ಶ್ರೀಗುರುಗಳ ಅಭಯ ಬದುಕಿನ ಭರವಸೆ – ಅನಸೂಯಾ ಗಣಪತಿ ಅವಧಾನಿ ಹೊನ್ನಾವರ

ಮಾತೃತ್ವಮ್

 

ಗೋಮಾತೆಯ ಸೇವೆಯ ಜೊತೆಗೆ ಶ್ರೀಮಠದ ಸೇವೆಯಲ್ಲಿಯೂ ತೊಡಗಿಸಿಕೊಂಡು, ಸಮರ್ಪಣಾ ಭಾವದಿಂದ, ಸದ್ದಿಲ್ಲದ ಸೇವೆಯಲ್ಲಿ ನಿರತರಾಗಿ ಪುನೀತಭಾವ ತಳೆದವರು ಕುಮಟಾ ಮಂಡಲ, ಹೊನ್ನಾವರ ವಲಯದ ಉದಯಗಿರಿಯ ಗಣಪತಿ ಅವಧಾನಿಯವರ ಪತ್ನಿ ಅನಸೂಯಾ ಅವಧಾನಿ. ಕುಮಟಾ ಸಮೀಪ ಅಂತರವಳ್ಳಿಯ ಪರಮೇಶ್ವರ ಹೆಗಡೆ, ಯೆಂಕಿಯಮ್ಮ ಅವರ ಪುತ್ರಿಯಾದ ಅನಸೂಯಾ ಅವಧಾನಿ ಶ್ರೀಮಠದ ಸೇವೆಯನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿದವರು.

 

ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋಮಾತೆಯ ಮೇಲೆ ವಿಶೇಷ ಪ್ರೀತಿ. ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನು ಮಾಡಲಾರಂಬಿಸಿದ ಇವರು ಒಂದು ಹಸುವಿನ ಪೋಷಣೆಯ ಗುರಿಯನ್ನು ಪೂರೈಸಿದ್ದಾರೆ.

 

” ಗೋಮಾತೆಯೆಂದರೆ ತಾಯಿ ಇದ್ದಂತೆ. ಅವಳ ಸೇವೆ ಮಾಡುವುದು ಪುಣ್ಯಕಾರ್ಯ. ಹಿಂದೆ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ವಯೋಸಹಜ ಕಾರಣಗಳಿಂದಾಗಿ ಈಗ ಮನೆಯಲ್ಲಿ ಹಸುಗಳನ್ನು ಸಾಕದಿದ್ದರೂ ಗೋಮಾತೆಯ ಮೇಲೆ ತುಂಬಾ ಮಮತೆಯಿದೆ. ಮಾತೃತ್ವಮ್ ಯೋಜನೆಗೆ ಅನೇಕ ಮಂದಿ ಆತ್ಮೀಯರು ಸಹಕಾರ ನೀಡಿದ್ದಾರೆ. ಶ್ರೀಮಠದ ಸೇವೆಯಲ್ಲಿ ನಿರತಳಾದ ಮೇಲೆ ಬದುಕಿನ ಕಷ್ಟಗಳೆಲ್ಲ ಮರೆತು ಹೋಗಿದೆ. ಶ್ರೀಗುರುಗಳ ಅಭಯ ವಚನಗಳು ಬದುಕಿಗೆ ಭರವಸೆಯ ಬೆಳಕಾಗಿ ಜೊತೆಯಲ್ಲಿವೆ ” ಎನ್ನುವ ಅನಸೂಯಾ ಅವಧಾನಿಯವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವಾಗ ಪ್ರತಿದಿನವೂ ಗಿರಿನಗರದ ರಾಮಶ್ರಮಕ್ಕೆ ಹೋಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದವರು. ತುಳಸಿಹಾರ ತಯಾರಿ, ಶ್ರೀಗುರುಗಳ ಪೂಜಾ ಸಮಯದಲ್ಲಿ ಹಣತೆ ಹಚ್ಚುವುದು ಮೊದಲಾದ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದವರು ಇವರು. ತಮ್ಮ ಜೊತೆ ಮೊಮ್ಮಗಳನ್ನು ರಾಮಾಶ್ರಮಕ್ಕೆ ಕರೆತಂದು ಅವಳಿಗೂ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕುವಂತೆ ಮಾಡಿದ್ದಾರೆ.

 

ಮಗ, ಸೊಸೆ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದರೂ ಊರಿನಲ್ಲೇ ಉಳಿದು ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವ ಅನಸೂಯಾ ಅವರು ಅಶೋಕೆಯಲ್ಲಿ ನಡೆಯುವ ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಅಲ್ಲಿಗೆ ತೆರಳಿ ಯಥಾಶಕ್ತಿ ಸೇವೆಗಳನ್ನು ಸಲ್ಲಿಸುತ್ತಾರೆ. ಸರಳ ಬದುಕು, ಶಿಸ್ತುಬದ್ಧ ಜೀವನ ನಡೆಸುವ ಇವರು ಶ್ರೀಮಠದ ಸೇವೆಯಲ್ಲಿ ನೆಮ್ಮದಿ ಕಾಣುವವರು.

 

” ಸ್ತೋತ್ರಗಳನ್ನು ಪಠಿಸುವುದು, ಭಜನೆಗಳನ್ನು ಹಾಡುವುದು ನನ್ನ ಹವ್ಯಾಸ. ನಮ್ಮೂರ ಭಜನಾ ತಂಡದಲ್ಲಿದ್ದೇನೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ಅಶೋಕೆಗೆ ತೆರಳಿ ಭಜನಾ ಸೇವೆ ನಡೆಸಿಕೊಟ್ಟಿದ್ದೇವೆ. ಶ್ರೀಗುರುಗಳು ನಮ್ಮ ಮನೆಗೆ ಚಿತ್ತೈಸಿದ್ದು, ನಮ್ಮ ಮನೆಯಲ್ಲಿ ಪಾದಪೂಜೆ ಮಾಡುವ ಅವಕಾಶ ದೊರಕಿದ್ದು ಬದುಕಿನ ಸೌಭಾಗ್ಯ ” ಎನ್ನುವ ಅನಸೂಯಾ ಅವಧಾನಿಯವರಿಗೆ ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕೆಂಬ ಹಂಬಲವಿದೆ.

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *