ಹೊಸನಗರ: ಗೋವುಗಳು ಅನಾದಿಕಾಲದಿಂದಲೂ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಗೋವುಗಳು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂದರೆ ಹಿಂದಿನ ಕಾಲದಲ್ಲಿ ಯಾರ ಬಳಿ ಹೆಚ್ಚು ಗೋವುಗಳಿದೆ ಎಂಬ ಆಧಾರದ ಮೇಲೆ ಆತನ ಸಿರಿತನವನ್ನು ನಿರ್ಧರಿಸಲಾಗುತ್ತಿತ್ತು. ಅನ್ಯವಸ್ತುಗಳ ವಿನಿಮಯವೂ ಗೋವುಗಳ ಮೂಲಕವೇ ಆಗುತ್ತಿತ್ತು. ಉಡುಗೊರೆಯಾಗಿಯೂ ಗೋವುಗಳನ್ನೇ ಕೊಡಲಾಗುತ್ತಿತ್ತು.
ಮನುಷ್ಯನ ಜೀವನ ಸಂಪೂರ್ಣ ಗೋ ಆಧಾರಿತ ಎಂದರೆ ತಪ್ಪಾಗಲಾರದು. ಏಕೆಂದರೆ ತಾಯಿ ಎದೆಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ಅದಕ್ಕೆ ಪ್ರತಿಯಾಗಿ ತನ್ನ ಅಮೃತಸದೃಶ ಕ್ಷೀರವನ್ನು ಮನುಕುಲಕ್ಕೆ ಪೂರೈಸಿ ಮನುಷ್ಯನನ್ನು ಬಲಿಷ್ಠಗೊಳಿಸುವುದರಿಂದ ಪ್ರಾರಂಭಿಸಿ ನಮ್ಮ ಆರೋಗ್ಯ ವೃದ್ಧಿಸುವ ಹಾಗೂ ಕೃಷಿಯಲ್ಲಿ ಉತ್ಕೃಷ್ಟವಾದ ಬೆಳೆ ಬರಲು ಸಹಕಾರಿಯಾಗುವ ಗೋಮೂತ್ರ – ಗೋಮಯಾಧಾರಿತ ಪದಾರ್ಥಗಳು, ಕ್ರಿಮಿಕೀಟಗಳ ನಿಯಂತ್ರಣ – ಸರ್ವರೋಗಗಳ ಹರಣದ ಮೂಲಕ ಪರಿಸರ ಸಂರಕ್ಷಣೆ, ಕೊನೆಯಲ್ಲಿ ಮನುಷ್ಯನ ದೇಹಾಂತ್ಯಾನಂತರದ ಕ್ರಿಯೆಗಳಿಗೂ ಗೋವಿನ ಪದಾರ್ಥ ಬಳಕೆ. ಹೀಗೆ ಮನುಷ್ಯ ತನ್ನ ಜೀವನದುದ್ದಕ್ಕೂ, ಅಥವಾ ಒಂದಲ್ಲ ಒಂದು ಸಂದರ್ಭದಲ್ಲಿ ಗೋವುಗಳನ್ನು ಅವಲಂಬಿಸಿಯೇ ಇರುತ್ತಾನೆ. ಇಂತಿರುವ ಗೋವುಗಳ ಕೊಡುಗೆ ಅನುಪಮ, ಅನನ್ಯ.
ಗೋವಿನ ತ್ಯಾಜ್ಯವೇ ಮನುಷ್ಯರಿಗೆ ಪೂಜ್ಯವಾಗಿರಬೇಕಾದರೆ ಸಾಕ್ಷಾತ್ ಗೋವುಗಳು ಎಷ್ಟು ಪೂಜನೀಯ ಎಂಬುದನ್ನು ನಾವು ಅರಿತುಕೊಳ್ಳಬೇಕು. ಆದರೆ ಆಧುನಿಕತೆಗೆ ತನ್ನನ್ನು ತಾನು ಒಡ್ಡಿಕೊಂಡ ಮನುಷ್ಯ ಕ್ರಮೇಣ ಗೋವುಗಳನ್ನು ತನ್ನ ಜೀವನದಿಂದ ದೂರಮಾಡಲು ಪ್ರಾರಂಭಿಸಿದ. ಇದರ ಪರಿಣಾಮವೇ ಎಂಬಂತೆ, ಮನುಷ್ಯನೂ ಸಂಕಷ್ಟ ಅನುಭವಿಸುತ್ತಿದ್ದೂ, ಮುಖ್ಯವಾಗಿ ಗೋವಂಶದ ನಾಶ ಅತಿವೇಗದಲ್ಲಿ ಆಗುತ್ತಿದೆ. ನಶಿಸಿಹೋಗುತ್ತಿರುವ ಗೋಸಂತತಿಯನ್ನು ಉಳಿಸಲು ಗೋವುಗಳನ್ನು ಮತ್ತೊಮ್ಮೆ ನಾವು ನಮ್ಮ ಜೀವನದೊಂದಿಗೆ ಜೋಡಿಸಿಕೊಳ್ಳಬೇಕು. ಇದೇ ಹಿನ್ನೆಲೆಯಲ್ಲಿ ಜನ-ದನಗಳನ್ನು ಒಂದುಗೂಡಿಸುವ ಪಾರಂಪರಿಕ ಗೋತಳಿಗಳನ್ನು ಉಳಿಸಿ ಬೆಳೆಸಲು ಶ್ರೀಸಂಸ್ಥಾನದವರು ಅನವರತ ಶ್ರಮಿಸುತ್ತಿದ್ದು, ಈ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆಯ ಕಲ್ಪನೆಯಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ಸಮಾಜಕ್ಕೆ ಕಾಮದುಘಾ ಎಂಬ ಯೋಜನೆಯನ್ನು ಹುಟ್ಟುಹಾಕಿದರು.
ಮದುಘಾ ಅಡಿಯಲ್ಲಿ ಹತ್ತಕ್ಕೂ ಅಧಿಕ ಗೋಶಾಲೆಗಳನ್ನು ಶ್ರೀಮಠ ನಡೆಸಿಕೊಂಡು ಬರುತ್ತಿದ್ದು, ಅವುಗಳಲ್ಲಿ ಅತಿ ವಿಶಿಷ್ಟವಾದುದು ಮತ್ತು ಪ್ರಪಂಚಕ್ಕೇ ಮಾದರಿ ಎನ್ನಬಹುದಾದದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ಸಮೀಪದ ರಾಮಚಂದ್ರಾಪುರಮಠದ ‘ಮಹಾನಂದಿ ಗೋಲೋಕ.’ ಲಭ್ಯವಿರುವ ಎಲ್ಲ ದೇಸಿ ತಳಿಗಳ ಗೋವನ್ನೂ ಹೊಂದಿರುವ ಈ ಗೋಲೋಕದಲ್ಲಿ ಮಾತ್ರ ಎಲ್ಲ ತಳಿಯ ಗೋವುಗಳನ್ನು ಒಂದೇ ಸ್ಥಳದಲ್ಲಿ ಕಣ್ತುಂಬಿಕೊಳ್ಳಬಹುದು. ಅಷ್ಟೇ ಗೋಮೂತ್ರ – ಗೋಮಯಗಳಿಂದ ಉತ್ಪನ್ನಗಳನ್ನು ತಯಾರಿಸುವ ಘಟಕಗಳಿವೆ.
ಯಾವುದನ್ನೇ ಆದರೂ ರಕ್ಷಿಸಬೇಕು ಎಂದಾದರೆ ನಮಗೆ ಅದರ ಕುರಿತು ಗೌರವ ಮೂಡಬೇಕು, ನಾವು ಅದನ್ನು ಆರಾಧಿಸಬೇಕು. ಆರಾಧನೆ ಎಂದರೆ ಪೂಜೆ, ಆಚರಣೆ. ಗೋವುಗಳಿಗೆ ಗೌರವ ಭಾವದ ಅಭಿವ್ಯಕ್ತಿಯ ಸಮರ್ಪಣಾ ಪ್ರಕ್ರಿಯೆಗೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅವಕಾಶ ಮಾಡಿಕೊಡಲಾಗಿದೆ.
ಇದೇ ಮಹಾನಂದಿ ಗೋಲೋಕದ ಭವ್ಯ – ದಿವ್ಯ ಪರಿಸರದಲ್ಲಿ ದೀಪಾವಳಿಯ ಶುಭಾವಸರದಲ್ಲಿ 08-11-2018 ನೆಯ ಗುರುವಾರ ಸಮಸ್ತ ಗೋಭಕ್ತರ ಶ್ರೇಯಸ್ಸಿಗಾಗಿ ಗೋಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಷೋಡಶೋಪಚಾರ ಪೂಜಾ ಸೇವೆಯನ್ನು ಎಲ್ಲ ಗೋಪ್ರೇಮಿಗಳು ಸಮರ್ಪಿಸಲು ಅವಕಾಶ ಇದೆ. ಗೋಪೂಜೆಗೆ ಮಹತ್ತಾದ ಫಲಗಳಿವೆ. ನಾವು ಜೀವನದಲ್ಲಿ ತಿಳಿದೋ ತಿಳಿಯದೆಯೋ ಅನೇಕ ಪಾಪಕರ್ಮಗಳನ್ನು ಮಾಡಿರುತ್ತೇವೆ. ಪಾಪ ಪರಿಹಾರಕ್ಕೆ ಗೋಪೂಜೆ ಎಂಬುದು ಋಷಿಮುನಿ ಮಹರ್ಷಿಗಳು ಮನುಕುಲಕ್ಕೆ ಅನುಗ್ರಹಿಸಿದ ಉತ್ಕೃಷ್ಟ ಮಾರ್ಗ. ಹಾಗೆಯೇ ಸಮಸ್ತ ದೇವಾನುದೇವಾತೆಗಳ ಅನುಗ್ರಹಕ್ಕೆ ಪಾತ್ರವಾಗಿ ಪುಣ್ಯ ಸಂಪಾದಿಸಲೂ ಗೋಪೂಜೆಯೇ ಸುಲಭ ಮಾರ್ಗ ಎಂದು ಹೇಳಲಾಗಿದೆ. ವಿಧಿವತ್ತಾಗಿ ಗೋಪೂಜೆ ಮಾಡುವಾಗ ನಾವು ಗೋವಿನ ಸನಿಹ ಹೋಗುತ್ತೇವೆ, ಸ್ಪರ್ಶಿಸುತ್ತೇವೆ. ಗೋವುಗಳು ಬಿಟ್ಟ ಉಸಿರು ನಾವು ಉಸಿರಾಡುವ ಗಾಳಿಯೊಡನೆ ನಮ್ಮ ದೇಹ ಸೇರುತ್ತದೆ. ಗೋಮೂತ್ರ – ಗೋಮಯಗಳ ಪ್ರಭಾವದಿಂದ ಆ ಪ್ರದೇಶದ ಹಾಗೂ ಗೋಪೂಜೆ ಸಮರ್ಪಿಸುವವರನ್ನು ಶುದ್ಧಗೊಳಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳು ನಮ್ಮ ಅದೆಷ್ಟೋ ರೋಗಗಳನ್ನು ಕಡಿಮೆ ಮಾಡಿ ಆರೋಗ್ಯವನ್ನು ವೃದ್ಧಿಸುವತ್ತದೆ ಎಂಬುದನ್ನು ಕೇವಲ ಶಾಸ್ತ್ರಗಳು ಹೇಳುವುದಷ್ಟೇ ಅಲ್ಲ, ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಇದೇ ಸಮಯದಲ್ಲಿ ಗೋವುಗಳಿಗೆ ಗೋಗ್ರಾಸ ಸಮರ್ಪಿಸುವ ಭಾಗ್ಯವೂ ಲಭಿಸುತ್ತದೆ. ಇಷ್ಟೆಲ್ಲ ಸತ್ಫಲಗಳನ್ನು ಕರುಣಿಸುವ ಗೋಪೂಜೆ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ಸೇವೆಗಳನ್ನು ಸಮರ್ಪಿಸೋಣ.
ಹಾಂ, ನೆನಪಿಡಿ, ನಾವುಗಳು ದೀಪಾವಳಿಯ ಸಂದರ್ಭದಲ್ಲಿ ಮಹಾನಂದಿ ಗೋಲೋಕದಲ್ಲಿ ಗೋಪೂಜೆಯ ಸೇವೆಯನ್ನು ಸಮರ್ಪಿಸಿದರೆ, ಅದರಿಂದ ಸಂಗ್ರಹವಾಗುವ ಧನರಾಶಿಯನ್ನು ಗೋವುಗಳಿಗೆ ಮುಂಚಿತವಾಗಿ ಮೇವು ಖರೀದಿಸಲು ವಿನಿಯೋಗಿಸುತ್ತಾರೆ. ಎಂದರೆ ನಮಗೆ ಗೋಪೂಜೆ ಸಮರ್ಪಿಸಿದ ಪುಣ್ಯಫಲವೂ ಲಭಿಸುತ್ತದೆ, ಜೊತೆಜೊತೆಗೆ ಅಲ್ಲಿನ ಗೋವುಗಳಿಗೆ ಮೇವು ಪೂರೈಕೆಯಲ್ಲಿ ನಮ್ಮ ಸೇವೆ ಕೂಡ ಇರುತ್ತದೆ ಎಂಬುದು ನಮ್ಮೆಲ್ಲರ ಭಾಗ್ಯವಾಗಿದೆ. ಹಾಗೆಯೇ ಆ ಹುಲ್ಲನ್ನು ಗೋವುಗಳು ಸ್ವೀಕರಿಸುವಾಗ ಗೋಗ್ರಾಸ ಸಮರ್ಪಿಸದ ಫಲವೂ ಬರುತ್ತದೆ. ನಮ್ಮ ಒಂದು ಸೇವಾ ಸಮರ್ಪಣೆ ಗೋವುಗಳ ಬಾಳಲ್ಲಿ ಹೊಸಬೆಳಕನ್ನು ಉಂಟುಮಾಡುತ್ತದೆ ಎಂದಾದಲ್ಲಿ ನಾವುಗಳು ಆದಷ್ಟು ಬೇಗ ₹500 ಸೇವಾ ಕಾಣಿಕೆ ಸಮರ್ಪಿಸಿ ದೀಪಾವಳಿ ಗೋಪೂಜೆಗೆ ಹೆಸರು ನೊಂದಾಯಿಸೋಣ ಬನ್ನಿ. ಹೆಸರು ನೊಂದಾಯಿಸಿದವರು ಆ ದಿನ ಮಹಾನಂದಿ ಗೋಲೋಕದಲ್ಲಿ ಹಾಜರಿದ್ದು ಗೋಪೂಜೆಯಲ್ಲಿ ಪಾಲ್ಗೊಳಬೇಕು. ನಿಮ್ಮನ್ನ ಸವತ್ಸ ಗೋವಿನ ಎದುರಿಗೆ ಕೂರಿಸಿ, ಸಂಕಲ್ಪ ಸಹಿತವಾಗಿ ಕ್ರಮಬದ್ಧವಾಗಿ ಪೂಜೆ ನೆರವೇರಿಸಲಾಗುತ್ತದೆ. ಅಕಸ್ಮಾತ್ ನಿಮಗೆ ಆ ದಿನ ಮಹಾನಂದಿ ಗೋಲೋಕಕ್ಕೆ ಬರಲು ಆಗಲಿಲ್ಲವೆಂದಾದಲ್ಲಿ, ನಿಮ್ಮ ವಿವರಗಳನ್ನು ಕೊಟ್ಟಲ್ಲಿ, ನಿಮ್ಮ ಹೆಸರಿನಲ್ಲಿ ಸಂಕಲ್ಪ ನೆರವೇರಿಸಿ ಪ್ರಸಾದವನ್ನು ನಿಮ್ಮ ವಿಳಾಸಕ್ಕೆ ಕಳುಹಿಸಿಕೊಲಾಗುವುದು.
ಹೀಗೆ ನಮ್ಮ ಕೈಲಾದ ಸೇವೆ ಸಮರ್ಪಿಸುವ ಈ ಮೂಲಕ ಗೋಸಂರಕ್ಷಣಾ ಮಹಾಭಿಯಾನದಲ್ಲಿ ಪಾಲ್ಗೊಳ್ಳೋಣ.