ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ- “ಗುರುವಿನ ಮೌಲ್ಯವನ್ನು ತಿಳಿಯುವುದು ಹೇಗೆ?” ಎಂದು ಪ್ರಶ್ನೆ ಮಾಡುತ್ತಾನೆ.
ಆಗ ಆ ಗುರು ಅವನಿಗೆ ಒಂದು ವಜ್ರದ ಉಂಗುರವನ್ನು ಕೊಟ್ಟು-
“ಪೇಟೆಯಲ್ಲಿ ಇದರ ಮೌಲ್ಯವನ್ನು ತಿಳಿದು ಕೊಂಡು ಬಾ” ಎಂದು ಹೇಳುತ್ತಾನೆ.
ಉಂಗುರವನ್ನು ತೆಗೆದುಕೊಂಡು ಶಿಷ್ಯ ಮೊದಲಿಗೆ ಒಬ್ಬ ಹೂವಿನ ವ್ಯಾಪಾರಿಯ ಹತ್ತಿರ ಹೋಗುತ್ತಾನೆ.
ಅವನು ಅದರ ಬೆಲೆ 100 ರೂಪಾಯಿ ಮೌಲ್ಯದ ಹೂ ಹೇಳುತ್ತಾನೆ. ಒಬ್ಬ ವರ್ತಕನ ಹತ್ತಿರ ಹೋದಾಗ ಅವನು ಅದರ ಬೆಲೆ 5 ಸೇರು ಅಕ್ಕಿ ಎನ್ನುತ್ತಾನೆ.
ಅನಂತರ ಅವನು ಒಬ್ಬ ಅಕ್ಕಸಾಲಿಯ ಹತ್ತಿರ ಹೋದಾಗ ಅವನು ಅದರ ಬೆಲೆ 1000 ರೂಪಾಯಿ ಎಂದು ಹೇಳುತ್ತಾನೆ.
ಕೊನೆಯಲ್ಲಿ ಶಿಷ್ಯ ಒಬ್ಬ ವಜ್ರದ ವ್ಯಾಪಾರಿಯ ಹತ್ತಿರ ಅದರ ಮೌಲ್ಯವೇನೆಂದು ಕೇಳಿದಾಗ ಅವನು-
“ಇದು ಅತ್ಯಮೂಲ್ಯವಾದ ವಜ್ರ; ಇದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ; ಇದನ್ನು ಮಾರಬೇಡ; ಸುರಕ್ಷಿತವಾಗಿ ಕಾಪಾಡು” ಎನ್ನುತ್ತಾನೆ.
ಆಗ ಶಿಷ್ಯನಿಗೆ ಅರಿವಾಗುತ್ತದೆ ‘ಗುರುವಿನ ಮೌಲ್ಯ ತಿಳಿಯಲು ಸಾಧ್ಯವಿಲ್ಲ; ಅದು ಬೆಲೆ ಕಟ್ಟಲಾಗದ ವಜ್ರವಿದ್ದಂತೆ’ ಎಂದು.
ತಂದೆ ತಾಯಿಗಳು ಜನ್ಮ ನೀಡಿದರೆ, ಅಧ್ಯಾಪಕ ಅಕ್ಷರ ಕಲಿಸಿದರೆ, ಗುರು ಆತ್ಮೋದ್ಧಾರವಾಗುವಂತೆ ಮಾರ್ಗದರ್ಶನ ಮಾಡುತ್ತಾನೆ. ಆದ್ದರಿಂದ ಗುರು ತೋರಿಸಿದ ಮಾರ್ಗದಲ್ಲಿ ನಾವು ನಡೆದರೆ ಸಾಕು.
ಗುರು ಸಿಗಲು ಬೇಕು ಭಾಗ್ಯ
ಶಿಷ್ಯನಾಗಲು ನಾನಿರುವೆನೇ ಯೋಗ್ಯ ?
ಅಳೆಯಲಾಗದು ಅದರ ಮೌಲ್ಯ
ಅರಿಯಬೇಕಿದೆ ನಮ್ಮ ದೌರ್ಬಲ್ಯ|