ಅಂತಾರಾಷ್ಟ್ರೀಯ ಕ್ಯಾನ್ಸರ್ ವಿಜ್ಞಾನಿಗೆ ಈ ವರ್ಷದ ಸಾರ್ವಭೌಮ ಪ್ರಶಸ್ತಿ

ಶ್ರೀಸಂಸ್ಥಾನ

ಗೋಕರ್ಣದ ಮಹಾಬಲೇಶ್ವರ ದೇವಾಲಯ ಮಠಕ್ಕೆ ಆದಾಯದ ಮೂಲವಲ್ಲ. ಅದು ಸೇವೆಯ ಸಾಧನ ಮಾತ್ರ. ಗೋಕರ್ಣ ದೇವಾಲಯದಿಂದ ಒಂದು ರೂಪಾಯಿಯನ್ನು ಮಠ ತೆಗೆದುಕೊಂಡಿಲ್ಲ, ಕೋಟ್ಯಂತರ ರೂಪಾಯಿಗಳನ್ನು ಮಠ ದೇವಾಲಯದ ಅಭಿವೃದ್ಧಿಗೆ ಬಳಸಿದೆ. ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ, ನಮ್ಮಿಂದಲೇ ಒಳ್ಳೆಯದಾಗಬೇಕು ಎಂಬ ಸ್ವಾರ್ಥ ನಮಗಿಲ್ಲ. ಆದರೆ ಮಠದಿಂದಲೇ ಮಹಾಬಲೇಶ್ವರನ ಸೇವೆ ನಡೆಯಲಿ ಎಂಬುದು ಮಹಾಬಲನ ಇಚ್ಛೆ. ಮಹಾಬಲನೇ ಸೇವೆಯ ಅವಕಾಶವನ್ನು ನೀಡಿರುವಾಗ ಶಿರಸಾವಹಿಸಿ ಮಾಡಬೇಕಾದ್ದು ನಮ್ಮ ಕರ್ತವ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.ಅವರು ಶಿವರಾತ್ರಿ ಮಹೋತ್ಸವದ ನಿಮಿತ್ತ 05.03.19 ರಂದು ಸಂಜೆ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯ ಶ್ರೀಗಳು, ಯಾರೋ ಒಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲರ ಸಹಕಾರ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಗೋಕರ್ಣದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಊರಿನವರ ಮನೋಭಾವ ಬದಲಾಗಿದೆ, ಭಕ್ತರೆಡಗಿನ ದೃಷ್ಟಿ ಬದಲಾಗಿದೆ. ಭಕ್ತ ಭಗವಂತ ಎಂಬ ದೃಷ್ಟಿ ಸೃಷ್ಟಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಶ್ರೀಗಳು, ಬದಲಾವಣೆ ಮಾಡಲು ಹೊರಟರೆ ತ್ಯಾಗಕ್ಕೆ ಸಿದ್ಧರಿರಬೇಕಾಗುತ್ತದೆ. ಸಕಾರಾತ್ಮಕ ಬದಲಾವಣೆ ಮಾಡುವಾಗ ಅಡ್ಡಪರಿಣಾಮಗಳು ಜೊತೆಗೆ ಇರುತ್ತವೆ. ಆದರೆ ವಿಷಕಂಠರಾಗಿ ಅದನ್ನು ಸ್ವೀಕರಿಸಿ ಉತ್ತಮ ಕಾರ್ಯಗಳನ್ನು ನಾವು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟರು.

 

ಮಹಾಬಲೇಶ್ವರ ದೇವಾಲಯವನ್ನು ಮಠಕ್ಕೆ ವಹಿಸಿಕೊಟ್ಟದ್ದನ್ನೇ ಇಟ್ಟುಕೊಂಡು ಅನೇಕ ನಕಾರಾತ್ಮಕ ಕಾರ್ಯಗಳು ಮಠದ ಮೇಲಾಗಿದೆ. ಒಳಿತನ್ನು ಮಾಡುವಾಗ ಕೆಡುಕು ಅದರ ಜೊತೆಗೆ ಬರುತ್ತದೆ. ಅದನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸಿ ಎದುರಿಸಬೇಕು. ಸಮಗ್ರ ಗೋಕರ್ಣದ ಅಭಿವೃದ್ಧಿ ನಮ್ಮ ಗುರಿ, ನಾವೆಲ್ಲ ಸೇರಿ ಅದನ್ನು ಸಾಧಿಸೋಣ ಎಂದು ಕರೆನೀಡಿದರು.
ಸರ್ಕಾರದ ಆಡಳಿತದ ಅವಧಿಯಲ್ಲಿ ದುರವಸ್ಥೆ : ತಿಂಗಳುಗಳ ಹಿಂದೆ ಸರ್ಕಾರ ದೇವಾಲಯವನ್ನು ವಶಪಡಿಸಿಕೊಂಡಾಗ ದೇವಾಲಯಕ್ಕೆ ಬರುವವರ ಸಂಖ್ಯೆ ಇಳಿಮುಖವಾಯಿತು, ಆದಾಯ ಕಡಿಮೆಯಾಯಿತು, ದೇವಾಲಯದ ಸಿಬ್ಬಂದಿಗಳಿಗೆ ಸಂಬಳ ಕೊಡಲು ಸರ್ಕಾರಕ್ಕೆ ಕಷ್ಟಸಾಧ್ಯವಾಯಿತು. ಕೇವಲ 43 ದಿನದ ಸರ್ಕಾರದ ಆಡಳಿತಾವಧಿಯಲ್ಲಿ ದೇವಾಲಯಕ್ಕಿದ್ದ ISO ಮಾನ್ಯತೆ ಕೂಡ ನಷ್ಟವಾಯಿತು. ಇದು ಜನರಿಗೂ – ದೇವರಿಗೂ ಸರ್ಕಾರದ ಆಡಳಿತ ಇಷ್ಟವಿಲ್ಲ ಎಂಬುದನ್ನು ಸೂಚಿಸುತ್ತದೆ.

 

ಸರ್ಕಾರದ ಆಡಳಿತಾವಧಿಯಲ್ಲಿ ಅನೇಕ ಧಾರ್ಮಿಕ ಆಚರಣೆಗಳು, ಉತ್ಸವಗಳು ನಿಲ್ಲುವ ಸಂದರ್ಭಗಳು ಎದುರಾಗಿದ್ದವು. ಆದರೆ ನಾವೇ ಉಪಾಧಿವಂತರಿಗೆ ಸೂಚನೆ ನೀಡಿ ಅವುಗಳು ನಡೆಯುವಂತೆ ನೋಡಿಕೊಂಡೆವು. ಆಡಳಿತ ಯಾರದ್ದೇ ಇರಲಿ, ಮಹಾಬಲನ ಸೇವೆಯಲ್ಲಿ ವ್ಯತ್ಯಯವಾಗಬಾರದು ಎಂಬುದು ನಮ್ಮ ಕಳಕಳಿ ಎಂದು ಪೂಜ್ಯ ಶ್ರೀಗಳು ತಿಳಿಸಿದರು.

 

ಗೋಕರ್ಣ ಮೂಲದ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ವಿಜ್ಞಾನಿ ಡಾ. ನಾರಾಯಣ ಹೊಸಮನೆ ಇವರು ಈ ಬಾರಿಯ “ಸಾರ್ವಭೌಮ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೀ ಮಹಾಬಲೇಶ್ವರ ದೇವಾಲಯದಿಂದ ಪ್ರತಿವರ್ಷ ಸಮಾಜಮುಖಿಯಾಗಿ ತೊಡಗಿಸಿಕೊಂಡವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಮಾರಣಾಂತಿಂಕ ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿಸಿಕೊಂಡು “ಬೋರಾನ್ ನ್ಯೂಟ್ರಾನ್ ಕ್ಯಾಪ್ಟರ್ ಥೆರಪಿ” ಪಿತಾಮಹ ಖ್ಯಾತಿಗಳಿಸಿದ ಹಾಗೂ 25ಕ್ಕೂ ಹೆಚ್ಚು ದೇಶಗಳಿಂದ ವಿಜ್ಞಾನಕ್ಷೇತ್ರದ ಪ್ರಮುಖ ಪ್ರಶಸ್ತಿಯನ್ನು ಪಡೆದ ಡಾ. ನಾರಾಯಣ್ ಹೊಸಮನೆಯವರ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಲಾಗಿದೆ.
ದೇವಾಲಯಕ್ಕಿದ್ದ ISO certification ನಷ್ಟವಾಗಿದ್ದು, ಇದೀಗ ಮತ್ತೆ ಮಠದ ಪಾರದರ್ಶಕ ಸಮರ್ಥ ಆಡಳಿತಕ್ಕೆ ಅಂತಾರಾಷ್ಟೀಯ ಮಟ್ಟದ ISO certification ಮತ್ತೆ ಲಭ್ಯವಾಗಿದ್ದು, ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲೇ ಇದು ಲಭ್ಯವಾಗಿರುವುದು ದೇವಾಲಯದ ಭಕ್ತರಿಗೆ ಸಂತಸವನ್ನು ಉಂಟುಮಾಡಿದೆ.
ಧರ್ಮಸಭೆಯಲ್ಲಿ ಶಿವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಆರ್ ಮಲ್ಲನ್, ಶ್ರೀ ಡಿ ಡಿ ಶರ್ಮಾ, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು, ಉದ್ಯಮಿಗಳಾದ ಶ್ರೀ ಎನ್ ಎಚ್ ಇಲ್ಲೂರ, ನಿವೃತ್ತ ಅರಣ್ಯಾಧಿಕಾರಿ ಶ್ರೀ ನಾಗರಾಜ ನಾಯಕ ತೊರ್ಕೆ, ತಾ ಪಂ ಸದಸ್ಯ ಶ್ರೀ ಮಹೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಕ್ಷೇತ್ರದ ಪದನಿಮಿತ್ತ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಅಭ್ಯಾಗತರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *