತಿಂಗಳುಗಳಲ್ಲಿ ಗಾಲಿಕುರ್ಚಿಯಿಂದ ನಡೆಯುವ ಹಂತಕ್ಕೆ ಬಂದರು.
” ಗಾಲಿಕುರ್ಚಿಯನ್ನಾಶ್ರಯಿಸಿ ನಡೆಯಲಾರದೆ ಮೂಲೆಗುಂಪಾದ ನಾನು ಈಗ ಮರಳಿ ನಡೆಯುವಂತಾಗಿದ್ದು ಶ್ರೀಗುರುಗಳ ಅನುಗ್ರಹವಲ್ಲದೆ ಮತ್ತೇನು “ಎಂದು ಭಾವಪರವಶರಾಗಿ ನುಡಿಯುವ ಅವರು, ಗುಣಮುಖರಾದ ನಂತರ ಮೊದಲು ಗೋಕರ್ಣದ ಅಶೋಕೆಗೆ ತೆರಳಿ ಶ್ರೀಗುರುಗಳ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿ ಬಂದರು. ಪ್ರಸ್ತುತ ಗುರುಕೃಪೆಯೊಂದಿಗೆ ಮತ್ತೆ ದ್ವಿಗುಣ ಉತ್ಸಾಹದಿಂದ ಶ್ರೀಮಠದ ಸೇವೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.
ಪತಿ ಈಶ್ವರ ಭಟ್ ಪೆರ್ಮುಖ ೨೦೦೮ರಿಂದ ಗುರಿಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದು ಗುರುಸೇವೆಯಲ್ಲಿಯೂ, ಗೋಸೇವೆಯಲ್ಲಿಯೂ ಪತ್ನಿಗೆ ಸದಾ ಬೆಂಬಲವಾಗಿ ನಿಂತವರು.
ನಿಷ್ಠಾವಂತ ಗುರುಭಕ್ತ ಕುಟುಂಬದಿಂದ ಬಂದ ಕುಸುಮಾ ಪೆರ್ಮುಖ ಅವರ ಕುಟುಂಬದಲ್ಲಿ ಗುರುಭಕ್ತಿ ಮುಂದಿನ ಪೀಳಿಗೆಗೂ ಸಾಗುತ್ತಿದೆ. ಮಕ್ಕಳಿಬ್ಬರೂ ಶ್ರೀಮಠದ ಶಾಸನತಂತ್ರದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊಮ್ಮಕ್ಕಳಲ್ಲಿಯೂ ಶ್ರೀಗುರುಗಳ ಮೇಲೆ ಶ್ರದ್ಧೆ, ಭಕ್ತಿ ಬೆಳೆಯುತ್ತಿರುವುದು ಇವರಿಗೆ ಅತ್ಯಂತ ಸಂತೃಪ್ತಿ ನೀಡಿದೆ. ತಮ್ಮ ಮನೆಯಲ್ಲಿಯೇ ದೇಶೀಯ ಹಸುಗಳನ್ನು ಸಾಕುತ್ತಾ, ಶ್ರೀಗುರುಗಳ ಎಲ್ಲಾ ಯೋಜನೆಗಳಿಗೂ ಮನಃಪೂರ್ವಕ ಸಮರ್ಪಣೆ ನೀಡುತ್ತಿರುವ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ.
” ಶ್ರೀಮಠದ ಸೇವೆ ಎಂದರೆ ಸಮಯ, ಶಕ್ತಿ, ಶ್ರದ್ಧೆ ಎಲ್ಲವನ್ನೂ ಅರ್ಪಿಸುವುದು. ಅದಕ್ಕೆ ವಯಸ್ಸು, ಆರೋಗ್ಯ, ಪರಿಸ್ಥಿತಿ ಅಡ್ಡಿಯಾಗಬಾರದು. ಮನಸ್ಸು ಸಿದ್ಧವಾಗಿದ್ದರೆ ಗುರುಕೃಪೆ ತಾನೇ ದಾರಿ ತೋರಿಸುತ್ತದೆ ” ಎಂಬುದು ಕುಸುಮಾ ಪೆರ್ಮುಖ ಅವರ ಜೀವನದ ತತ್ವ.
ಹಗಲಿರುಳು ಗುರುಸ್ಮರಣೆಯನ್ನೇ ಮಾಡುತ್ತಾ, ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಗೋಸೇವೆ, ಶ್ರೀಮಠದ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕುಸುಮಾ ಪೆರ್ಮುಖ ಅವರ ಸೇವಾ ಪಥ ಇನ್ನಷ್ಟು ದೀರ್ಘವಾಗಲಿ, ವಿಶ್ವಜನನಿ ಗೋಮಾತೆಯ ಸೇವೆಯೊಂದಿಗೆ, ಶ್ರೀಗುರುಗಳ ಆಶೀರ್ವಾದ ಸದಾ ಅವರ ಮೇಲೆ ಇರಲಿ. ಶ್ರೀಗುರುಚರಣದ ನೆರಳಲ್ಲಿ ಅರಳಿದ ಈ ಸೇವಾ ಬದುಕು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮೆಲ್ಲರ ಸದಾಶಯ.
ಪ್ರಸನ್ನಾ ವಿ. ಚೆಕ್ಕೆಮನೆ