ಗಿರಿನಗರ: ಭೂಮಿತಾಯಿಗೆ ನೀರು ಕುಡಿಯಲೂ ಅವಕಾಶವಿಲ್ಲದ ಹಾಗೆ ನಮ್ಮ ವ್ಯವಸ್ಥೆಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ತತ್ವಾರ ಬರುವ ಹಾಗಾಗುತ್ತಿದೆ. ಆಳುವವನಿಗೆ ಮುಂದಾಲೋಚನೆಯ ಜತೆಗೆ ವ್ಯವಸ್ಥೆಯ ಮೇಲೆ ಹಿಡಿತ ಇದ್ದಾಗ ಊರು ವ್ಯವಸ್ಥಿತವಾಗಿ ಬೆಳೆಯುತ್ತದೆ. ಸಮೃದ್ಧಿ ಇದ್ದಲ್ಲಿ ಸಂಭ್ರಮ ನೆಲೆಸಿರುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಐದನೆಯ ದಿನ ಆಶೀರ್ವಚನ ನೀಡಿದರು.
ಹಳ್ಳಿಗಳನ್ನು ಹಿಂಡಿ ಹಿಪ್ಪೆ ಮಾಡಿ ನಗರಕ್ಕೆ ತಂದು ಸುರಿಯುವ ಕಾರ್ಯ ಸರಿಯಲ್ಲ. ರಾಮಾಯಣದ ಕಾಲದಲ್ಲಿಯೂ ಮಹಿಳೆಯರ ಪ್ರತಿಭೆಯನ್ನು ತೋರಿಸಲು ಅವಕಾಶಗಳಿತ್ತು. ರಾಮಾಯಣದ ಪಠನ ಮತ್ತು ಶ್ರವಣದ ಮೂಲಕ ಕಳೆದುಕೊಂಡ ಅಮೂಲ್ಯ ವಸ್ತುಗಳನ್ನು ಮರಳಿ ಪಡೆಯಬಹುದು. ಕಳಕೊಂಡ ಭಾರತದ ವಿದ್ಯಾನಿಧಿಯನ್ನು ಮರಳಿ ಕೊಡುವ ಕಾರ್ಯ ವಿಶ್ವವಿದ್ಯಾಲಯದ ಮೂಲಕ ನಡೆಯಲಿದೆ. ಪ್ರಜೆಗಳಲ್ಲಿ ಉತ್ತಮ ಮನೋಭಾವ ನಿರ್ಮಾಣ ಮಾಡುವುದರಿಂದ ಸುಖೀ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ರಾಮಾಯಣದ ಕಾಲದಲ್ಲಿ ಅಯೋಧ್ಯೆಯಲ್ಲಿ ಎಲ್ಲವೂ ಸಮೃದ್ಧವಾಗಿತ್ತು. ಅಯೋಧ್ಯೆಯ ಕಾಲ ವಸ್ತು ಪ್ರಜೆಗಳ ಸಮಗ್ರ ಚಿತ್ರಣವನ್ನು ಪ್ರವಚನದಲ್ಲಿ ವಿವರಿಸಲಾಯಿತು.
ವಾದಿರಾಜ ಸಾಮಗ ದಂಪತಿಗಳು ಫಲ ಸಮರ್ಪಿಸಿದರು. ಮಧುಕೇಶ್ವರ ದಿವ್ಯಶ್ರೀ ದಂಪತಿಗಳು ಮಹಾದೀಪಕ್ಕೆ ತೈಲ ಸಮರ್ಪಣೆ ಮಾಡಿದರು. ವಿನಾಯಕ ಎನ್. ಭಟ್ ಕಾರ್ಯಕ್ರಮ ನಿರೂಪಿಸಿದರು.