ಗೋಮಾತೆಯ ಸೇವೆಗೆ ಸರಳ ಹಾದಿ ; ಮಾತೃತ್ವಮ್ :ಸುಜಾತ ಮೈಸೂರು

ಮಾತೃತ್ವಮ್

 

” ಶ್ರೀಗುರುಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಸಂತಸ ಬಣ್ಣನೆಗೆ ಸಿಗುವಂಥದ್ದಲ್ಲ. ಶ್ರೀಗುರು ಕೃಪೆಯೂ ಹಾಗೆಯೇ, ಬದುಕಿನಲ್ಲಿ ಅನೇಕ ಸಮಸ್ಯೆಗಳು ತಲೆದೋರಿದಾಗ ಸುಜ್ಞಾನವೆಂಬ ಬೆಳಕನ್ನು ನೀಡಿ ಆ ತೊಂದರೆಗಳನ್ನು ನಿವಾರಿಸುವುದು ಶ್ರೀಗುರುಗಳ ಅನುಗ್ರಹ. ಅದನ್ನು ಮಾತಿನ ಮೂಲಕವಾಗಲಿ, ಅಕ್ಷರಗಳ ಮೂಲಕವಾಗಲಿ ವಿವರಿಸಲು ಸಾಧ್ಯವಿಲ್ಲ. ಶ್ರೀಗುರುಗಳ ಮಹತ್ವದ ಯೋಜನೆಯಾದ ಮಾತೃತ್ವಮ್ ಮಾತೆಯರಿಗೆ ಮನೆಯಲ್ಲಿದ್ದುಕೊಂಡೇ ಗೋಸೇವೆ ಮಾಡಲು ದೊರಕಿದ ಅತ್ಯಂತ ಸುಲಭ ಹಾಗೂ ಸರಳವಾದ ಹಾದಿ . ಯಾರಿಗೂ ಯಾವುದೇ ಒತ್ತಡವಿಲ್ಲದೆ ಮಾಡಬಹುದಾದ ಸೇವೆಯಿದು ” ಎನ್ನುವವರು ಮಣಿಮುಂಡ ಮೂಲದ ಪ್ರಸ್ತುತ ಮೈಸೂರು ನಿವಾಸಿಗಳಾಗಿರುವ ಶಂಕರನಾರಾಯಣ ಭಟ್ಟರ ಪತ್ನಿ ಸುಜಾತ.

ಮಂಗಳೂರು ಮಂಡಲದ ಗುರಿಕ್ಕಾರರಾದ ಮಂಚಿಯ ಉದಯಕುಮಾರ ಭಟ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿಯಾದ ಸುಜಾತ ಅವರಿಗೆ ಗೋಸೇವೆಯಲ್ಲಿ ತುಂಬಾ ಶ್ರದ್ಧೆ ಹಾಗೂ ಭಕ್ತಿಯಿದೆ.

” ಬೇರ್ಕಡವು ಈಶ್ವರಿ ಅಕ್ಕನ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಮೈಸೂರಿನಲ್ಲಿ ಮಾಸದ ಮಾತೆಯಾಗಿ ಸೇವೆಗೈಯಲಾರಂಭಿಸಿದೆ. ಆರಂಭದಲ್ಲಿ ಹೇಗೆ ಆರಂಭಿಸಬೇಕು, ಗುರಿ ತಲುಪಲು ಸಾಧ್ಯವೇ’ ಎಂಬಂತಹ ಆತಂಕ ಆವರಿಸಿತ್ತು. ಆದರೆ ಶ್ರೀಗುರು ಚರಣಗಳಿಗೆ ಶರಣಾಗಿ ಪ್ರಾರ್ಥಿಸುತ್ತಾ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡೆ. ನಾನು ಊಹಿಸಿರುವುದಕ್ಕಿಂತಲೂ ಬಹಳ ಬೇಗನೆ ಗುರಿ ತಲುಪಲು ಸಾಧ್ಯವಾಯಿತು. ಗೋಮಾತೆಯ ಸೇವೆಗೆ ಎಂದಾಗ ಕೇಳಿದವರೆಲ್ಲರೂ ಪ್ರೀತಿಯಿಂದಲೇ ಸಹಕಾರ ನೀಡಿದ್ದಾರೆ, ಹವ್ಯಕರು ಮಾತ್ರವಲ್ಲದೆ ಇತರ ಸಮಾಜದವರು ಸಹಾ ಶ್ರೀಗುರುಗಳ ಗೋಸೇವೆಯ ಮಹತ್ವವನ್ನು ಅರಿತುಕೊಂಡು ಗೋಮಾತೆಯ ಸೇವೆಗೆ ಕೈಜೋಡಿಸಿದ್ದಾರೆ ” ಎನ್ನುವ ಸುಜಾತ ತಮ್ಮ ಮಗಳು ಪುಟ್ಟ ಬಾಲಕಿಯಾಗಿದ್ದಾಗ ನಡೆದ ಅವಿಸ್ಮರಣೀಯ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.

” ಮೈಸೂರಿನಲ್ಲಿ ಶ್ರೀಗುರುಗಳ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಮೈಸೂರಿನ ಯುವರಾಜರು ಮುಖ್ಯ ಅತಿಥಿಯಾಗಿದ್ದ ಆ ಕಾರ್ಯಕ್ರಮದಲ್ಲಿ ಶ್ರೀಗುರುಗಳು ಅಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಪಟಿಕದ ಹಾರವನ್ನು ಅನುಗ್ರಹಿಸುವುದನ್ನು ಕಂಡ ಪುಟ್ಟ ಮಗಳು ಶರಧಿ ಅಂತಹ ಹಾರ ತನಗೂ ಬೇಕೆಂದು ಹಠ ಮಾಡಲಾರಂಭಿಸಿದ್ದಳು.‌ ಯಾರಿಗೂ ತಿಳಿಯದಂತೆ ಅವಳನ್ನು ಹೇಗೋ ಸಮಧಾನ ಪಡಿಸಿದ್ದೆ. ಆದರೆ ಸರದಿ ಸಾಲಿನಲ್ಲಿ ನಿಂತು ಮಂತ್ರಾಕ್ಷತೆ ಸ್ವೀಕರಿಸುವಾಗ ಶ್ರೀಗಳು ಮುಗುಳುನಗುತ್ತಲೇ ಮಗಳಿಗೆ ಸ್ಪಟಿಕದ ಮಾಲೆಯನ್ನು ಅನುಗ್ರಹವಾಗಿ ನೀಡಿದ್ದರು. ನಿಜಕ್ಕೂ ನಂಬಲು ಅಸಾಧ್ಯವಾದ ಘಟನೆಯಾಗಿತ್ತದು. ಆ ತುಂಬಿದ ಸಭೆಯಲ್ಲಿ ನನ್ನ ಮಗಳು ನನ್ನಲ್ಲಿ ಮಾತ್ರ ಹೇಳಿದ ವಿಚಾರ ಅದು ಹೇಗೆ ಶ್ರೀಗುರುಗಳ ಅಂತರಂಗಕ್ಕೆ ಅರಿವಾಯಿತೋ ಎಂದೆನಿಸಿ ಶ್ರೀಗುರುಗಳ ಶಕ್ತಿಗೆ ಮನಸಾರೆ ಮಣಿದ ಕ್ಷಣ ಅದು ” ಎನ್ನುವ ಸುಜಾತ ಈಗಲೂ ಆ ಘಟನೆಯನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.

ಮಾತೃತ್ವಮ್ ಯೋಜನೆಯ ಮೂಲಕ ಇನ್ನಷ್ಟು ಸೇವೆ ಮಾಡುವ ಉತ್ಸಾಹದಲ್ಲಿರುವ ಸುಜಾತ ತಮ್ಮೊಂದಿಗೆ ಇನ್ನಷ್ಟು ಮಂದಿಯನ್ನು ಗೋಸೇವೆಯಲ್ಲಿ ನಿರತರಾಗಿಸುವ ಗುರಿ ಹೊಂದಿದ್ದಾರೆ.

Author Details


Srimukha

Leave a Reply

Your email address will not be published. Required fields are marked *