ಭೂತಾಯಿಯ ಸೀಮಂತ

ಇಳೆಯ ಹೊಳೆ : ಕವಿತಾ ಧನಂಜಯ ಜೋಯ್ಸ್

 ಭೂಮಿ ಹುಣ್ಣಿಮೆ ಹಬ್ಬ. ಆಹಾ, ಬಾಲ್ಯದಲ್ಲಿ ಈ ಹಬ್ಬ ಅಂದ್ರೆ ಏನೋ ಸಂಭ್ರಮ. ಆಚರಣೆಯ ಬಗ್ಗೆ ಅರಿವಿಲ್ಲದೆ ಹೋದರೂ ಕಡುಬು ತೋಟದಲ್ಲಿ ತಿನ್ನಬಹುದಲ್ಲ ಅನ್ನೋ ಖುಷಿ.

 

 ಪರಿಸರದಲ್ಲಿ ಆಗೋ ಪ್ರತಿ ಬದಲಾವಣೆಯನ್ನೂ ಗಮನಿಸಿ ನಮ್ಮ ಹಿರಿಯರು ಹಬ್ಬಗಳ ಆಚರಣೆ ತಂದರು. ಈ ಹಬ್ಬ ಬರುವುದು ಭೂಮಿತಾಯಿ ಮೈದುಂಬಿ ಬಸಿರಾದ ಕಾಲದಲ್ಲಿ. ಹೊಲ ಹಸಿರನುಟ್ಟು ಸೀಮಂತಕ್ಕೆ ಸಿಂಗಾರಗೊಂಡ ಕಾಲವದು. ಈ ಹಬ್ಬದ ಆಚರಣೆ ಊರಿಂದ ಊರಿಗೆ ಭಿನ್ನ. ಆದರೇನಂತೆ ಭಾವ ಅದೇ ತಾನೇ. ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದೇವೆ ನಾವು. ಪ್ರತಿ ಹೆಣ್ಣಿಗೂ ತಾನು ತಾಯಿಯಾಗುವಾಗಿನ ಸಂಭ್ರಮ ಹೇಳತೀರದು. ಸೀಮಂತದ ಸಮಯವಂತೂ ಅತಿ ಸಂತಸದ ಸಮಯ. ಭೂಮಿ ಹುಣ್ಣಿಮೆ ಒಂದರ್ಥದಲ್ಲಿ  ಭೂಮಿ ತಾಯಿಗೆ ನಾವು ಮಾಡುತ್ತಿರುವ ಸೀಮಂತ. ಹೊಲದಲ್ಲಿ ಅಥವಾ ತೋಟದಲ್ಲಿ ಬಾಳೆಕಂಬದ ಮಂಟಪ ಕಟ್ಟಿ ಮಾವಿನ ತೋರಣದಿಂದ ಸಿಂಗರಿಸಲಾಗುತ್ತದೆ, ವಿವಿಧ ಬಗೆಯ ಸೊಪ್ಪುಗಳನ್ನು ತಂದು ಎಲ್ಲ ಸೇರಿಸಿ ಸಾಕು ಸೊಪ್ಪು ಅಂತ ಪಲ್ಯಾ ಮಾಡಲಾಗತ್ತೆ, ಯಾವುದೇ ನಂಜಿನ ಸೊಪ್ಪು ಉಪಯೋಗಿಸಲಾಗಲ್ಲ ಅನ್ನೋದು ವಿಶೇಷ. ಜೊತೆಗೆ ಸೌತೆಕಾಯಿ ಕಡಬು, ಕೋಸಂಬರಿ, ಬಗೆ ಬಗೆ ಅಡುಗೆ, ಚಿತ್ರಾನ್ನ, ಬುತ್ತಿಅನ್ನ ಹೀಗೆ ಹಲವು ಬಗೆ ಪದಾರ್ಥ. ಇದೆಲ್ಲ ಭೂಮಿ ತಾಯಿಗೆ ಬಡಿಸೋಕೆ. ಇವೆಲ್ಲವನ್ನೂ ಸಿದ್ದಪಡಿಸಿ ಮುಂಜಾನೆ ಭೂಮಿತಾಯಿಗೆ ಪೂಜೆ. ಮಂತ್ರ ಪೂಜೆಯೊಂದಿಗೆ ಇವೆಲ್ಲ ಅಡುಗೆಯನ್ನು ನೈವೇದ್ಯ ಮಾಡಿ, ಜೊತೆ ಒಂದಷ್ಟನ್ನು ಭೂಮಿಯೊಳಗೆ ಹುಗಿಯೋದು ಪದ್ಧತಿ. ಅದು ಭೂಮಿತಾಯಿಗೆ ಬಡಿಸಿದಂತೆ. ಅದಲ್ಲದೆ ಸಾಕು ಸೊಪ್ಪು, ಬುತ್ತಿಅನ್ನ, ಚಿತ್ರಾನ್ನ, ಪಾಯ್ಸ ಕಡುಬನ್ನು ಮಿಶ್ರ ಮಾಡಿ ಹಾಡು ಹೇಳುತ್ತ ಭೂಮಿಯ ಎಲ್ಲ ಕಡೆ ಬಿತ್ತೋದು ಪದ್ಧತಿ.
    

 

ನಮ್ಮ ಕಡೆ ಸ್ವಲ್ಪ ಭಿನ್ನ ಪದ್ಧತಿಯಿದೆ. ಭೂಮಿತಾಯಿಗೆ ಬಡಿಸಲು ರಾತ್ರಿ ಇಡೀ ಬಗೆ ಬಗೆಯ ಅಡುಗೆ ಮಾಡಿ ಮುಂಜಾನೆ ಕಾಗೆ ಕೂಗುವುದರೊಳಗೆ ಪೂಜೆ ಸಲ್ಲಿಸಿ ಭೂಮಿಗೆ ಅಡುಗೆಯನ್ನು ಬಡಿಸಿ ಸಂಭ್ರಮಿಸೋ ಪದ್ಧತಿ. ಸಿದ್ಧಪಡಿಸಿದ ಅಡುಗೆ ಎಲ್ಲವನ್ನೂ ಚಂದವಾಗಿ ಅಲಂಕರಿಸಿದ ಬುಟ್ಟಿಯಲ್ಲಿ ಜೋಡಿಸಿ ಗದ್ದೆಗೆ ಹೊತ್ತೊಯ್ಯೋದು ನೋಡೋಕೆ ಕಣ್ಣಿಗೆ ಹಬ್ಬ. ಆ ಬುಟ್ಟಿಯನ್ನ ‘ಕುಕ್ಕೆಬುಟ್ಟಿ’ ಅಂತ ಕರೀತಾರೆ. ಬೆತ್ತದ ಬುಟ್ಟಿಗೆ ಚಂದಚಂದದ ರಂಗೋಲಿಯನ್ನು ಜೇಡಿಯಲ್ಲಿ ಬರೆಯುತ್ತಾರೆ. ಅದನ್ನ ನವರಾತ್ರಿ ದಶಮಿಯಿಂದ ಬರೆಯಲು ಪ್ರಾರಂಭಿಸಿದರೆ ಭೂಮಿಹುಣ್ಣಿಮೆ ದಿನಕ್ಕೆ ಪೂರೈಸುತ್ತಾರೆ. ಹೀಗೆ ಅಲಂಕಾರಿಸಿದ ಕುಕ್ಕೆಬುಟ್ಟಿಯಲ್ಲಿ ಭೂತಾಯಿಗೆ ಬಗೆ ಬಗೆಯ ಅಡುಗೆಯ ಹೊತ್ತು ಸಾಗೋ ಪರಿ ಅನನ್ಯ.  
   

 

ಪ್ರಕೃತಿ ಹಸಿರುಟ್ಟು ಸಿಂಗಾರಗೊಂಡ ಈ ಸಮಯದಿ ಭೂಮಿತಾಯಿಯ ನೋಡೋದೆ ಒಂದು ಹಬ್ಬ. ಅದರಲ್ಲಿ ಭೂಮಿಹುಣ್ಣಿಮೆ ಹಬ್ಬವಂತೂ ರೈತರ ಸಂತಸವನ್ನು ಇಮ್ಮಡಿಗೊಳಿಸೋ ಹಬ್ಬವೆಂದೇ ಹೇಳಬಹುದು. ಅನ್ನ ನೀಡೋ ಭೂತಾಯಿ ಮೈದುಂಬಿ ಬಸುರಿಯಾಗಿ ನಿಂತಿದ್ದಾಳೆ. ಅವಳ ಬಯಕೇನ ಅವಳೇನು ಹೇಳುವುದಿಲ್ಲ ನಮಗೆ. ಆ ತಾಯಿಗೆ ಮಕ್ಕಳ ಬಯಕೆಯನ್ನು ಪೂರೈಸುವುದರಲ್ಲೇ ತೃಪ್ತಿ. ಅವಳನ್ನ ಮಲಿನಗೊಳಿಸದೆ ನಮ್ಮ ವೈಭವದ ಜೀವನಕ್ಕೆ ಅವಳನ್ನ ಬಲಿಪಶುವಾಗಿಸದೆ, ಫಲವತ್ತಾಗಿ ಅವಳನ್ನ ಉಳಿಸಿದರೆ ಅದೇ ನಿಜವಾದ ಪೂಜೆ. ಭೂತಾಯಿಯ ಸೇವೆಗೈದು ಅವಳ ಋಣಭಾರವನ್ನು ಕಡಿಮೆಯಾಗಿಸಿಕೊಳ್ಳೋಣ.

                    

Author Details


Srimukha

Leave a Reply

Your email address will not be published. Required fields are marked *