” ಶ್ರೀಮಠದ ಸೇವೆಯಲ್ಲಿ ಮನೋ ತೃಪ್ತಿ ” : ಅನಿತಾ ಪ್ರಮೋದ ಪಂಡಿತ

ಮಾತೃತ್ವಮ್

 

ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಅನಿತಾ ಪ್ರಮೋದ ಪಂಡಿತ ಅವರು ಕೆಲವು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದುಕೊಂಡು ಸದಾ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಶ್ರೀಗುರು ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಂಡವರು.

ಹಿತ್ಲಳ್ಳಿಯ ನಾರಾಯಣ ಭಟ್ ಹಾಗೂ ಲಲಿತಾ ಅವರ ಪುತ್ರಿಯಾದ ಅನಿತಾ ಶಿರಸಿಯ ಸರಕಾರಿ ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಒಂದು ಬಾರಿ ಗೋಸ್ವರ್ಗಕ್ಕೆ ಹೋದಾಗ ಅಲ್ಲಿ ಮುಕ್ತವಾಗಿ ವಿಹರಿಸುವ ಹಸುಗಳನ್ನು ಕಂಡಾಗ ಗೋಮಾತೆಗಾಗಿ ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಬೇಕೆಂಬ ಅಭಿಲಾಷೆ ಇವರ ಮನದಲ್ಲಿ ಮೂಡಿ ಬಂತು.

” ಬಾಲ್ಯದಲ್ಲಿ ಹಸುಗಳ ಒಡನಾಟದಲ್ಲೇ ಇದ್ದವಳು ನಾನು. ಹಾಗಾಗಿಯೇ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಸಹಜವಾಗಿಯೇ ಮನಸ್ಸು ಗೋಮಾತೆಯ ಒಳಿತನ್ನು ಬಯಸುತ್ತಿತ್ತು. ನಮ್ಮ ಗುರುಗಳ ಅದ್ಭುತ ಕಲ್ಪನೆಯಾದ ಗೋಸ್ವರ್ಗಕ್ಕೆ ಆಗಾಗ ಭೇಟಿ ನೀಡುತ್ತಿರುತ್ತೇವೆ. ಬೆಂಗಳೂರಿನ ಗಿರಿನಗರದ ರಾಮಾಶ್ರಮಕ್ಕೆ ಹೋದಾಗಲೂ ಅಲ್ಲಿರುವ ಹಸುಗಳನ್ನು ನೋಡುವುದೇ ಮನಸ್ಸಿಗೊಂದು ಹಿತವಾದ ಅನುಭವ ” ಎನ್ನುವ ಅನಿತಾ ಪ್ರಮೋದ ಪಂಡಿತ ಅವರು ಮಾತೃತ್ವಮ್ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಒಂದು ಹಸುವಿನ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ತಾವೇ ಹೊತ್ತುಕೊಂಡವರು.

” ಉದ್ಯೋಗ ನಿಮಿತ್ತ ನಗರದ ವಾಸ ಅನಿವಾರ್ಯವಾಗಿರುವ ನಮ್ಮಂಥವರಿಗೆ ಮನೆಯಲ್ಲಿ ಹಸು ಸಾಕಲು ಸಾಧ್ಯವಿಲ್ಲ, ಅದಕ್ಕಾಗಿ ಒಂದು ಹಸುವಿನ ನಿರ್ವಹಣೆಯನ್ನು ಸ್ವಯಂ ವಹಿಸಿದೆ ” ಎನ್ನುವ ಅನಿತಾ ಅವರ ಮನೆಯವರೆಲ್ಲರೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು. ‌ಪುತ್ರ ಅಕ್ಷರ ಪಂಡಿತ್ , ಮಗಳು ಇಳಾ ರಿಗೂ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಬಗ್ಗೆ ಇವರಿಗೆ ಹರ್ಷವಿದೆ.

“೨೦೦೯ ರಲ್ಲಿ ನಮ್ಮ ಮನೆಯಲ್ಲಿ ಶ್ರೀಗುರುಗಳ ಭಿಕ್ಷಾಸೇವೆ ನಡೆಸುವ ಸುಯೋಗ ನಮಗೆ ಲಭಿಸಿತು. ಅಂದಿನಿಂದ ನಿರಂತರವಾಗಿ ಶ್ರೀಮಠದ ಸಂಪರ್ಕದಲ್ಲಿದ್ದೇವೆ. ಈ ಸೇವೆಯಲ್ಲಿ ದೊರಕುವ ಮಾನಸಿಕ ನೆಮ್ಮದಿ ಅಪೂರ್ವವಾದುದು. ಇನ್ನಷ್ಟು ಕಾಲ ಶ್ರೀಸೇವೆಯಲ್ಲಿ ನಿರತಳಾಗಬೇಕೆಂಬುದೇ ನನ್ನ ಬಯಕೆ . ನನ್ನ ಎಲ್ಲಾ ಕಾರ್ಯಗಳಿಗೂ ಪತಿ ಪ್ರಮೋದ ಪಂಡಿತ ಅವರ ಸಂಪೂರ್ಣ ಸಹಕಾರವಿದೆ ” ಎನ್ನುವ ಅನಿತಾ ಅವರು ತಮ್ಮ ಶ್ರದ್ಧೆಯ ಸೇವೆಯ ಮೂಲಕ ಇತರ ಮಾಸದ ಮಾತೆಯರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *