ಅದೊಂದು ಪುಟ್ಟ ಬೆಟ್ಟ. ಬೆಟ್ಟದ ಮೇಲೊಂದು ಪುಟ್ಟ ಮನೆ. ಅದರಲ್ಲಿ ಪುಟ್ಟ ಪುಟ್ಟ ಕಿಟಕಿ ಬಾಗಿಲುಗಳು. ಆ ಮನೆಯಲ್ಲಿ ಒಬ್ಬ ಪುಟ್ಟ ಹುಡುಗಿ. ಅವಳು ಪ್ರತಿದಿನ ಕಿಟಕಿಯ ಹತ್ತಿರನಿಂತು ಹೊರಗಿನ ಪ್ರಪಂಚವನ್ನು ನೋಡುತ್ತಿರುತ್ತಾಳೆ. ಅವಳು ನೋಡುತ್ತಿರುವಾಗ ಎದುರು ಬೆಟ್ಟದಲ್ಲೂ ಒಂದು ಪುಟ್ಟ ಮನೆ ಗೋಚರಿಸುತ್ತದೆ. ಅದು ಚಿನ್ನದಂತೆ ಹೊಳೆಯುತ್ತಿರುವಂತೆ ಭಾಸವಾಗುತ್ತದೆ. ಈ ಹುಡುಗಿಗೆ ಅಲ್ಲಿಗೆ ಹೋಗಬೇಕೆಂದು ತುಂಬ ಆಸೆ ಆಗುತ್ತದೆ. ಅಲ್ಲದೆ ಅಲ್ಲಿಯೇ ವಾಸಿಸಬೇಕೆಂಬ ತುಡಿತ ಉಂಟಾಗುತ್ತದೆ.
ಕೆಲವು ವರ್ಷಗಳ ಅನಂತರ ಅವಳಿಗೆ ತಂದೆ ಒಂದು ಸೈಕಲ್ ತಂದು ಕೊಡುತ್ತಾನೆ. ದಿನವೂ ಸೈಕಲ್ ಏರಿ ಪ್ರಯಾಣಿಸುತ್ತಿದ್ದ ಅವಳು ಒಂದು ದಿನ ಕುತೂಹಲ ತಡೆಯಲಾರದೆ ಎದುರಿಗೆ ಕಾಣಿಸುತ್ತಿದ್ದ ಬೆಟ್ಟದ ಮನೆಯ ಹತ್ತಿರ ಹೋಗುತ್ತಾಳೆ. ಹೋಗಿ ನೋಡುತ್ತಾಳೆ. ಆ ಮನೆ ಏನೇನೂ ಚೆನ್ನಾಗಿರುವುದಿಲ್ಲ. ತುಂಬಾ ಕೊಳಕಾಗಿರುತ್ತದೆ, ಬಣ್ಣ ಮಾಸಿರುತ್ತದೆ. ಯಾವ ಚಿನ್ನದ ಬಣ್ಣದ ಬಾಗಿಲೂ ಕಾಣಿಸುವುದಿಲ್ಲ. ಅವಳು ಬೇಸರದಿಂದ ತನ್ನ ಮನೆಗೆ ಹಿಂತಿರುಗಿ ಹೊರಡಲು ಸೈಕಲ್ ಏರಲು ಹೋದಾಗ ನೋಡುತ್ತಾಳೆ. ಎದುರು ಮನೆ ಬಾಗಿಲು ಚಿನ್ನದಂತೆ ಹೊಳೆಯುತ್ತಿರುತ್ತದೆ. ಅದು ತನ್ನದೇ ಮನೆಯಾಗಿರುತ್ತದೆ.
ಗೋಪಾಲಕೃಷ್ಣ ಅಡಿಗರು ಹೇಳಿದಂತೆ ನಾವೆಲ್ಲ, ಇರುವುದೆಲ್ಲವ ಬಿಟ್ಟು ಇರದವುಗಳ ಕಡೆಗೆ ನಮ್ಮ ನಡಿಗೆ ಇಡುತ್ತೇವೆ. ದೇಶವನ್ನೆಲ್ಲ ಸುತ್ತಿದ ಮೇಲೆ ನಮ್ಮ ಮನೆ, ನಮ್ಮ ನಾಡೇ ಚೆಂದ ಅನಿಸುತ್ತದೆ.
ನಮ್ಮದನ್ನು ನಮ್ಮದಾಗಿ ಒಪ್ಪಿ ಅಪ್ಪಿಕೊಂಡಾಗ ನೆಮ್ಮದಿ
ನೆರಳಿನಂತೆ ಹಿಂಬಾಲಿಸುತ್ತದೆ ಎಂಬ ನೀತಿಬೋಧೆಯ
ಈ ಕಥೆ ಆಗಾಗ ನೆನಪಿಸಿಕೊಳ್ಳುವಂಥದ್ದು.