ವರವನ್ನು ಬೇಡುವಾಗ, ಆ ವರದಿಂದ ಪ್ರಾಪ್ತವಾಗುವುದನ್ನು ಧರಿಸಲು, ನಿರ್ವಹಿಸಲು ನಾವು ಶಕ್ತರೇ ಎಂಬುದನ್ನು ಮೊದಲು ಆಲೋಚಿಸಬೇಕು. ನಮ್ಮ ಯೋಗ್ಯತೆಗೆ ಮೀರಿದ್ದನ್ನು ಕೇಳಬಾರದು. ಯೋಗ್ಯತೆಯನ್ನು ಮೀರಿದ ವರವೂ ಶಾಪವಾಗುತ್ತದೆ ಎಂದು ಶತಾವಧಾನಿ ರಾ. ಗಣೇಶ್ ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆದ “ಗಾಯತ್ರಿ ಮಹೋತ್ಸವ” ಕಾರ್ಯಕ್ರಮದಲ್ಲಿ, ‘ಗಾಯತ್ರಿ ತತ್ವ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಶತಾವಧಾನಿ ರಾ. ಗಣೇಶ್, ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರನ್ನು ಕಾಪಾಡುತ್ತಾಳೇ ಎಂಬ ಅರ್ಥದಲ್ಲಿ ಗಾಯತ್ರಿ ಎಂಬುದಾಗಿ ಹೇಳುತ್ತಾರೆ. ಬೇರೆಬೇರೆ ಮಂತ್ರಗಳಲ್ಲಿ ದೇವರಲ್ಲಿ ಬೇರೆಬೇರೆ ವರಗಳನ್ನು, ವಸ್ತುಗಳನ್ನು ಪ್ರಾರ್ಥಿಸುತ್ತೇವೆ. ಆದರೆ ಗಾಯತ್ರಿ ಮಂತ್ರದಲ್ಲಿ ಬುದ್ಧಿಯನ್ನು ಪ್ರಚೋಧಿಸು ಎಂಬುದಾಗಿ ಪ್ರಾರ್ಥಿಸುತ್ತೇವೆ. ಪ್ರಾರ್ಥನೆ ಮಾಡಬೇಕಾದದ್ದು ನಮ್ಮ ಕರ್ತವ್ಯ, ವರವನ್ನು ದಾಯಪಾಲಿಸುವುದು ಭಗವಂತನ ಇಚ್ಛೆ. ಇದು ನಮ್ರತೆಯನ್ನು ತೋರಿಸುತ್ತದೆ. ಇದು ಸಂಪೂರ್ಣ ಶರಣಾಗತಿಯನ್ನು ತೋರಿಸುತ್ತದೆ. ಇದು ಗಾಯತ್ರಿ ಮಂತ್ರದ ತತ್ವ ಎಂಬುದಾಗಿ ಸವಿವರವಾಗಿ ತಿಳಿಸಿದರು.
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ‘ಗಾಯತ್ರಿ ಮಹಿಮೆ’ ವಿಷಯದ ಕುರಿತು ಮಾತನಾಡಿ, ಗಾಯತ್ರಿ ಮಂತ್ರದ ಬಗ್ಗೆ ಐಐಟಿ ಸೇರಿದಂತೆ ಅನೇಕ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆಗಳು ನಡೆದಿವೆ. ಗಾಯತ್ರಿ ಪಠಣದಿಂದ ಸಾವಿರಾರು ತರಂಗಗಳು ನಮ್ಮ ದೇಹದಲ್ಲಿ ಹೊರಹೊಮ್ಮುತ್ತವೆ. ಇದು ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ನಾಡಿ ವಿಜ್ಞಾನ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಪ್ರಚಲಿತದಲ್ಲಿದೆ. ನಾಡಿಗಳು ಸರಿಯಿದ್ದಾಗ , ಶುದ್ಧವಾಗಿದ್ದಾಗ ಮನುಷ್ಯ ಆರೋಗ್ಯಯುಯ್ತನಾಗಿ ಇರುತ್ತಾನೆ. ನಮ್ಮ ದೇಹದಲ್ಲಿ 72 ನಾಡಿಗಳಿದ್ದು, ಗಾಯತ್ರಿ ಉಪಾಸನೆಯಿಂದ ಎಲ್ಲಾ ನಾಡಿಗಳು ಪರಿಶುದ್ಧವಾಗುತ್ತದೆ ಎಂದರು.
ಎಲ್ಲಾ ಬಲಗಳಿಗಿಂತ ಬ್ರಹ್ಮತೇಜಸ್ಸು ಬಲಯುತವಾದದ್ದಾಗಿದೆ. ಗಾಯತ್ರಿ ಉಪಾಸನೆಯಿಂದ ಬ್ರಹ್ಮತೇಜಸ್ಸು ಲಭ್ಯವಾಗುತ್ತದೆ. ಗಾಯತ್ರಿ ಮಹಿಮೆಯನ್ನು ಜನತೆಗೆ ತಿಳಿಸುವ , ಸಮಾಜದಲ್ಲಿ ಜಾಗ್ರತೆ ಮೂಡಿಸಲು ಹವ್ಯಕ ಮಹಾಸಭೆ ಉದ್ಯುಕ್ತವಾಗಿರುವುದು ಶ್ಲಾಘನೀಯ ಎಂದರು.
ಏನನ್ನಾದರೂ ಸಾಧಿಸಬೇಕು ಎಂದಾದರೆ, ಜೀವನದ ನೈಜ ಗುರಿಯನ್ನು ತಲುಪಬೇಕು ಎಂದಾದರೆ ಸಂಪತ್ತು, ಆಯಸ್ಸು, ಬಲ ಇತ್ಯಾದಿಗಳು ಬೇಕು ಎಂದುಕೊಳ್ಳುತ್ತೇವೆ. ಆದರೆ ಕಗ್ಗದ ಕವಿ ಡಿಬಿಜಿಯವರ ಪ್ರಕಾರ ಬುದ್ಧಿಬೇಕು. ಗಾಯತ್ರಿ ಮಂತ್ರದ ಉಪಾಸನೆಯಿಂದ ಆ ಬುದ್ಧಿ ಪ್ರಚೋದನೆಯಾಗತ್ತದೆ. ಕಾಲಕ್ಕೆ ಅನುಗುಣವಾಗಿ ಮಾಡಿದ ಕಾರ್ಯಗಳು ಮಾತ್ರ ಫಲಕೊಡುತ್ತದೆ. ಬಿತ್ತುವ ಕಾಲದಲ್ಲಿ ಬಿತ್ತಿದ ಬೀಜ ಮಾತ್ರ ಸರಿಯಾದ ಫಲವನ್ನು ಕೊಡುತ್ತದೆ. ಹಾಗೆಯೇ ಗಾಯತ್ರಿ ಉಪದೇಶವನ್ನು ಸೂಕ್ತ ಸಮಯದಲ್ಲಿ ಯೋಗ್ಯ ವ್ಯಕ್ತಿಯಿಂದ ಯೋಗ್ಯ ವ್ಯಕ್ತಿಗೆ ನೀಡಲ್ಪಟ್ಟಾಗ ಮಾತ್ರ ಅದು ಸರಿಯಾದ ಫಲವನ್ನು ನೀಡುತ್ತದೆ ಎಂದು ವಿದ್ವಾನ್ ಜಗದೀಶ್ ಶರ್ಮಾ ಹೇಳಿದರು.
ವಿದ್ವಾನ್ ಶಿವರಾಮ ಅಗ್ನಿಹೋತ್ರಿಗಳು, ಅಗ್ನಿಹೋತ್ರದ ವೈಶಿಷ್ಯ ಹಾಗೂ ಅದರ ಹಿಂದಿರುವ ತತ್ವಗಳ ಕುರಿತು ಮಾಹಿತಿ ನೀಡಿದರೆ, ಡಾ|| ರಂಗರಾಜ ಅಯ್ಯಂಗಾರ್ ಮುದ್ರೆಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡು, ‘ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನಲೆ’ ಕುರಿತಾಗಿ ತಿಳಿಸಿದರು.
ವಿದುಷಿ ಲತಾಲಕ್ಷ್ಮೀಶ್ ನಿರ್ದೇಶನದಲ್ಲಿ ಸಂಯೋಗ ಕಲಾಶಾಲೆಯ ಪ್ರಸ್ತುತಿಯ ‘ಗಾಯತ್ರಿ ವಂದನಮ್ – ನೃತ್ಯ ನಮನ’ ಹಾಗೂ ಶ್ರೀಮತಿ ಅರುಂಧತಿ ವಸಿಷ್ಠ ಹಾಗೂ ಶ್ರೀ ಮನೋಜ್ ವಸಿಷ್ಠರಿಂದ ‘ಗಾಯತ್ರಿ ನಾದನಮನ’, ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ “ಮಹಾಬ್ರಾಹ್ಮಣ – ಕಾವ್ಯ ವಾಚನ” ಹಾಗೂ ಉದಯೋನ್ಮುಖ ಗಾಯಕ ಶ್ರೀ ಗುರುಕಿರಣ್ ಹೆಗಡೆ ಅವರಿಂದ ಗಾಯತ್ರಿ ನಾದನಮನ ಕಾರ್ಯಕ್ರಮಗಳ ಮೂಲಕ ಗಾಯತ್ರಿಯ ಆರಾಧನೆ ನಡೆಯಿತು.
ಸಂಧ್ಯಾವಂದನೆ ಯಾವ ಕಾಲದಲ್ಲಿ ಹಾಗೂ ಹೇಗೆ ಮಾಡಬೇಕು ಎಂದು ಡಾ. ರಾಮಕೃಷ್ಣ ಭಟ್ ಕೂಟೇಲು ತಿಳಿಸಿದರು. ಹಿತ್ಲಌ ನಾಗೇಂದ್ರ ಭಟ್ ಸಂಧ್ಯಾವಂದನೆಯ ಮಹತ್ವದ ಕುರಿತು ತಿಳಿಸಿದರು. ಪಾದೆಕಲ್ಲು ವಿಷ್ಣುಭಟ್ ಬ್ರಹ್ಮಯಜ್ಞದ ಕುರಿತಾಗಿ ಬೆಳಕುಚೆಲ್ಲಿದರು.
ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ನಮ್ಮ ಆಚಾರ ವಿಚಾರಗಳನ್ನು ಉಳಿಸಿಬೆಳೆಸುವಲ್ಲಿ ಹವ್ಯಕರ ಪಾತ್ರ ಮಹತ್ವದ್ದು, ಇಂದಿನ ಕಾಲಗಟ್ಟದಲ್ಲಿ ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಹೋಗುವುದೇ ಕಷ್ಟವಾಗಿದೆ. ನಮ್ಮ ವೃತ್ತಿ ಪ್ರವೃತ್ತಿಗಳ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುಕೊಂಡು ಹೋಗಬೇಕು. ಧಾರ್ಮಿಕ ಆಚರಣೆಗಳನ್ನು ನಾವು ಅನುಷ್ಟಾನದಲ್ಲಿ ಇಟ್ಟುಕೊಳ್ಳುವ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಅವುಗಳನ್ನು ಮುಂದುವರಿಯುವಂತೆ ಮಾಡಬೇಕು. ಈ ದಿಶೆಯಲ್ಲಿ ಹವ್ಯಕ ಮಹಾಸಭೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಗಾಯತ್ರಿ ದೇವಿಯ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರು, ಆರ್ ಎಂ ಹೆಗಡೆ ಬಾಳೆಸರ, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸಂಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ಪ್ರಶಾಂತ ಭಟ್ ಯಲ್ಲಾಪುರ ಹಾಗೂ ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಉಪಸ್ಥಿತರಿದ್ದರು.