” ದೇಶೀ ಹಸುಗಳನ್ನು ಸಾಕಲು ಪ್ರೇರಣೆ ಶ್ರೀಗುರುಗಳ ಆಶೀರ್ವಚನ ” : ರೂಪಾ ವೆಂಕಟೇಶ್ ಮುಳ್ಳುಂಜ

ಮಾತೃತ್ವಮ್

 

” ಬದುಕಿನಲ್ಲಿ ಮೊದಲ ಆದ್ಯತೆ ಶ್ರೀಮಠದ ಸೇವೆಗೆ, ಇದಕ್ಕೆ ಕಾರಣ,ಪ್ರೇರಣ ನನ್ನ ತವರುಮನೆಯವರು. ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಶ್ರೀಮಠದ ಸಂಪರ್ಕದಲ್ಲಿ ಇದ್ದರು. ಹಿರಿಯ ಗುರುಗಳು ಈ ಊರಿಗೆ ಬಂದರೆ ನನ್ನ ತವರುಮನೆಯಲ್ಲಿ ಮೊಕ್ಕಾಂ ಆಗಿತ್ತು. ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರು ಪೀಠವೇರಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಕಲ್ಲಡ್ಕ ವಲಯದ ರೂಪಾ ವೆಂಕಟೇಶ್ವರ ಭಟ್ ಮುಳ್ಳುಂಜ.

ಪಡೀಲು ಮಹಾಬಲೇಶ್ವರ ಭಟ್ ಹಾಗೂ ಸರಸ್ವತಿ ಭಟ್ ಅವರ ಪುತ್ರಿಯಾದ ರೂಪಾ ಮುಳ್ಳುಂಜದ ವೆಂಕಟೇಶ್ವರ ಭಟ್ಟರ ಪತ್ನಿ.

ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆ ಹಾಗೂ ಮಲ್ಲಿಕಾ ಕಲ್ಲಡ್ಕ ಅವರ ಪ್ರೋತ್ಸಾಹದಿಂದ ಮಾಸದ ಮಾತೆಯಾಗಿ ಗೋಸೇವೆಯಲ್ಲಿ ತೊಡಗಿಸಿಕೊಂಡ ರೂಪಾ ತಮ್ಮ ಮನೆಯಲ್ಲೂ ದೇಶೀಯ ಹಸುಗಳನ್ನು ಸಾಕುತ್ತಿದ್ದಾರೆ.

” ಯಾವುದೇ ಜವಾಬ್ದಾರಿಯನ್ನು ವಹಿಸದಿದ್ದರೂ ಶ್ರೀಮಠದ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತೆಯಾಗಿ ಭಾಗವಹಿಸಿದ್ದೇನೆ. ಪತಿಯ ಸಂಪೂರ್ಣ ಸಹಕಾರವಿದ್ದ ಕಾರಣ ಮನೆಯ ಜವಾಬ್ದಾರಿ ನಿರ್ವಹಣೆಯ ಜೊತೆಗೆ ಮಾಸದ ಮಾತೆಯಾಗಿಯೂ ಗುರಿ ತಲುಪಲು ಸಾಧ್ಯವಾಯಿತು. ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿಸಿದಾಗ ಎಲ್ಲರೂ ಈ ಕಾರ್ಯಕ್ಕೆ ಖುಷಿಯಿಂದ ಸಹಕರಿಸಿದರು. ಇತರ ಸಮಾಜದವರು ಸಹಾ ಶ್ರೀಗುರುಗಳ ಈ ಕಾರ್ಯ ಶ್ಲಾಘನೀಯ ಎಂದು ಗೋಮಾತೆಯ ಸೇವೆಗೆ ಕೈಜೋಡಿಸಿದರು ” ಎನ್ನುವ ರೂಪಾ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಶ್ರೀ ಗುರುಗಳ ಮಂತ್ರಾಕ್ಷತೆಯ ಮಹಿಮೆಯನ್ನು ಸ್ವಯಂ ಅನುಭವದಿಂದಲೇ ಅರಿತಿರುವ ಇವರು ತಮ್ಮ ಮನೆಯಲ್ಲಿ ನಡೆದ ಒಂದು ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ

” ನಮ್ಮ ಮನೆಯ ಒಂದು ಹಸುವಿಗೆ ತೀವ್ರ ಅನಾರೋಗ್ಯವುಂಟಾಗಿತ್ತು. ಹೊಟ್ಟೆ ಉಬ್ಬರಿಸಿದಂತಾಗಿ ನರಳಾಡುವ ಅದಕ್ಕೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರೂ ಕೈ ಚೆಲ್ಲಿದ ಮೇಲೆ ಶ್ರೀಗುರುಗಳ ಸ್ಮರಣೆ ಮಾಡುತ್ತಾ ಮಂತ್ರಾಕ್ಷತೆಯನ್ನು ತಂದು ಶ್ರೀರಾಮನಾಮ ಜಪಿಸುತ್ತಾ ಹಸುವಿನ ಮೇಲೆ ಹಾಕಿದೆವು. ಅಂದು ಹಸುವಿನ ಸಂಕಷ್ಟ ಪರಿಹರಿಸಲು ನಾವು ಮೊರೆಹೊಕ್ಕದ್ದು ಶ್ರೀಚರಣಗಳನ್ನು..ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಮಂತ್ರಾಕ್ಷತೆ ಹಾಕಿದ ಕೆಲವೇ ಕ್ಷಣಗಳಲ್ಲಿ ಹಸು ಸ್ವಯಂ ಎದ್ದು ನಿಂತಿತು. ಇದು ಮಂತ್ರಾಕ್ಷತೆಯ ಮಹಿಮೆಯಲ್ಲದೆ ಇನ್ನೇನು ..?” ಎಂದು ಶ್ರದ್ಧಾಭಕ್ತಿಯಿಂದ ನುಡಿಯುವ ಅವರು ಹಸುವೊಂದು ಹಾಲು ಹಿಂಡಲು ಬಿಡದಿದ್ದಾಗಲೂ ಮಂತ್ರಾಕ್ಷತೆಯ ಮೂಲಕವೇ ಆ ಸಮಸ್ಯೆ ಬಗೆಹರಿದಿದೆ ಎನ್ನುತ್ತಾರೆ.

ಗೋಸ್ವರ್ಗದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಕ್ಷಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಪಡೆದ ರೂಪಾ ಅವರು ಪ್ರತಿನಿತ್ಯವೂ ಶ್ರೀಕರಾರ್ಚಿತ ಪೂಜೆಯನ್ನು ಶ್ರದ್ಧೆಯಿಂದ ನೋಡುತ್ತಾರೆ. ಸ್ತೋತ್ರ ಪಠಣ,ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ರೂಪಾ ಅವರಿಗೆ ಕೊನೆಯ ಉಸಿರಿನ ತನಕವೂ ಬದುಕಿಗೆ ನೆಮ್ಮದಿ, ಶಾಂತಿ ದೊರಕುವ ಗೋಸೇವೆ, ‌ಶ್ರೀಗುರುಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಇಚ್ಛೆಯಿದೆ.

Author Details


Srimukha

Leave a Reply

Your email address will not be published. Required fields are marked *