ಶ್ರೀಮಠದ ಸೇವೆಗಳಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಂಡು ಪಾದರಸದಂತಹ ತಮ್ಮ ಚುರುಕುತನದ ಕೆಲಸಗಳಿಂದ ಹಲವಾರು ಜನರ ಮೆಚ್ಚುಗೆ ಗಳಿಸಿರುವ ಮಂಗಳಗೌರಿ ಚಿದಾನಂದ ಭಟ್ ಸಾಗರ ಇವರನ್ನು ಗುರುಬಂಧುಗಳೆಲ್ಲ ಅಕ್ಕರೆಯಿಂದ ಕರೆಯುವ ಹೆಸರು ಗೌರಕ್ಕ ಎಂದು.
” ಮಂಗಳಗೌರಿ ಅಂದರೆ ಯಾರಿಗೂ ಗೊತ್ತಿರಲ್ಲ, ಗೌರಕ್ಕ ಅಂದರೆ ಗೊತ್ತಾಗಬಹುದಷ್ಟೆ” ಎಂದು ಅಕ್ಕರೆಯಿಂದ ನುಡಿಯುವ ಗೌರಕ್ಕನಿಗೆ ಬಾಲ್ಯದಿಂದಲೇ ಶ್ರೀಮಠದ ನಿಕಟ ಸಂಪರ್ಕವಿದೆ. ಇವರ ತಂದೆ ಮಹಾಬಲೇಶ್ವರ ಭಟ್ಟರು ಹಿರಿಯ ಗುರುಗಳ ಕಾಲದಲ್ಲಿ ಶ್ರೀಮಠದ ಆಚಾರವಿಚಾರ ಭಟ್ಟರಾಗಿದ್ದುದರಿಂದ ಗೌರಕ್ಕನಿಗೆ ಶ್ರೀಮಠ,ಗುರುಪೀಠಗಳ ಬಗ್ಗೆ ಅತೀವ ಭಕ್ತಿ, ಶ್ರದ್ಧೆ ಎಳವೆಯಿಂದಲೇ ಮೂಡಿ ಬಂತು.
“ಚಿಕ್ಕವಳಿದ್ದಾಗ ತವರುಮನೆಯ ಹಟ್ಟಿ ತುಂಬ ಹಸುಗಳಿದ್ದವು. ಅಂದು ಅವುಗಳಿಗೆ ಅಲ್ಲಿ ಮುಕ್ತವಾಗಿ ಓಡಾಡುವ ವಾತಾವರಣವಿತ್ತು.ನಾವೆಲ್ಲ ಅವುಗಳ ಒಡನಾಟದಲ್ಲೇ ಇದ್ದವರು” ಎನ್ನುತ್ತಾ ಒಡಹುಟ್ಟಿದವರ ಜೊತೆಗೆ ಸೇರಿ ಗೋಸೇವೆ ಮಾಡಿದ ನೆನಪುಗಳನ್ನು ಬಿಚ್ಚಿಡುವ ಅವರಿಗೆ ಇಂದಿಗೂ ಗೋಮಾತೆ ಎಂದರೆ ವಿಶೇಷ ಮಮಕಾರ. ಪ್ರತಿನಿತ್ಯವೂ ಗೋಗ್ರಾಸ ನೀಡದೆ ದಿನದ ಆರಂಭವೇ ಇಲ್ಲ ಎನ್ನುವಷ್ಟು ಗೋಮಾತೆ ನಿಕಟವಾಗಿದ್ದಾಳೆ.
ಸಂಪ ಮೂಲದ ಚಿದಾನಂದ ಭಟ್ ಅವರನ್ನು ವಿವಾಹವಾಗಿರುವ ಗೌರಕ್ಕ ಪ್ರಸ್ತುತ ಸಾಗರದ ನಿವಾಸಿಯಾಗಿದ್ದು ಮಾತೃತ್ವಮ್ ಸಾಗರ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ನಗರ ಜೀವನದಲ್ಲಿ ಹಸು ಸಾಕಣೆ ಕಷ್ಟವಾದುದರಿಂದ ಮನೆಯಲ್ಲಿ ಗೋಸಾಕಣೆ ಇಲ್ಲದಿದ್ದರೂ ಪ್ರತೀ ದಿನ ಮುಂಜಾನೆ ಗೌರಕ್ಕ ನೀಡುವ ಗೋಗ್ರಾಸ ಸ್ವೀಕರಿಸಲು ಅವರ ಮನೆ ಮುಂದೆ ಗೋಮಾತೆ ಬರುತ್ತಾಳೆ ಎಂಬುದು ಅವರಿಗೆ ಸಂತಸದ ವಿಚಾರ.
ಚಿಕ್ಕಂದಿನಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವುದರಿಂದ ಮಠವು ಇನ್ನೊಂದು ತವರುಮನೆಯಂತಾಗಿದೆ ಎನ್ನುವ ಗೌರಕ್ಕ ಶ್ರೀಮಠಕ್ಕೆ ಬಂದಾಗ ತಮ್ಮ ಮನೆಯ ಕೆಲಸದಷ್ಟು ಶ್ರದ್ಧಾ ಭಾವದಿಂದ ಎಲ್ಲಾ ಕೆಲಸಗಳಲ್ಲೂ ಭಾಗಿಯಾಗುತ್ತಾರೆ.
‘ಹೂ ಕಟ್ಟುವುದಾಗಲಿ, ತರಕಾರಿ ಹೆಚ್ಚುವುದಾಗಲಿ ,ವೇದಿಕೆಯ ಕಾರ್ಯಕ್ರಮಗಳೇ ಇರಲಿ ಅಥವಾ ಇತರ ಯಾವುದೇ ಕೆಲಸವಾದರೂ ಹೆಸರಿನ ಹಣೆಪಟ್ಟಿ ಬಯಸದೆ ಕೇವಲ ಕಾರ್ಯಕರ್ತೆಯಾಗಿ ಯಾವ ಕೆಲಸ ಎಲ್ಲಿ ಹೇಗೆ ಆಗಬೇಕು ಎಂಬುದನ್ನು ತಿಳಿದು ಮುಕ್ತವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ನಮ್ಮ ಗೌರಕ್ಕ’ ಎಂಬುದು ಇವರ ಜೊತೆಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಗೊಂಡವರ ಮೆಚ್ಚುಗೆಯ ನುಡಿಗಳು.
ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಇವರು ಶ್ರೀಮಠದ ಎಲ್ಲಾ ಸೇವಾ ಯೋಜನೆಗಳಲ್ಲೂ ಕೈಜೋಡಿಸಿದವರು. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾದವರು.
“ಶ್ರೀ ಸಂಸ್ಥಾನದವರ ಗೋಸೇವಾ ಕಾರ್ಯಗಳೆಲ್ಲವೂ ಅತ್ಯಂತ ಖುಷಿ ತಂದಿದೆ. ದೇಶೀ ಹಸುಗಳ ಉಳಿವಿಗಾಗಿ ಸಮಾಜ ಒಗ್ಗಟ್ಟಾಗಿ ಕೈ ಜೋಡಿಸಲೇ ಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ” ಎನ್ನುವ ಗೌರಕ್ಕ ಮಾಸದ ಮಾತೆಯಾಗಿ ಮಾತೃತ್ವಮ್ ಮೂಲಕ ಒಂದು ವರ್ಷದ ಗುರಿ ತಲುಪಿದ್ದಾರೆ.
“ಸಾವಿರದ ಸುರಭಿ ಸಂಗ್ರಹದ ಮಾದರಿಯಲ್ಲಿಯೇ ಮಾಸದ ಮಾತೆಯಾಗಿಯೂ ಕಾರ್ಯ ನಿರ್ವಹಿಸಿದೆ. ದೇಶೀ ಹಸುಗಳ ಸಂರಕ್ಷಣೆಯ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ. ಮಕ್ಕಳು, ಅಣ್ಣನ ಮಕ್ಕಳು, ಹಾಗೇ ಇತರ ಬಂಧುಗಳು ಸಹಕಾರ ನೀಡಿದರು.ಎಲ್ಲಿಯೂ ಕಹಿ ಅನುಭವಗಳಾಗಿಲ್ಲ” ಎನ್ನುತ್ತಾರೆ ಗೌರಕ್ಕ.
ಗೌರಕ್ಕನ ಗೋಸೇವೆ, ಶ್ರೀಮಠದ ಸೇವೆಗಳಿಗೆ ಮನೆಯವರೆಲ್ಲರ ಸಹಕಾರ ಪ್ರೋತ್ಸಾಹಗಳು ಸದಾ ಇವೆ. ಹಿರಿಯ ಪುತ್ರ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಂತೂ ಶ್ರೀಮಠದ ಸೇವೆಯಲ್ಲಿ ಸದಾ ನಿರತರಾದವರು. ಇವರ ಇನ್ನಿಬ್ಬರು ಪುತ್ರರಾದ ವಿಘ್ನೇಶ್ ಮತ್ತು ಕೃಪೇಶ್ ಅವರು ಸಹಾ ಗೌರಕ್ಕನ ಸೇವೆಗೆ ಸದಾ ಸಹಕಾರ ನೀಡುವವರು.
“ನನ್ನ ಎಲ್ಲಾ ಕಾರ್ಯಗಳಿಗೂ ಶ್ರೀಗುರುಗಳೇ ಪ್ರೇರಣೆ. ಗೋವುಗಳ ಮೇಲಿನ ಪ್ರೀತಿ, ಅವುಗಳ ರಕ್ಷಣೆಗಾಗಿ ಶ್ರೀಗಳು ಕೈಗೊಂಡಿರುವ ಕಾರ್ಯಗಳೆಲ್ಲ ಸಮಾಜದ ಮೆಚ್ಚುಗೆ ಗಳಿಸಿದೆ. ಇನ್ನು ಮುಂದೆಯೂ ಗುರುಸೇವೆ,ಗೋಸೇವೆಗಳಲ್ಲಿ ನಿರತಳಾಗಿ ,ಎಲ್ಲರೊಡನೆ ಬೆರೆತು ಬಾಳಬೇಕೆಂಬ ಅಭಿಲಾಷೆ ಮಾತ್ರ ನನ್ನದು” ಎಂಬ ಗೌರಕ್ಕನ ಮಾತುಗಳು ,ಅವರ ನಡೆನುಡಿಗಳು ಎಲ್ಲಾ ಮಾತೆಯರಿಗೂ ಮಾದರಿಯಾಗಲಿ.