ದೇಶದ ಅತ್ಯುತ್ಕೃಷ್ಟ ಸಂಸ್ಕೃತ ವಿಶ್ವವಿದ್ಯಾಲಯವಾದ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಲ್ಲಿ 09.02.2019 ರಂದು ನಡೆದ 22 ನೇ ಘಟಿಕೋತ್ಸವದಲ್ಲಿ ರಾಘವೇಂದ್ರ ಭಟ್ಟ ಕ್ಯಾದಗಿ ಇವರಿಗೆ ಪಿಹೆಚ್.ಡಿ. ಪ್ರದಾನ ಮಾಡಲಾಯಿತು.
`ಮಾಧ್ಯಮಿಕಸ್ತರೇ ಸಂಸ್ಕೃತಾಧ್ಯಯನಸಮಸ್ಯಾನಾಂ ಪ್ರಯೋಗಾತ್ಮಕಮಧ್ಯಯನಂ ಪರಿಹಾರೋಪಾಯಾಶ್ಚ’ – `An Experimental Study of Problems of Learning Sanskrit at Secondary Level and Remedial Measures’ ಎಂಬ ವಿಷಯದಲ್ಲಿ ನಡೆಸಿದ ಪ್ರಯೋಗಾತ್ಮಕವಾದ ವೈಜ್ಞಾನಿಕ ಸಂಶೋಧನಾಧ್ಯಯನಕ್ಕೆ ಡಾಕ್ಟರೇಟ್ ಪದವಿ ಲಭಿಸಿದ್ದು, ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದ ಕುಲಾಧಿಪತಿ, ಭಾರತದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ, (ಐ.ಎ.ಎಸ್.) ಹಾಗೂ ಕುಲಪತಿ ಪ್ರೊ. ವಿ. ಮುರಳೀಧರ ಶರ್ಮಾ ಅವರು ಗಣ್ಯರ ಸಮ್ಮುಖದಲ್ಲಿ ಪದವಿ ಪ್ರದಾನ ಮಾಡಿದರು. ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠ ಸಂಸ್ಕೃತ ಶಿಕ್ಷಾಶಾಸ್ತ್ರ ಸಂಕಾಯದ ಡೀನ್ ಪ್ರೊ. ಪ್ರಹ್ಲಾದ ಆರ್. ಜೋಶಿಯವರು ಈ ಸಂಶೋಧನಾಧ್ಯಯನದ ಮಾರ್ಗದರ್ಶಕರಾಗಿದ್ದರು.
ಬೆಂಗಳೂರಿನ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿರುವ ಡಾ. ರಾಘವೇಂದ್ರ ಭಟ್ಟರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ಗ್ರಾಮದ ಕಲ್ಲಾಳ ಕುಟುಂಬದ ಗಣಪತಿ ಭಟ್ಟ, ಹಿರೇಕೈ ಹಾಗೂ ಸರ್ವೇಶ್ವರೀ ದಂಪತಿಗಳ ಪುತ್ರರು.
ಸಾಮಾಜಿಕವಾಗಿಯೂ ಸಕ್ರಿಯರಾದ ಶ್ರೀಯುತರು ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ವೈದಿಕ ವಿಭಾಗದ ಸಹ ಪ್ರಧಾನ ಹಾಗೂ ದಕ್ಷಿಣ ಬೆಂಗಳೂರು ಮಂಡಲದ ವೈದಿಕ ಪ್ರಧಾನ, `ಶ್ರೀಮುಖ’ ಅಂತರ್ಜಾಲೀಯ ವಾರ್ತಾವಾಹಿನಿಯ ಸಂಸ್ಕೃತ ಆವೃತ್ತಿಯ ಸಂಪಾದಕ, `ಗೋವಾಣಿ’ ಸಾಪ್ತಾಹಿಕ ಅಂತರ್ಜಾಲ ಪತ್ರಿಕೆಯ ಸಹ ಸಂಪಾದಕ, ಶ್ರೀ ಅಖಿಲ ಹವ್ಯಕ ಮಹಾಸಭೆಯು ನಡೆಸಿದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ `ವೇದರತ್ನ’ ಪುರಸ್ಕಾರದ ಸಂಚಾಲಕ, `ಆರೂಢ ಭಾರತೀ’ ಸಂಶೋಧನಾ ಪತ್ರಿಕೆಯ ಸಂಪಾದಕ, `ಉನ್ನತಿ ಗುರುಕುಲ’ ದ ದಿಗ್ದರ್ಶಕಮಂಡಲಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಸರ್ಕಾರದ ವತಿಯಿಂದ ರಚಿಸಲಾದ ಕರ್ನಾಟಕ ರಾಜ್ಯ ಪಠ್ಯಕ್ರಮದ ಸಂಸ್ಕೃತ ಪಾಠ್ಯಪುಸ್ತಕ ರಚನೆ ಹಾಗೂ ಪರಿಷ್ಕರಣ ಸಮಿತಿಗಳಲ್ಲಿ ಅಧ್ಯಕ್ಷ, ಪರಿಷ್ಕಾರಕ, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಭಾರತೀ ಪ್ರಕಾಶನದಿಂದ ಪ್ರಕಟಿತವಾದ ಇವರ `ನಿಬಂಧಮಂದಾಕಿನೀ’ ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ‘ಸಂಸ್ಕೃತ ಗ್ರಂಥ ಪುರಸ್ಕಾರ – ೨೦೧೫’ ರಾಜ್ಯ ಪ್ರಶಸ್ತಿಯೂ ಲಭಿಸಿದೆ.