ನಾವಿಂದು 21ನೆಯ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಕಣ್ಣ ಮುಂದಿರುವ ಯಾವುದೇ ಕಾರ್ಯವಾದರೂ ಸರಿ, ಅದನ್ನು ಆರ್ಥಿಕತೆಯ ತಕ್ಕಡಿಯಲ್ಲಿಟ್ಟು ತೂಗಿ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಗೈದ ಮೇಲೆಯೇ ಮುಂದುವರಿಯುವುದು ನಮ್ಮ ಅಭ್ಯಾಸ. ಅದೇ ಲೆಕ್ಕಾಚಾರದಲ್ಲಿ ಮುಳುಗಿ, ಆ ಕಾರ್ಯದ ಮುಖ್ಯ ಧ್ಯೇಯವೇನು ಎಂಬುದನ್ನೇ ಅದೆಷ್ಟೋ ಬಾರಿ ನಾವು ಮರೆಯುತ್ತೇವೆ. ಆ ಲೆಕ್ಕಾಚಾರದಿಂದಲಾಗಿಯೇ, ಮಾಡಲೇಬೇಕಾದ ಒಳ್ಳೆಯ ಕಾರ್ಯವನ್ನು ನಾವು ಮಾಡದೇ ಇರುವುದೂ ಇದೆ ಅಲ್ಲವೇ?
ವ್ಯವಹಾರದ ಜ್ಞಾನವನ್ನು ವರ್ಧಿಸಿಕೊಳ್ಳುವುದಕ್ಕೆ ಇಂದು ನಮ್ಮ ಕಣ್ಣ ಮುಂದೆ ಹಲವಾರು ಮಾಧ್ಯಮಗಳಿವೆ. ಶಾಲಾ ಕಾಲೇಜುಗಳಲ್ಲೂ, ವಿವಿಧ ವಿದ್ಯುನ್ಮಾನ ಮಾಧ್ಯಮಗಳಲ್ಲೂ ನಾವಿಂದು ಅದನ್ನೇ ನೋಡುತ್ತೇವೆ, ಕಲಿಯುತ್ತೇವೆ. ಆದರೆ, ಧರ್ಮದ ತಳಹದಿಯ ಮೇಲೆ ಬದುಕು ಸಾಗಿಸುವುದು ಹಾಗೂ ಆರ್ಥಿಕತೆಗೆ ಮಿಗಿಲಾದ ಲಾಭನಷ್ಟಗಳನ್ನು ಮನಗಂಡು ಕೆಲಸ ಮಾಡುವುದು ಹೇಗೆನ್ನುವುದನ್ನು ಗುರುಪೀಠಗಳಷ್ಟೇ ಕಲಿಸಲು ಸಾಧ್ಯವಲ್ಲವೇ?
ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ನಮ್ಮ ಮುಂದೆ ಹಾಕಿಕೊಟ್ಟ ಕಾರ್ಯಕ್ರಮಗಳನ್ನೊಮ್ಮೆ ಮೆಲುಕು ಹಾಕಿ ನೋಡಿದರೆ ಇದೆಷ್ಟು ಸತ್ಯವೆಂಬುದು ತಿಳಿಯುತ್ತದೆ.
ವರ್ಷಂಪ್ರತಿ ನಡೆಯುವ ಚಾತುರ್ಮಾಸ್ಯ ಮಹೋತ್ಸವ-ರಾಮೋತ್ಸವಗಳಿಂದ ಹಿಡಿದು, ನ ಭೂತೋ ನ ಭವಿಷ್ಯತಿ ಎಂಬಂತೆ ನಡೆಯುವ ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ಕೋಟಿ ನೀರಾಜನ, ಗೋಯಾತ್ರೆ, ಗೋಪ್ರಾಣಭಿಕ್ಷೆ, ಗೋಸ್ವರ್ಗಗಳಂತಹ ಬೃಹತ್ ಕಾರ್ಯಕ್ರಮಗಳತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ. ನಮ್ಮ ನಿಮ್ಮೆಲ್ಲರ ಕಿರು ಕಾಣಿಕೆಯಿಂದ, ಶ್ರಮದಿಂದ ಕೋಟಿಗಳ ಖರ್ಚಿನಲ್ಲಿ ಇಂತಹ ಮಹಾಕಾರ್ಯಗಳು ನಡೆದು ಹೋಗಿವೆ, ಇನ್ನೂ ನಡೆಯುತ್ತಲೇ ಇವೆ ಅಲ್ಲವೇ? ಇವನ್ನೆಂದಾದರೂ ನಮ್ಮ ಆರ್ಥಿಕ ಲಾಭನಷ್ಟಗಳ ತಕ್ಕಡಿಯಲ್ಲಿ ಹಾಕಿ, ತೂಗಿ ನೋಡಿದ್ದೇವೆಯೇ? ಹಾಗೆ ನೋಡಬೇಕಾದ ಅಗತ್ಯವಿಲ್ಲ. ಏಕೆಂದರೆ ಇದರ ಉದ್ದೇಶವು ಆರ್ಥಿಕತೆಯನ್ನು ಮೀರಿದ್ದಾಗಿದೆ. ಒಂದು ಬಾರಿ ಯೋಚಿಸಿ ನೋಡಿ, ಅದೆಷ್ಟು ಸಹಸ್ರ ಕಾರ್ಯಕರ್ತರು ಈ ಈ ಯೋಜನೆಗಳಿಗಾಗಿ ದುಡಿದಿದ್ದಾರೆ, ದುಡಿಯುತ್ತಿದ್ದಾರೆ? ಅದೆಷ್ಟು ಲಕ್ಷ ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ? ವಿವಿಧ ಮಾಧ್ಯಮಗಳ ಮೂಲಕ ಅದೆಷ್ಟು ಕೋಟಿ ಜನರಿಗೆ ಧಾರ್ಮಿಕತೆಯ ಸಂದೇಶವು ರವಾನೆಯಾಗುತ್ತಿದೆ? ನಾನು, ನನ್ನದು ಎನ್ನುವಂತೆ ಜೀವಿಸುತ್ತಾ, ಖರ್ಚು ಮಾಡುವ ಒಂದೊಂದು ಕಾಸಿಗೂ ಲಾಭನಷ್ಟಗಳ ಲೆಕ್ಕಾಚಾರ ಗೈದು ಜೀವಿಸುತ್ತಿದ್ದ ನಮ್ಮಲ್ಲಿ ಗುರುಗಳಿಂದು ಅದೆಂತಹ ಮಹತ್ಕಾರ್ಯಗಳನ್ನು ಮಾಡಿಸುತ್ತಿದ್ದಾರೆ ಅಲ್ಲವೇ? ಅದೆಷ್ಟು ಜನರ ಯೋಚನೆಗಳು, ಜೀವನಶೈಲಿಗಳು ಈ ಕಾರ್ಯಕ್ರಮಗಳಿಂದಾಗಿ ಬದಲಾಗಿವೆ. ನಮ್ಮದೇ ಜೀವನದಲ್ಲಿ ಬರುವ ಅದೆಷ್ಟು ಅಡೆತಡೆಗಳನ್ನು ಭಿನ್ನ ದೃಷ್ಟಿಕೋನದಿಂದ ನೋಡಿ ನಿವಾರಿಸಿಕೊಳ್ಳುವುದನ್ನು ನಾವಿಂದು ಕಲಿತಿದ್ದೇವೆ. ಈ ಬದಲಾವಣೆಗಳ ಲಾಭ ನಷ್ಟಗಳನ್ನು ಲೆಕ್ಕ ಹಾಕಬಲ್ಲೆವೇ? ತಕ್ಕಡಿಯಲ್ಲಿಟ್ಟು ತೂಗಬಲ್ಲೆವೇ ನಾವು?
ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳೆಂಬ ಯತಿಗಳು ಪೀಠಾರೋಹಣಗೈದ ಅನಂತರ ಕೇವಲ ನಿತ್ಯಪೂಜೆಯನ್ನೂ, ತಪೋಕಾರ್ಯವನ್ನೂ ನಡೆಸುತ್ತಾ ಆಗೊಮ್ಮೆ ಈಗೊಮ್ಮೆ ವಿಜಯಯಾತ್ರೆಗೈದು, ಮತ್ತೆ ಮಠದೊಳಗೆ ಸುಮ್ಮನೇ ಕುಳಿತಿದ್ದರೆ, ಗೋವು ಹಾಗೂ ಧರ್ಮ ರಕ್ಷಣೆಯ ಹಲವಾರು ಯೋಜನೆಗಳನ್ನು ನಮ್ಮ ಮೂಲಕ ಕಾರ್ಯಗತಗೊಳಿಸದೇ ಇರುತ್ತಿದ್ದರೆ, ನಾವಿಂದು ಹೇಗಿರುತ್ತಿದ್ದೆವೆಂದು ಒಂದೇ ಒಂದು ಬಾರಿ ಊಹಿಸಬಲ್ಲಿರಾ? ಹಾಗಿರುತ್ತಿದ್ದರೆ ಬಹುಶಃ ನಾವು ಜಾಗತೀಕರಣದ ಸುಂಟರಗಾಳಿಗೆ ಸಿಕ್ಕು, ನಮ್ಮತನವನ್ನು ಬಿಟ್ಟು, ದಿಕ್ಕರಿಯದ ಸುಳಿಗಾಳಿಯಾಗಿ ಎಲ್ಲೆಂದರಲ್ಲಿ ಸುತ್ತುತ್ತಿದ್ದೆವೇನೋ!
ಸನಾತನ ಧರ್ಮದ ಉಳಿವಿಗೆ ನಾವು ಮಾಡಬೇಕಾಗಿರುವುದು ಇಷ್ಟೇ. ಗುರುವು ತೋರಿಸಿಕೊಟ್ಟ ಹಾದಿಯಲ್ಲಿ ನಡೆಯುತ್ತಾ, ಅವರು ಹಾಕಿ ಕೊಟ್ಟ ಯೋಜನೆಗಳಲ್ಲಿ ನಮ್ಮ ಕೈಲಾದುದನ್ನು ಮಾಡುತ್ತಾ, ಲಾಭನಷ್ಟಗಳನ್ನು ಭಗವಂತನಿಗೆ ಬಿಟ್ಟು ಪರಿವರ್ತನೆಯ ಹಾದಿಯಲ್ಲಿ ಬಿರಿದ ಕುಸುಮಗಳಾಗಿ ಧನ್ಯತೆಯ ಬಾಳು ಬಾಳೋಣ. ಒಂದಾಗಿ ರಾಮರಾಜ್ಯವನ್ನು ಕಟ್ಟೋಣ.