ಪ್ರಕೃತಿ ಸುಂದರ ಮುರುಡೇಶ್ವರ
ಮೂರು ಕಡೆಯಿಂದ ನೀರಿನಿಂದಾವರಿಸಿದ ಕಂದುಕಗಿರಿಯ ಅಂಚಿನಲ್ಲಿ ಮುರುಡು ಮುರುಡಾಗಿದ್ದು ಭಕ್ತರನ್ನು ಹರಸುವವನು ಮೃಡೇಶ. ಮೃಡೇಶನಿಂದ ಪುನೀತವಾದ ಕಡಲತಡಿಯ ಊರು ಮುರ್ಡೇಶ್ವರ ಅಥವಾ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರನ್ನು ಕೈಬೀಸಿ ಕರೆಯುವ ಬೃಹತ್ ಮಹಾದ್ವಾರ. ದೂರದಿಂದಲೇ ಕಣ್ಮನಗಳನ್ನು ಸೆಳೆಯುವ ರಾಜಗೋಪುರ. ಶಿರವೆತ್ತಿ ನೋಡಿದಷ್ಟೂ ನೋಡುತ್ತಿರಬೇಕೆಂಬ ಮಹಾದೇವನ ಮಹಾಮೂರ್ತಿ. ಜೀವ ಮೈದಳೆದು ಬಾಗಿಲಲ್ಲಿಯೇ ಸ್ವಾಗತಿಸುತ್ತಿರುವ ಎರಡು ದೊಡ್ಡಾನೆಗಳು. ಕೈಲಾಸದಂತೆ ಮೆಟ್ಟಿಲೇರಿ ಮಂದಿರದ ಒಳಹೊಕ್ಕಾಗ ಶಿವನ ಸಾನ್ನಿಧ್ಯವನ್ನು ಸಂಸೂಚಿಸುವ ಬೃಹತ್ ನಂದಿಯ ವಿಗ್ರಹ. ಭಕ್ತಿಯಿಂದ ಕೈಮುಗಿದು ಒಳಗಡಿಯಿಟ್ಟರೆ ಭವದ ಬವಣೆಯ ಪರಿಹರಿಪ ಮೃಡನ ದರ್ಶನದ ಸಾರ್ಥಕತೆಯ ಕ್ಷಣ. ಸುತ್ತಲಿರುವ ಗಣೇಶ, ಸುಬ್ರಹ್ಮಣ್ಯ, ಪಾರ್ವತೀ, ದತ್ತಾತ್ರೇಯ, ನವಗ್ರಹಾದಿ ಮಂದಿರಗಳು ಬದುಕಿನ ಭಕ್ತಿಭಾವದ ಪರಿವೃತ್ತಗಳು. ಒಂದೆಡೆಯಲ್ಲಿ ಜನಸಂದೋಹ, ಇನ್ನೊಂದೆಡೆಯಲ್ಲಿ ಹೋಮಾಗ್ನಿಯ ದಾಹ, ಮತ್ತೊಂದೆಡೆಯಲ್ಲಿ ಅನ್ನದಾಸೋಹ. ಇದು ಪ್ರತಿದಿನವೂ ಶೋಭಿಸುವ ಪರಮಪಾವನ ಮೃಡನ ಲೀಲಾಭೂಮಿಯಾದ ಮುರುಡೇಶ್ವರ ದೇವಾಲಯದ ನಿಜವೈಭವ. ಬನ್ನಿ, ಸನಾತನ ಸಂಸ್ಕಾರದೊಂದಿಗೆ ಪ್ರಕೃತಿ ಸೌಂದರ್ಯವನ್ನು, ಕೃತಕ ವಿಲಾಸವನ್ನು, ಸಮುದ್ರದ ಗಾಂಭೀರ್ಯವನ್ನು ಹದವರಿತು ಸವಿಯೋಣ.
ಪೌರಾಣಿಕ ಹಿನ್ನೆಲೆ- ತಾಯಿ ಕೈಕಸಾದೇವಿಯು ಮರಳಿನ ಶಿವಲಿಂಗವನ್ನು ಪೂಜಿಸುವದನ್ನು ನೋಡಿದ ರಾವಣ ಶಿವನಿಂದ ಆತ್ಮಲಿಂಗವನ್ನೇ ತಂದು ತಾಯಿಗೆ ಕೊಡಲು ಯೋಚಿಸಿದ. ತಪೋಬಲದಿಂದ ಶಿವನನ್ನು ಒಲಿಸಿ ಆತ್ಮಲಿಂಗವನ್ನು ಪಡೆದು ಹೊರಟ ರಾವಣನನ್ನು ನೋಡಿ ದೇವತೆಗಳು ಚಿಂತಿತರಾದರು. ಪರಿಣಾಮ ವಟುವಿನ ರೂಪದಲ್ಲಿರುವ ಗಣಪತಿಯ ಮಾತಿಗೆ ಮರುಳಾಗಿ ಆತ್ಮಲಿಂಗವನ್ನು ವಟುವಿನ ಕೈಯ್ಯಲ್ಲಿಟ್ಟು ನಿತ್ಯಾಹ್ನಿಕಕ್ಕೆ ತೆರಳಿದ. ಸಮಯ ನೋಡಿ ವಟುವು ಧರೆಯಲ್ಲಿಟ್ಟ ಆತ್ಮಲಿಂಗವು ಭೂಸ್ಪರ್ಶದೊಂದಿಗೆ ಸ್ಥಿರವಾಗಿ ರಾವಣನ ಕ್ರೋಧಕ್ಕೆ ತುತ್ತಾಯಿತು. ಬಾಹುಬಲದಿಂದ ಲಿಂಗವನ್ನೆತ್ತಲು ಅಶಕ್ತನಾದ ರಾವಣ ಲಿಂಗದ ತುಂಡುಗಳನ್ನು ದಿಕ್ಕುದಿಕ್ಕಿಗೆ ಎಸೆಯ ತೊಡಗಿದ. ಆಗ ದಕ್ಷಿಣ ಭಾಗದ ಕಂದುಕಗಿರಿಯಲ್ಲಿ ಮುರುಡಾಗಿ ಬಿದ್ದ ಆತ್ಮಲಿಂಗವೇ ಮುರುಡೇಶ್ವರ ಎಂದು ಪ್ರಸಿದ್ಧವಾಯಿತು. ಇಂದಿಗೂ ಶುದ್ಧ ಮರಳಿನ ಮಧ್ಯೆ ಇರುವ ಮುರುಡೇಶ್ವರ ದೇವರನ್ನು ಕಣ್ತುಂಬಿಕೊಳ್ಳಬಹುದು.
ದೈವಿಕ ಹಿನ್ನೆಲೆ- ಶಿವ ತನ್ನ ತೊಡೆಯನ್ನೇರಿದ ಉಮೆಯಿಂದ ಉಮಾಕಾಂತನೂ, ಶಿರವನ್ನೇರಿದ ಗಂಗೆಯಿಂದ ಗಂಗಾಧರನೂ ಆಗಿರುವದು ವಿದಿತ ವಿಚಾರ. ಮುರುಡೇಶ್ವರದ ಮೃಡೇಶನು ಪ್ರತಿವರ್ಷ ರಥೋತ್ಸವದಲ್ಲಿ ಉಮೆಯನ್ನು, ವನಭೋಜನದಲ್ಲಿ ಗಂಗೆಯನ್ನು ವರಿಸುವದು ವಿಶೇಷ ವಿಚಾರ. ಮುರುಡೇಶ್ವರದಲ್ಲಿ ಪ್ರತಿವರ್ಷ ಮಕರಸಂಕ್ರಾಂತಿಯಂದು ವಾರ್ಷಿಕ ರಥೋತ್ಸವಕ್ಕೆ ಬೀಜಾವಾಪ ನಡೆದು ಮೂರನೆಯದಿನ ಸಮೀಪದ ಬೈಲೂರಿನಲ್ಲಿರುವ ಶ್ರೀಮಾರ್ಕಾಂಡೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಮೃಡೇಶನನ್ನು ಕರೆತರಲಾಗುತ್ತದೆ. ಹಿರಿಯ ಸಹೋದರ ಮಾರ್ಕಾಂಡೇಶ್ವರನ ಸಮ್ಮುಖದಲ್ಲಿ ಅಲ್ಲಿಯೇ ಸಮೀಪದಲ್ಲಿರುವ ಪಾರ್ವತಿ[ಶ್ರೀವನಕಾನಮ್ಮಾ]ಯೊಂದಿಗೆ ವಿವಾಹ ನಿಶ್ಚಿತಾರ್ಥ ನಡೆಯುತ್ತದೆ. ಮರುದಿನ ರಾತ್ರಿ ಪುಷ್ಪರಥವನ್ನೇರಿಳಿದ ಶಿವ ಪುನಃ ಧ್ವಜ-ಪತಾಕೆ, ಮಕರತೋರಣ, ವಾದ್ಯವೈಭವಗಳೊಂದಿಗೆ ಗ್ರಾಮಬಲಿಸಹಿತನಾಗಿ ಹಿರಿಯಣ್ಣ ಮಾರ್ಕಾಂಡೇಶ್ವರನಲ್ಲಿಗೆ ಬಂದು, ಅಲ್ಲಿಂದ ವನಕಾನಮ್ಮಾ ದೇವಾಲಯಕ್ಕೆ ತೆರಳಿ ಅಲ್ಲಿ ಶಿವ-ಪಾರ್ವತಿಯರ ವಿವಾಹವಾಗುತ್ತದೆ. ಸತಿ-ಪತಿಯರೊಂದಾಗಿ ಪಲ್ಲಕ್ಕಿಯನ್ನೇರಿ ಮಾರ್ಗದೆಲ್ಲೆಡೆ ಭಕ್ತರಿಂದ ಸ್ವಾಗತ-ಸೇವೆ ಸ್ವೀಕರಿಸುತ್ತಾ ಮಂದಿರಕ್ಕೆ ಬರುತ್ತಾರೆ. ನಂತರ ಮಹಾರಥೋತ್ಸವ ಹಾಗೂ ಅಂತಿಮವಾಗಿ ನೌಕಾಯಾನದಲ್ಲಿ ಸಮಗ್ರ ಕಂದುಕಗಿರಿಯ ಪ್ರದಕ್ಷಿಣೆಯೊಂದಿಗೆ ರಥೋತ್ಸವದ ಅವಭೃಥ ನಡೆಯುವದು ಉಮಾರಮಣನ ಲೀಲೆ. ಮುರುಡೇಶ್ವರದಿಂದ ಪೂರ್ವಭಾಗದ ದೇವಿಕಾನೆಂಬ ಊರಿನ ಶ್ರೇಯಾಲಯಾ ನದೀತೀರದಲ್ಲಿರುವ ಶ್ರೀದುರ್ಗಾಪರಮೇಶ್ವರೀ ಅಭಿದಾನದಿಂದ ವಿರಾಜಿತಳಾದ ಗಂಗೆಯನ್ನು ಗಂಗಾಷ್ಟಮಿಯ ಪರ್ವಕಾಲದಲ್ಲಿ ಹಾಗೂ ಕಾರ್ತಿಕ ಮಾಸದ ವನಭೋಜನ ಕಾರ್ಯದಲ್ಲಿ ಮೃಡೇಶನು ಸಂಧಿಸುವ ಮೂಲಕ ಗಂಗಾಧರನಾಗಿರುವದು ಐತಿಹ್ಯ. ಹೀಗೆ ಭಕ್ತಮನೋಭೀಷ್ಟದಾಯಕ ಶಿವನ ಆತ್ಮಲಿಂಗವೇ ಆದ ಮೃಡೇಶನಿಗೆ ಈ ವರ್ಷ ದಿನಾಂಕ ೨೦-೦೧-೨೦೧೯ ರಂದು ಮಹಾರಥೋತ್ಸವ ನಡೆಯುತ್ತಿದೆ. ಸ್ಥಿರಮೂರ್ತಿಯಿಂದ ಚರಮೂರ್ತಿಗೆ ಹರಿದ ದೈವ ಚೈತನ್ಯ ಜಾತ್ರೆ[ಯಾತ್ರೆ]ಯ ಕಾಲದಲ್ಲಿ ಭಕ್ತಹೃದಯಕ್ಕೆ ಹತ್ತಿರವಾಗುವದು ರಥೋತ್ಸವದ ಪರಮೋದ್ದೇಶ.
ಪ್ರವಾಸಿ ಹಿನ್ನೆಲೆ- ರಾಷ್ಟ್ರೀಯ ಹೆದ್ದಾರಿಯಿಂದ ಒಳಬಂದೊಡನೆ ಹೊಂಬಣ್ಣದ ಮಹಾದ್ವಾರ ನಮ್ಮನ್ನು ಮುರ್ಡೇಶ್ವರಕ್ಕೆ ಸ್ವಾಗತಿಸುತ್ತದೆ. ಊರಮಧ್ಯದಲ್ಲಿ ಕುಂಭತೀರ್ಥ ಹೆಸರಿನ ಸರೋವರವಿದ್ದು ಕಾರ್ತಿಕ ಅಮಾವಾಸ್ಯೆಯ ದೀಪೋತ್ಸವದಂದು ದೇವರ ತೆಪ್ಪೋತ್ಸವ ನಡೆಯುತ್ತದೆ. ದೇವಾಲಯದ ಮುಂಭಾಗದಲ್ಲಿ ಮೊದಲು ರಸ್ತೆ ಇರಲಿಲ್ಲ. ಎರಡೂ ಪಕ್ಕಗಳಿಂದ ಬರುವ ತೆರೆಗಳಿಂದ ಸಮುದ್ರ ಒಂದಾಗುತ್ತಿತ್ತು. ಇಂದು ವಿಶಾಲವಾದ ರಸ್ತೆ ನಿರ್ಮಾಣವಾಗಿದೆ. ದೇವಾಲಯ ಪ್ರವೇಶದ ಮುಖ್ಯದ್ವಾರದ ಮುಂಭಾಗದಲ್ಲಿದೆ ಬೃಹತ್ ರಾಜಗೋಪುರ. ಇಪ್ಪತ್ತು ಅಂತಸ್ತುಗಳುಳ್ಳ ಸುಮಾರು ೨೪೯ ಅಡಿಗಳಷ್ಟು ಎತ್ತರವಾಗಿದ್ದು ಪ್ರತಿ ಅಂತಸ್ತಿನ ಹೊರಭಾಗದಲ್ಲಿ ದೇವತಾ ವಿಗ್ರಹಗಳನ್ನು ರಚಿಸಲಾಗಿದೆ. ಒಳಭಾಗದಲ್ಲಿ ಲಿಫ್ಟ್ ವ್ಯವಸ್ಥೆಯಿದ್ದು ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ. ಮುಖ್ಯದ್ವಾರದ ಎಡಭಾಗದಲ್ಲಿ ಚಲಿಸಿ ಕಂದುಕಗಿರಿಯನ್ನೇರಿದರೆ ಅನೇಕ ಕೌತುಕಗಳು ನಮ್ಮನ್ನು ಸೆಳೆಯುತ್ತವೆ. ೧೨೩ ಅಡಿ ಎತ್ತರದ ವಿಶ್ವದ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಭಗವಂತನ ಅಪ್ರತಿಮತ್ತ್ವವನ್ನು ಪ್ರತಿಪಾದಿಸುತ್ತದೆ. ಅದರಡಿಯಲ್ಲಿದೆ ಕೃತಕ ಗುಹೆ. ಮಧ್ಯದಲ್ಲಿ ಶ್ರೀರಾಮೇಶ್ವರ ಲಿಂಗ. ಸುತ್ತಲೂ ಭೂಕೈಲಾಸವನ್ನು ಪ್ರತಿನಿಧಿಸುವ ಶಿಲ್ಪಗಳು ಹಾಗೂ ವಿವರಣೆಗಳು. ಭಗೀರಥನಿಗಾಗಿ ಗಂಗೆಯನ್ನು ಧರಿಸುವ ಶಿವನ ವಿಗ್ರಹ, ಶನಿದೇವಾಲಯ, ಸೂರ್ಯರಥ, ಗೀತೋಪದೇಶ, ವಿವಿಧ ಭಂಗಿಯ ನಂದಿಗಳು ಮೊದಲಾದ ಪ್ರವಾಸಿ ಆಕರ್ಷಣೆಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಧಾವಂತದ ಜೀವನದ ಜಂಜಡಗಳನ್ನು ಮರೆಸುವ, ಪ್ರಕೃತಿಯ ಸಹಜ ಸುಂದರ ಒನಪು-ವೈಯಾರಗಳನ್ನು ಕಲ್ಪನಾಲೋಕದಲ್ಲಿ ಕಟ್ಟಿಕೊಡುವ, ಘನ-ಗಾಂಭೀರ್ಯತೆಗಳನ್ನು ಒಡಲಲ್ಲಿಟ್ಟು ಕೈಬೀಸಿ ಕರೆಯುವ ಇಕ್ಕೆಲೆಗಳ ಸಮುದ್ರದ ವೈಭವ ಮುರುಡೇಶ್ವರದ ಜೀವಂತಿಕೆಯಾಗಿದೆ.
ಹಿಂದೊಂದು ಕಾಲದಲ್ಲಿ ಕೋಟೆಗುಡ್ಡೆ ಎಂದು ಕರೆಯಲ್ಪಡುತ್ತಿದ್ದ ಕಂದುಕಗಿರಿಯು ಕಲ್ಲು, ಮುಳ್ಳು, ಬಂಡೆಗಳ ಬೀಡಾಗಿತ್ತು. ಶ್ರೀಯುತ ಡಾ|| ಆರ್.ಎನ್.ಶೆಟ್ಟಿಯವರ ಕನಸು ಹಾಗೂ ಪ್ರಯತ್ನ ಮತ್ತು ಶ್ರೀಮೃಡೇಶನ ಮೇಲಿರುವ ಅತ್ಯಂತ ಭಕ್ತಿ ಇಂದಿನ ಮುರುಡೇಶ್ವರದ ನಿರ್ಮಾಣಕ್ಕೆ ಕಾರಣವಾಯಿತು. ಸುಮಾರು ೯೦೦ ವರ್ಷಗಳಿಂದ ಅನೂಚಾನವಾಗಿ ಶ್ರೀದೇವರ ಸಪರ್ಯೆಯಲ್ಲಿ ಅಡಿಗಳ ಕುಟುಂಬ ನಿರತವಾಗಿದೆ. ಊರವರ ಸತತ ಬೆಂಬಲ, ಹಿರಿಯರ ಹಾರೈಕೆಗಳು ಮುರುಡೇಶ್ವರವನ್ನು ವಿಶ್ವಮಾನ್ಯವಾಗಿಸುವಲ್ಲಿ ಕಾಣ್ಕೆ ನೀಡಿದ್ದು ಉಲ್ಲೇಖನೀಯ. ಭಟ್ಕಳದಿಂದ ೧೬ ಕಿ.ಮೀ ಅಂತರದಲ್ಲಿ, ರಾಷ್ಟ್ರೀಯ ಹೆದ್ದಾರಿಯಿಂದ ೨ ಕಿ.ಮೀ. ದೂರದಲ್ಲಿದೆ ಮುರುಡೇಶ್ವರ ದೇವಾಲಯ. ರಸ್ತೆ ಸಾರಿಗೆ ವ್ಯವಸ್ಥೆಯಲ್ಲದೇ ರೈಲು ನಿಲ್ದಾಣವೂ ಹತ್ತಿರದಲ್ಲೇ ಇದ್ದು ಪ್ರವಾಸಿಗರಿಗೆ ಅನುಕೂಲವಾಗಿದೆ. ಬನ್ನಿ ಮೃಡೇಶನ ಅನುಗ್ರಹದೊಂದಿಗೆ ಮುರುಡೇಶ್ವರದ ಸೌಂದರ್ಯವನ್ನು ಸವಿಯೋಣ.