” ಭಾರತೀಯರ ಬದುಕಿಗೆ ಗೋಮಾತೆಯ ಕೊಡುಗೆ ಅಪಾರ. ಹಸುವಿನ ಹಾಲು ಹಾಕದೆ ಒಂದು ಲೋಟ ಚಹಾವನ್ನು ಮಾಡಲಾರೆವು. ಇನ್ನು ಕೃಷಿ ಕಾರ್ಯಗಳಲ್ಲಿ ಗೋವಿನ ಉತ್ಪನ್ನಗಳನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ಒಂದು ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಹೊತ್ತು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ ಎನ್ನಲು ಖುಷಿ ಎನಿಸುತ್ತದೆ. ಇದು ಮಾತೆಯರಿಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಗುರುಗಳು ನೀಡಿದ ಸೌಭಾಗ್ಯ ಎಂದೇ ಭಾವಿಸಿಕೊಂಡಿದ್ದೇನೆ ” ಎಂದು ಗೋಮಾತೆಯ ಅಮೂಲ್ಯ ಕೊಡುಗೆಗಳ ಬಗ್ಗೆ ಹಾಗೂ ತಮ್ಮ ಗೋಸೇವೆಯ ಅನುಭವಗಳ ಬಗ್ಗೆ ಹೆಮ್ಮೆಯಿಂದ ನುಡಿಯುವವರು ಹೊನ್ನಾವರದ ಗೇರುಸೊಪ್ಪೆಯ ಜಯಾ ಶ್ಯಾನುಬಾಗ್.
ಕಡತೋಕಾ ಶಂಕರನಾರಾಯಣ ಶ್ಯಾನುಬಾಗ್ ಹಾಗೂ ಸರಸ್ವತಿ ಶ್ಯಾನುಬಾಗ್ ಅವರ ಪುತ್ರಿಯಾದ ಜಯಾ ಗೇರುಸೊಪ್ಪೆಯ ಕೃಷ್ಣ ಹೆಗಡೆಯವರ ಪತ್ನಿ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಜಯಾ ತಮ್ಮ ಅವಳಿ ಸೋದರಿ ವಿಜಯಾ ಶ್ಯಾನುಬಾಗ್ ಅವರ ಪ್ರೇರಣೆಯಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.
” ತವರುಮನೆಯವರೆಲ್ಲ ಶ್ರೀಮಠದ ಸಂಪರ್ಕದಲ್ಲಿ ಇರುವುದರಿಂದ ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಮುಂದೆ ತಂಗಿ ವಿಜಯಾ ಗೋಸೇವೆ, ಶ್ರೀಗುರುಸೇವೆಗಳಲ್ಲಿ ತೊಡಗಿಸಿಕೊಂಡಾಗ ನನಗೂ ಆಸಕ್ತಿ ಮೂಡಿತು. ಅವಳ ಮಾರ್ಗದರ್ಶನದಿಂದ ನಾನು ಸ್ವಯಂ ಇಚ್ಛೆಯಿಂದ ಶ್ರೀಮಠದ ಸೇವೆಯಲ್ಲಿ ಪಾಲ್ಗೊಂಡೆ. ಬದುಕಿನಲ್ಲಿ ನೆಮ್ಮದಿ ಶಾಂತಿ ದೊರಕಿದ್ದು ಶ್ರೀಮಠದ ಸೇವೆಯಿಂದ ಎನ್ನಲು ಖುಷಿಯಾಗುತ್ತಿದೆ ಎನ್ನುವ ಇವರು ಈ ಹಿಂದೆ ಅಭಯಾಕ್ಷರ ಅಭಿಯಾನದಲ್ಲಿ ಭಾಗವಹಿಸಿದ್ದಾರೆ, ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದವರು.
” ಶಿಕ್ಷಕಿಯಾಗಿರುವುದರಿಂದ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಲು ತುಸು ಕಷ್ಟವಾಗುತ್ತಿದೆ, ಆದರೆ ಗೋಸೇವೆ ಕಷ್ಟವಾಗಲಿಲ್ಲ. ಗೋಮಾತೆಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿದೆ, ಶ್ರೀಮಠದ ಸಂಪರ್ಕದಲ್ಲಿ ಇಲ್ಲದವರು ಸಹಾ ಗೋಮಾತೆಯ ಸೇವೆಗೆ ಸಹಕರಿಸಿದ್ದಾರೆ, ಒಂದೆರಡು ಕಹಿ ಅನುಭವಗಳು ಇದ್ದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನನ್ನ ಸೇವಾಕಾರ್ಯವನ್ನು ಮುಂದುವರಿಸುತ್ತಿದ್ದೇನೆ . ಸ್ವಯಂ ಇಚ್ಛೆಯಿಂದ ಮಾಡುವ ಶ್ರೀಮಠದ ಸೇವೆ ಇದು ನಿತ್ಯ ನಿರಂತರ ” ಎಂದು ತುಂಬು ಹೃದಯದಿಂದ ನುಡಿಯುವ ಜಯಾ ಅವರಿಗೆ ಶ್ರೀಗುರುಗಳ ಕೃಪಾ ದೃಷ್ಟಿ ಮಾತ್ರದಿಂದಲೇ ವೈದ್ಯರ ಪರೀಕ್ಷೆಗೂ ದೊರಕದೆ ಸದಾ ಮನದ ನೆಮ್ಮದಿ ಕೆಡಿಸುತ್ತಿದ್ದ ಅನಾರೋಗ್ಯವೊಂದು ದೂರವಾಗಿದ್ದು ಬದುಕಿನಲ್ಲಿ ಮರೆಯಲಾರದ ಅನುಭವ.