ತಮ್ಮತನ ಕಾಯ್ದುಕೊಂಡು ಸಮಗ್ರ ಹಿಂದೂ ಸಮಾಜಕ್ಕೆ ಕೊಡುಗೆ ನೀಡಿ: ರಾಘವೇಶ್ವರ ಶ್ರೀ ಹಿತವಚನ

ಇತರೆ

ಪುತ್ತೂರು: ಹಿಂದೂ ಸಮಾಜದ ಪ್ರತಿಯೊಂದು ಸಮುದಾಯಗಳು ತಮ್ಮ ವೈಶಿಷ್ಯವನ್ನು ಕಾಪಾಡಿಕೊಂಡು ಸಮಗ್ರ ಹಿಂದೂ ಸಮಾಜ ಬೆಳೆಯಲು ಕೊಡುಗೆ ನೀಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.
ಪುತ್ತೂರಿನ ಹವ್ಯಕ ಸಭಾಭವನ ಸಮರ್ಪಣಮ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, “ಸಮಾಜದ ಯಾವುದೇ ಸಮುದಾಯಗಳು ತಮ್ಮತನವನ್ನು ಮರೆತರೆ ಹಿಂದೂ ಸಮಾಜಕ್ಕೆ ಅಸ್ತಿತ್ವ ಇಲ್ಲ. ಆಯಾ ಸಮಾಜ ತನ್ನ ವೈಶಿಷ್ಟ್ಯಗಳನ್ನು, ನಡೆ, ನುಡಿ, ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬಂದರೆ ಮಾತ್ರ ಹಿಂದೂ ಸಮಾಜ ಎದ್ದು ನಿಲ್ಲಲು ಸಾಧ್ಯ. ಹವ್ಯಕ ಸಮಾಜ ಹಿಂದೂ ಸಮಾಜದ ಒಂದು ಅವಿಭಾಜ್ಯ ಅಂಗ ಎಂದು ವಿಶ್ಲೇಷಿಸಿದರು.
ಹವ್ಯಕ ಸಮುದಾಯ ಅತಿಶಯ ವೈಶಿಷ್ಟ್ಯಗಳ ಸಮಾಜ. ಆದಾಗ್ಯೂ ತಮ್ಮತನವನ್ನು ಬಿಟ್ಟು ಹಿಂದೂ ಸಮಾಜದ ಜತೆ ಬೆರೆಯುವ ವೈಶಿಷ್ಟ್ಯ ನಮ್ಮದು. ನಮ್ಮತನವನ್ನು ಉಳಿಸಿಕೊಂಡು ಇಡೀ ಸಮಾಜವನ್ನು ಬೆಳೆಸುವುದು ನಮ್ಮ ಕರ್ತವ್ಯ. ಆಗ ಮಾತ್ರ ಸಮುದಾಯದ ಅಸ್ತಿತ್ವ ಉಳಿಯುತ್ತದೆ. ನಮ್ಮ ಹಿರಿಯರು ನಡೆದು ಬಂದ ದಾರಿಯನ್ನೇ ನಾವು ಅನುಸರಿಸಬೇಕು ಎಂದು ಸಲಹೆ ಮಾಡಿದರು.
ಭಾಷೆ, ಸಂಸ್ಕಾರ, ನಮ್ಮ ಆಹಾರ- ವಿಹಾರ, ಉಡುಗೆ ತೊಡುಗೆ, ಎಲ್ಲವೂ ಸಮಾಜದ ಕೊಡುಗೆ. ನಮ್ಮ ಸಮಾಜ ಪ್ರಜ್ಞೆ ಜಾಗೃತಿಗೊಳಿಸುವ ಪ್ರತೀಕವಾಗಿ ಇಂಥ ಭವನ ನಿರ್ಮಾಣವಾಗಿದೆ. ನಾವು ಸಂಕುಚಿತರಾಗಬಾರದು; ವಿಸ್ತಾರವಾಗುತ್ತಾ ವಿಕಾಸ ಹೊಂದಬೇಕು. ಕುಟುಂಬ, ಮನೆ, ಸಮಾಜ, ರಾಜ್ಯ, ದೇಶ ಹೀಗೆ ವಿಸ್ತಾರಗೊಳ್ಳುತ್ತಾ ಹೋಗಬೇಕು. ವಿಸ್ತಾರದ ಮೊದಲ ಹಂತವೇ ಸಮಾಜ. ಮನುಷ್ಯನಿಗೆ ಅಹಮಸ್ಮಿ ಎಂಬ ಪ್ರಜ್ಞೆ ಜಾಗೃತಗೊಳಿಸಲು ಸಮಾಜ ಬೇಕು. ನಮ್ಮ ಅಸ್ತಿತ್ವವನ್ನು ನೆನಪಿಸಲು ಸಮಾಜ ಬೇಕು ಎಂದು ವಿಶ್ಲೇಷಿಸಿದರು.
ಜೀವ, ದೇವನಾಗಲು ನಾವು ವಿಸ್ತಾರಗೊಳ್ಳುತ್ತಾ ಹೋಗಬೇಕು; ಸ್ವಾರ್ಥಿಯಾಗಬಾರದು. ಒಂದು ಬಿಂದು ವಿಸ್ತಾರವಾಗಿ ಪ್ರಪಂಚದ ರೂಪ ಪಡೆದಂತೆ ಮನಸ್ಸು ಕೂಡಾ ವಿಸ್ತಾರಗೊಳ್ಳುತ್ತಾ ಹೋಗಬೇಕು. ವಿಸ್ತಾರವಾಗಿ ತೆರೆದುಕೊಳ್ಳಬೇಕು ಎನ್ನುವುದೇ ಪ್ರಪಂಚ ನಮಗೆ ನೀಡುವ ಸಂದೇಶ ಎಂದು ನುಡಿದರು.
ಸಮಾಜಕ್ಕೆ ಹವ್ಯಕ ಸಮುದಾಯವನ್ನು ಪರಿಚಯಿಸುವ ಮೂರನೇ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಲು ಅಖಿಲ ಭಾರತ ಹವ್ಯಕ ಮಹಾಸಭಾ ಮುಂದಾಗಲಿ ಎಂದು ಸಲಹೆ ಮಾಡಿದರು. ಹವ್ಯಕ ಮಹಾಸಭಾ ರಾಜ್ಯದ ಮೂರು ಕಡೆ ಸ್ಥಾಪಿಸುತ್ತಿರುವ ಪ್ರಾದೇಶಿಕ ಕೇಂದ್ರಗಳು ಜ್ಞಾನಕೇಂದ್ರಗಳಾಗಿ ರೂಪುಗೊಳ್ಳಲಿ ಎಂದು ಸ್ವಾಮೀಜಿ ಆಶಿಸಿದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪುತ್ತೂರು ರಾಜ್ಯಕ್ಕೇ ಉತ್ತಮ ಉದಾಹರಣೆ ನೀಡಬಹುದಾದ ಊರು. ಹವ್ಯಕ ಸಮಾಜದ ಪುಟ್ಟ ಪುಟ್ಟ ಸೇವೆಯಿಂದಲೇ ದೊಡ್ಡ ಭವನ ತಲೆ ಎತ್ತಿದೆ. ಈ ಸಭಾಭವನ ಕೇವಲ ಕಟ್ಟಡವಲ್ಲ; ಸುಸಂಸ್ಕøತ, ರಾಷ್ಟ್ರ ನಿರ್ಮಾಣದ ಚರ್ಚೆಗಳು ನಡೆಯುವ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲಿ. ವೈಚಾರಿಕ ಚಿಂತನೆಯ ಕೇಂದ್ರವಾಗಲಿ ಎಂದು ಹಾರೈಸಿದರು. ಸೃಷ್ಟಿಯ ಸತ್ಯದ ಅರ್ಥವನ್ನು ಅರಿತುಕೊಳ್ಳಲು ಇದು ವೇದಿಕೆಯಾಗಲಿ. ವ್ಯಾವಹಾರಿಕ ಬದುಕಿನಲ್ಲಿ ನಮ್ಮನ್ನು ಕಳೆದುಕೊಳ್ಳುವ ಬದಲಾಗಿ, ಅಂತಃಸತ್ವವನ್ನು ಹುಡುಕುವ ಚಿಂತನೆಗಳಾಗಲಿ ಎಂದರು.
ಸನಾತನ ಪರಂಪರೆಯ ಮೇಲೆ ಶತ ಶತಮಾನಗಳಿಂದ ದಾಳಿಗಳು ನಡೆದರೂ, ನಮ್ಮ ಹಿಂದೂ ಧರ್ಮದ ಅಂತಃಸತ್ವವನ್ನು ಉಳಿಸಿಕೊಳ್ಳುವಲ್ಲಿ ಮಠ ಮಾನ್ಯಗಳು ಕೊಡುಗೆ ನೀಡಿವೆ. ಗುಲಾಮಿತನದ ಮಾನಸಿಕತೆಯಿಂದ ಹೊರಬಂದು ನಮ್ಮತನ ರೂಢಿಸಿಕೊಳ್ಳಬೇಕಾದರೆ ವೇದ- ಉಪನಿಷತ್‍ಗಳ ಸಾರವನ್ನು ಜನಮಾನಸಕ್ಕೆ ತಲುಪಿಸುವ, ವೈಚಾರಿಕ ಆಳವನ್ನು ಹೆಚ್ಚಿಕೊಳ್ಳುವ ಚಿಂತನೆಗಳ ಕೇಂದ್ರ ಇದಾಗಲಿ ಎಂದು ಸಲಹೆ ಮಾಡಿದರು.
ಸನಾತನ ಸಂಸ್ಕøತಿ, ನಂಬಿಕೆಯನ್ನು ಘಾಸಿಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸಂಘಟಿತರಾಗಿ ಇವುಗಳನ್ನು ಎದುರಿಸೋಣ ಎಂದರು.
ಶ್ರದ್ಧಾ ಭಕ್ತಿ ಕೇಂದ್ರಗಳಲ್ಲಿ ಸಮಾಜದ ಉನ್ನತಿಯ ಕಾರ್ಯಗಳು ಆಗಲಿ. ಭಾರತ ಮುಂದೆಯೂ ಜಗತ್ತಿಗೆ ಗುರುವಾಗಬೇಕು ಎಂಬ ದೃಢ ಸಂಕಲ್ಪ ಬೆಳೆಸಿಕೊಳ್ಳೋಣ. ಒಳ್ಳೆಯವರನ್ನು ಗುರುತಿಸಿ ಆರಿಸುವ ಕಾರ್ಯ ಸಮಾಜದಿಂದ ಆಗಲಿ ಎಂದರು.
ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಅತಿದೊಡ್ಡ ಶಕ್ತಿ ತುಂಬಿದ ಸಮಾಜ; ಇಡೀ ಹವ್ಯಕ ಸಮಾಜ ಮನಃಪೂರ್ವಕವಾಗಿ ನನ್ನನ್ನು ಹರಸಿದೆ. ಇಡೀ ರಾಜಕೀಯ ವ್ಯವಸ್ಥೆಗೆ ಮಾರ್ಗದರ್ಶನ ನೀಡುತ್ತಿರುವ ಗುರುಪೀಠ, ನಿಜ ಅರ್ಥದಲ್ಲಿ ದೇಶದಲ್ಲಿ, ರಾಜ್ಯದಲ್ಲಿ ಗೋಹತ್ಯೆ ವಿರುದ್ಧ ಜನಜಾಗೃತಿ ಮೂಡಿಸಿ, ಕಾನೂನು ಜಾರಿಗೆ ಬರಲು ಕಾರಣ. ಮುಂದೆಯೂ ಸರ್ಕಾರಕ್ಕೆ ಸಮಾಜಕ್ಕೆ ಇಂಥ ಮಾರ್ಗದರ್ಶನ ದೊರಕಬೇಕು ಎಂದು ಆಶಿಸಿದರು.
ಸಾಮಾಜಿಕ ಸಂಘಟನೆಯೇ ದೊಡ್ಡ ಶಕ್ತಿ. ಅಂತರ್ಯದಲ್ಲಿ ಶಾಂತಿ, ನೆಮ್ಮದಿ, ಪ್ರಶಾಂತತೆಯನ್ನು ಅರಸುವ ಇಂದಿನ ದಿನದಲ್ಲಿ ಹವ್ಯಕ ಸಮುದಾಯ ಇಡೀ ಸಮಾಜಕ್ಕೆ ಮಾರ್ಗದರ್ಶಿ ಎಂದು ಬಣ್ಣಿಸಿದರು.
ನಮ್ಮ ಬದುಕಿನ ನಿರ್ವಹಣೆಗೆ ನಾವು ಸೀಮಿತರಾಗದೇ, ಸಮಾಜ ಪರಿವರ್ತನೆಗೆ ಕೊಡುಗೆ ನೀಡಬೇಕು. ಜನಪ್ರತಿನಿಧಿಗಳಾಗಿ ಇರುವವರು ಜನರ ನಿರೀಕ್ಷೆಗಳ ಬದ್ಧತೆಗೆ ಅನುಗುಣವಾಗಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ. ಧಾರ್ಮಿಕ, ಸಾಂಸ್ಕøತಿಕ ನೆಲೆಗಟ್ಟು ಉಳಿಯಬೇಕಾದರೆ ಇಂಥ ಸಂಘಟನೆಗಳು ಮಾರ್ಗದರ್ಶನ ನೀಡಬೇಕು. ನಮ್ಮ ಹಿತದ ಜತೆಗೆ ದೇಶ ಹಿತಕ್ಕಾಗಿ ದುಡಿಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮನವಿ ಮಾಡಿದರು.
ಶಾಸಕ ಸಂಜೀವ ಎಸ್.ಮಠಂದೂರು ಮಾತನಾಡಿ, ಕೃಷಿ ಪರಂಪರೆ ಮತ್ತು ಋಷಿ ಪರಂಪರೆಯ ಸಮ್ಮಿಳನಕ್ಕೆ ಈ ಸಭಾಭವನ ವೇದಿಕೆಯಾಗಿದೆ. ಹವ್ಯಕ ಸಮುದಾಯ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಹಕಾರ ಕ್ಷೇತ್ರಕ್ಕೆ ಹೀಗೆ ಇಡೀ ಹಿಂದೂ ಸಮಾಜಕ್ಕೆ ನೇತೃತ್ವ ನೀಡಿದ ಸಮುದಾಯ. ಇಡೀ ಸಮಾಜದ ಪರಿವರ್ತನೆಗೆ ನಾಂದಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಪುತ್ತೂರಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಗಾಯತ್ರಿ ಭವನ ನಿರ್ಮಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ, “ಲೋಕಕಲ್ಯಾಣಕ್ಕಾಗಿಯೇ ಸ್ವಾತಂತ್ರಪೂರ್ವದಲ್ಲೇ ಹುಟ್ಟಿಕೊಂಡು ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸಂಸ್ಥೆ ಅಖಿಲ ಹವ್ಯಕ ಮಹಾಸಭಾ. ಕದಂಬ ವಂಶದ ಶ್ರೇಷ್ಠ ರಾಜನ ಆಶ್ರಯದಲ್ಲಿ ಬೆಳೆದ ಸಮಾಜ ಇಡೀ ಸಮಾಜದ ಉನ್ನತಿಗೆ ಶ್ರಮಿಸುತ್ತಾ ಬಂದಿದೆ. ಮಹಾಸಭಾದ ಹವ್ಯಕ ಪ್ರಾದೇಶಿಕ ಕೇಂದ್ರವಾಗಿ ಪುತ್ತೂರು ಕಾರ್ಯ ನಿರ್ವಹಿಸಲಿದೆ. ದಕ್ಷಿಣ ಕನ್ನಡ ಹವ್ಯಕರ ಸಮಗ್ರ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಮತ್ತು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪ್ರಾದೇಶಿಕ ಕೇಂದ್ರಗಳು ರೂಪುಗೊಳ್ಳಲಿವೆ ಎಂದರು.
ಕಲ್ಲು ಶಿಲ್ಪಿ ಕೈಗೆ ಸಿಕ್ಕಿದಾಗ ವಿಗ್ರಹವಾಗುತ್ತದೆ. ಅಂತೆಯೇ ಹವ್ಯಕ ಸಮುದಾಯದ ಕೈಗೆ ಯಾವ ಕಲ್ಲು ಸಿಕ್ಕಿದರೂ ಉತ್ತಮ ಶಿಲ್ಪವಾಗುತ್ತದೆ ಎಂಬುದಕ್ಕೆ ಈ ಸಭಾಭವನವೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪುರಸಭೆ ಅಧ್ಯಕ್ಷ ಜೀವಂದರ್ ಕುಮಾರ್, ಆರ್.ಎಸ್.ಹೆಗಡೆ ಹರಗಿ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಪುಳು ಈಶ್ವರ ಭಟ್ ಉಪಸ್ಥಿತರಿದ್ದರು. ಮಹೇಶ್ ಕಜೆ ಮತ್ತು ಕೃಷ್ಣವೇಣಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ವೇಣು ವಿಘ್ನೇಶ ಸಂಪ ಸ್ವಾಗತಿಸಿದರು. ಶಿವಶಂಕರ ಬೋನಂತಾಯ ವಂದಿಸಿದರು.

Author Details


Srimukha

Leave a Reply

Your email address will not be published. Required fields are marked *