ಗೋ ಪ್ರೀತಿಗೆ ಪ್ರೇರಣೆ ನಮ್ಮಪ್ಪ: ಸರಿತಾ ಪ್ರಕಾಶ್

ಮಾತೃತ್ವಮ್

“ಬಾಲ್ಯದಲ್ಲೇ ಗೋವಿನ ಮೇಲೆ ವಿಶೇಷ ಪ್ರೀತಿ ಮೂಡಲು ಕಾರಣ ನಮ್ಮಪ್ಪ ವೆಂಕಟ್ರಮಣ ಭಟ್, ಪ್ರತಿದಿನವೂ ಮುಂಜಾನೆ ಗೋವಿಗೆ ಒಂದು ಹಿಡಿಯಷ್ಟಾದರೂ ಮೇವು ನೀಡದೆ ಇತರ ಕಾರ್ಯಗಳತ್ತ ಗಮನ ಹರಿಸಿದವರಲ್ಲ ನಮ್ಮಪ್ಪ. ಇದುವೇ ಗೋವಿನ ಮೇಲೆ ಮಮತೆ ಮೂಡಲು ಕಾರಣ. ಮುಂದೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಗೋ ಸಂರಕ್ಷಣಾ ಕಾರ್ಯವು ಮನಸ್ಸಿಗೆ ಹೊಸ ಸ್ಪೂರ್ತಿ ನೀಡಿತು. ಇದರಿಂದ ಪ್ರೇರಣೆಗೊಂಡು ಸಮಾಜದಲ್ಲಿ ಭಾರತೀಯ ಗೋತಳಿಗಳ ಬಗ್ಗೆ ಅರಿವು ಮೂಡಿಸ ಬೇಕು, ಅವುಗಳ ಸಂರಕ್ಷಣೆಗಾಗಿ ಕಿಂಚಿತ್ ಸೇವೆ ಮಾಡಬೇಕು’ ಎಂಬ ಭಾವನೆಯೇ ಮಾಸದ ಮಾತೆಯಾಗಲು ಸ್ಪೂರ್ತಿ ನೀಡಿತು ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ ಮಾಣಿ ವಲಯದ ಕಂಪದಕೋಡಿ ಘಟಕಾಧ್ಯಕ್ಷೆಯೂ ಆಗಿರುವ ಸರಿತಾ ಪ್ರಕಾಶ್ .

ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಎನ್. ಜಯಪ್ರಕಾಶ್ ಅವರ ಪತ್ನಿಯಾದ ಸರಿತಾ ಸೂರಂಬೈಲು ನಿವಾಸಿಗಳಾದ ದಿ. ವೆಂಕಟ್ರಮಣ ಭಟ್, ಜಯಲಕ್ಷ್ಮಿ ವಿ.ಭಟ್ ಅವರ ಸುಪುತ್ರಿ. ಪತಿ ಜಯಪ್ರಕಾಶ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಮಾತೃತ್ವಮ್ ಮಂಗಳೂರು ಪ್ರಾಂತದ ಕಾರ್ಯದರ್ಶಿಯಾಗಿರುವ ಸರಿತಾ ಸುಮಾರು ಎರಡು ದಶಕಗಳಿಂದ ಶ್ರೀ ಮಠದ ಸಂಪರ್ಕದಲ್ಲಿದ್ದು ಕೊಂಡು ಮಠದ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಪೆರಾಜೆ ಮಾಣಿ ಮಠದಲ್ಲಿ ಜರಗಿದ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕ ಮತ್ತಷ್ಟು ನಿಕಟವಾಗಿ ಶ್ರೀಗುರುಗಳ ಗೋ ಸಂರಕ್ಷಣಾ ಯೋಜನೆಯ ಬಗ್ಗೆ ಇವರಿಗೆ ಆಸಕ್ತಿ ಮೂಡಿತು.
ಸಾವಿರದ ಸುರಭಿ ಯೋಜನೆಯ ಮೂಲಕ ಕೇವಲ ಇಪ್ಪತ್ತು ದಿನಗಳಲ್ಲಿ ಒಂದು ಲಕ್ಷದ ಗುರಿ ಸಂಗ್ರಹಿಸಿದ ಹಿರಿಮೆ ಇವರದ್ದು.
ತಾನು ಮಾಸದ ಮಾತೆಯಾಗಿ ಗುರಿ ಮುಟ್ಟಿದ ಮೇಲೆ ತನ್ನ ತಾಯಿಯನ್ನು ಪ್ರೇರೇಪಿಸಿ ಮಾಸದ ಮಾತೆಯಾಗಿ ಸೇವೆ ಮಾಡಲು ಒಪ್ಪಿಸಿದ ಸರಿತಾ ತನ್ನ ಮಗಳು ಪಿಯುಸಿ ವಿದ್ಯಾರ್ಥಿನಿ ಗಹನಾಶ್ರೀ ಯನ್ನೂ ಮಾಸದ ಮಾತೆಯಾಗಿಸುವ ಮೂಲಕ ಮಕ್ಕಳ ಮನದಲ್ಲೂ ಗೋವಿನ ಬಗ್ಗೆ ವಿಶೇಷ ಪ್ರೀತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

ಅಭಯಾಕ್ಷರ ಅಭಿಯಾನ, ಹಾಲು ಹಬ್ಬಗಳಲ್ಲಿ ಭಾಗವಹಿಸಿದ ಅನುಭವ ಹೊಂದಿರುವ ಅವರು ತಮ್ಮ ಬಂಧುಮಿತ್ರರ ವಲಯದಲ್ಲಿ ,ಆತ್ಮೀಯರ ಬಳಗದಲ್ಲಿ ಭಾರತೀಯ ಗೋ ಉತ್ಪನ್ನಗಳ ಉಪಯೋಗ, ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದವರು.
ಹವ್ಯಕೇತರ ಸಮಾಜದಲ್ಲೂ ಗೋವಿನ ಮಹತ್ವದ ಬಗ್ಗೆ ಪ್ರಚಾರ ಮಾಡಿ ಅಲ್ಲಿಯೂ ಇಬ್ಬರು ಮಾತೆಯರ ಮನ ಒಲಿಸಿ ಮಾಸದ ಮಾತೆಯಾಗಿಸಿದ ಅವರಿಗೆ ಇನ್ನಷ್ಟು ಮಂದಿ ಮಾಸದ ಮಾತೆಯರನ್ನು ನಿಯೋಜಿಸುವ ಮೂಲಕ ಸಮಾಜದ ಮೂಲೆ ಮೂಲೆಗಳಿಗೂ ಭಾರತೀಯ ಹಸುಗಳ ವಿಶೇಷತೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂಬ ಗುರಿ ಇದೆ.

“ಹಸುವಿನ ಹಸಿವಡಗಿಸುವ ಈ ಕಾರ್ಯಕ್ಕೆ ಸಮಾಜದಿಂದ ಉತ್ತಮ ಸ್ಪಂದನೆ ದೊರಕಿದೆ. ಕೇವಲ ಹಣ ಮಾತ್ರವಲ್ಲದೆ ಇತರ ಮೂಲದ ಮೂಲಕವೂ ಜನರು ಗೋಸೇವೆಗೆ ಮುಂದಾಗುತ್ತಿದ್ದಾರೆ. ಇದು ಮನಸ್ಸಿಗೆ ಖುಷಿ ನೀಡಿದೆ. ಮುಂದೆಯೂ ಗೋವಿಗಾಗಿ ಇನ್ನಷ್ಟು ಸೇವೆ ಮಾಡ ಬೇಕು. ಶ್ರೀ ಗುರುಗಳ ವಿವಿಧ ಸಮಾಜ ಮುಖಿ ಯೋಜನೆಗಳಲ್ಲಿ ಕೈ ಜೋಡಿಸಿ ,ಇತರರಿಗೂ ಪ್ರೇರೇಪಣೆ ನೀಡಬೇಕು ಎಂಬ ಉದ್ದೇಶವಿದೆ” ಎನ್ನುತ್ತಾರೆ ಸರಿತಾ ಪ್ರಕಾಶ್

 

Leave a Reply

Your email address will not be published. Required fields are marked *