ಸಂತ್ರಸ್ತ ಗೋವುಗಳಿಗೆ ರಾಮಚಂದ್ರಾಪುರಮಠ ಅಭಯ

ಸುದ್ದಿ

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಗೋವುಗಳ ರಕ್ಷಣೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ, ನೆರಿಯ, ಕಕ್ಕಿಂಜೆ, ಮುಂಡಾಜೆ, ಚಾರ್ಮಾಡಿ ಮತ್ತಿತರ ಕಡೆಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನೂರಾರು ಕುಟುಂಬಗಳ ಬದುಕು ಬೀದಿಗೆ ಬಂದಿದ್ದು, ಅವರು ಸಾಕುತ್ತಿದ್ದ ಗೋವುಗಳು ದಯನೀಯ ಸ್ಥಿತಿಯಲ್ಲಿರುವುದನ್ನು ಮನಗಂಡು ಶ್ರೀರಾಮಚಂದ್ರಾಪುರ ಮಠ ಈ ಘೋಷಣೆ ಮಾಡಿದೆ.

 

ಈ ಪ್ರದೇಶದಲ್ಲಿ ಬಹಳಷ್ಟು ಮಂದಿ ಪ್ರೀತಿಯಿಂದ ಸಾಕಿದ ಗೋವುಗಳ ಮಾರಾಟಕ್ಕೆ ಮುಂದಾಗಿದ್ದು, ಯಾರೂ ಗೋವುಗಳನ್ನು ಮಾರಾಟ ಮಾಡದಂತೆ ಶ್ರೀಮಠ ಮನವಿ ಮಾಡಿದೆ. ಗೋವುಗಳನ್ನು ಸಾಕಲಾಗದಿದ್ದರೆ, ಶ್ರೀಮಠದ ಗೋಶಾಲೆಗಳಿಗೆ ನೀಡಿದಲ್ಲಿ ಉಚಿತವಾಗಿ ಅವುಗಳನ್ನು ಸಾಕಲಾಗುತ್ತದೆ. ರೈತರು ಪರಿಸ್ಥಿತಿ ಸುಧಾರಿಸಿದ ಬಳಿಕ ತಮ್ಮ ಗೋವುಗಳನ್ನು ಕೊಂಡೊಯ್ಯಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

 

ಶ್ರೀಮಠದ ಕಾಮದುಘಾ ಮತ್ತು ಗೋ ಪರಿವಾರ ವತಿಯಿಂದ ಸಂತ್ರಸ್ತ ಪ್ರದೇಶಗಳ ಗೋವುಗಳಿಗೆ ರಕ್ಷಣೆ ನೀಡಲಾಗಿದೆ. ಹಲವಾರು ಕಡೆಗಳಲ್ಲಿ ಗೋವುಗಳಿಗೆ ದಾಸ್ತಾನು ಮಾಡಿದ್ದ ಮೇವು ನೀರುಪಾಲಾಗಿರುವ ಹಿನ್ನೆಲೆಯಲ್ಲಿ ಮೇವು ಇರುವ ಕಡೆಗಳಿಂದ ಖರೀದಿಸಿ ಬಾಗಲಕೋಟೆ ಜಿಲ್ಲೆ ಶಿವಯೋಗ ಮಂದಿರದ ಗೋಶಾಲೆ, ಹಾನಗಲ್ ಗೋಶಾಲೆಗಳಿಗೆ ಮತ್ತು ಚಾರ್ಮಾಡಿ ಪ್ರದೇಶಗಳಲ್ಲಿ ಸಂತ್ರಸ್ತ ಜನರು ಸಾಕುತ್ತಿದ್ದ ಗೋವುಗಳಿಗೆ ಪೂರೈಕೆ ಮಾಡಲಾಗಿದೆ. ಇದರ ಜತೆಗೆ ಶ್ರೀಮಠದ ನೂರಾರು ಸೇವಾಬಿಂದುಗಳು ಶ್ರಮದಾನದ ಮೂಲಕ ಸಂತ್ರಸ್ತರ ಬದುಕು ಕಟ್ಟುವ ಮಾನವೀಯ ಕಾರ್ಯದಲ್ಲಿ ನೆರವಾಗಿದ್ದಾರೆ.

 

ಶ್ರೀಮಠದ ಎಲ್ಲ ಅಂಗಸಂಸ್ಥೆಗಳಲ್ಲಿ ಹಾಗೂ ಶಾಖಾಮಠಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರವನ್ನು ಆರಂಭಿಸಿ ಸಂತ್ರಸ್ತರಿಗೆ ವಿತರಿಸುವ ಕಾರ್ಯವೂ ಭರದಿಂದ ಸಾಗಿದೆ. ನೆರವು ಅಗತ್ಯವಿರುವ ರೈತರು ವೇಣೂರು ಪರಮೇಶ್ವರ ಭಟ್ (9008167013) ಅವರನ್ನು ಸಂಪರ್ಕಿಸಬಹುದು.

Author Details


Srimukha

Leave a Reply

Your email address will not be published. Required fields are marked *