ಬದುಕಿನ ಸತ್ಯಪಥದ ದರ್ಶನ ಶ್ರೀಗುರು ಸೇವೆಯಿಂದ : ಸತ್ಯಶೋಭಾ ಕೈಲಾರು

ಮಾತೃತ್ವಮ್

” ಕತ್ತಲು ತುಂಬಿದ ಕೋಣೆಯನ್ನು ಬೆಳಗಲು ಹಣತೆ ಹೇಗೆ ಮುಖ್ಯವೋ, ಮಾನವನ ಜೀವನದಲ್ಲಿ ತುಂಬಿರುವ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕಿನ ಪಥದತ್ತ ಸಾಗಲು ಶ್ರೀಗುರುಗಳ ಕಾರುಣ್ಯ ಅತೀ ಅಗತ್ಯ , ಭ್ರಮೆಯ ಬದುಕಿನ ಪೊರೆ ಸರಿದು ಸತ್ಯಪಥದ ಹಾದಿ ತೋರುವ ಶ್ರೀಗುರುಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಶಾಂತಿ ಅವರ್ಣನೀಯ ” ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಕೈಲಾರು ಸತ್ಯನಾರಾಯಣ ಭಟ್ಟರ ಪತ್ನಿ ಸತ್ಯಶೋಭಾ ಅವರ ಮಾತುಗಳು ಇವು.

ಸೀಮಾ ಗುರಿಕ್ಕಾರರಾಗಿದ್ದ ಮೊಗ್ರ ಎನ್. ಗೋಪಾಲಕೃಷ್ಣಯ್ಯ ಹಾಗೂ ಶೇಷಮ್ಮ ದಂಪತಿಗಳ ಪುತ್ರಿಯಾದ ಸತ್ಯಶೋಭಾ ಅವರಿಗೆ ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿತು.

ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಸಂಪೂರ್ಣವಾಗಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಇವರು ಮುಂದೆ ಶ್ರೀಮಠದ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡವರು. ಉಪ್ಪಿನಂಗಡಿಯ ಮಾತೃಪ್ರಧಾನೆಯಾಗಿರುವ ಪ್ರೇಮಲತಾರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಸತ್ಯಶೋಭಾ ಅವರು ಲಕ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಶ್ರೀಗುರುಗಳ ಅನುಗ್ರಹದಿಂದ ಮಾತೃತ್ವಮ್ ಯೋಜನೆಯ ಗುರಿ ತಲುಪಿದೆ, ಬಹಳಷ್ಟು ಮಂದಿ ಗೋಪ್ರೇಮಿಗಳು ಸಹಕಾರ ನೀಡಿದ್ದಾರೆ. ಸಮಾಜದಲ್ಲಿ ಶ್ರೀಮಠದ ಯೋಜನೆಯ ಬಗ್ಗೆ ಉತ್ತಮ ಸ್ಪಂದನೆಯಿದೆ‌ ” ಎನ್ನುವ ಇವರು ಅಭಯಾಕ್ಷರ ಅಭಿಯಾನ, ಗೋಮಂಗಲಯಾತ್ರೆಗಳಲ್ಲಿ ಪಾಲ್ಗೊಂಡಿದ್ದರು.

” ಬದುಕಿನ ಕ್ಲಿಷ್ಟಕರ ಸನ್ನಿವೇಶದಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀಗುರುಗಳ ಅನುಗ್ರಹ. ಇಂದು ನಮ್ಮ ಉದ್ಯಮ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ರೀಗುರು ಕೃಪೆಯಿಂದ ಎಂದು ನಂಬುವವರು ನಾವು, ಮಕ್ಕಳಿಬ್ಬರಿಗೂ ಅವರ ಐಚ್ಛಿಕ ವಿಷಯದಲ್ಲೇ ವಿದ್ಯಾಭ್ಯಾಸ ಮುಂದುವರಿಸುವಂತಾಗಿದ್ದು ಸಹಾ ಶ್ರೀಗುರುದೇವರ ಆಶೀರ್ವಾದದಿಂದ ,ಶ್ರೀಮಠದ ಸೇವೆಯಲ್ಲಿ ಸದಾ ನಿರತಳಾಗಿರಬೇಕೆಂಬುದೇ ಅಂತರಂಗದ ಅಭಿಲಾಷೆ ” ಎನ್ನುವ ಸತ್ಯಶೋಭಾ ಅವರ ಶ್ರೀಮಠದ ಸೇವೆ, ಗೋಸೇವೆಗೆ ಮನೆಯವರ ಸಂಪೂರ್ಣ ಪ್ರೋತ್ಸಾಹ ದೊರಕುತ್ತಿದೆ.

Leave a Reply

Your email address will not be published. Required fields are marked *