ಹೃದಯದಲ್ಲಿರುವುದು ಶ್ರೀಗುರುಗಳ ಮೂರ್ತಿ,ಶ್ರೀಗುರುವಚನಗಳೇ ಬಾಳಿಗೆ ಸ್ಪೂರ್ತಿ: ಶ್ರೀದೇವಿ ಎಸ್. ಭಟ್

ಮಾತೃತ್ವಮ್

“ಬದುಕಿನ ಪರೀಕ್ಷಣ ಘಟ್ಟಗಳಲ್ಲಿ ಆಸರೆಯಾಗಿ ಕಾಪಾಡಿದ್ದು ಶ್ರೀ ಗುರುಗಳ ಆಶೀರ್ವಾದ. ಅವರ ಕೃಪೆಯಿಂದ ಜೀವನದ ಹಲವಾರು ಏಳುಬೀಳುಗಳನ್ನು ದಾಟಿ ಇಂದು ಶ್ರೀ ಗುರುಸೇವೆ, ಗೋಸೇವೆಗಳ ಮೂಲಕ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ” ಎಂಬ ಸಂತೃಪ್ತ ಭಾವದಿಂದ ನುಡಿಗಳು ಪುಳು ಈಶ್ವರ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಪುತ್ರಿಯೂ, ಚಂಬರಕಟ್ಟ ಸುಬ್ರಹ್ಮಣ್ಯ ಭಟ್ ಅವರ ಪತ್ನಿಯೂ ಆಗಿರುವ ಶ್ರೀದೇವಿ ಎಸ್‌. ಭಟ್ ಅವರದ್ದು.

ಪತಿ ಸುಬ್ರಹ್ಮಣ್ಯ ಭಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಹಾಸನದಲ್ಲಿದ್ದರೂ ತಮ್ಮಿಬ್ಬರು ಮಕ್ಕಳ ಜೊತೆಗೆ ಶ್ರೀಮಠದ ಕಾರ್ಯಕರ್ತೆಯಾಗಿ ಸೇವೆ ಗೈದ ಶ್ರೀದೇವಿ ಅವರು ಮುಂದೆ ಮಂಗಳೂರಿಗೆ ಬಂದ ಮೇಲೆ ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನು ಸಕ್ರಿಯವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡರು.

‘ಬಾಲ್ಯದಲ್ಲಿ ಹಸುಗಳ ಒಡನಾಟವಿತ್ತು. ಆದರೆ ಮುಂದೆ ಅನಿವಾರ್ಯ ಕಾರಣಗಳಿಂದ ಗೋಸಾಕಣೆ ಸಾಧ್ಯವಾಗಲಿಲ್ಲ. ಆದರೂ ಹಸುಗಳೆಂದರೆ ಈಗಲೂ ಪ್ರೀತಿಯಿದೆ’ ಎಂದು ನುಡಿಯುವ ಶ್ರೀದೇವಿ ಭಟ್ ಗೆ ಭಜನೆ,ಕೃಷಿ ಇತ್ಯಾದಿಗಳಲ್ಲಿ ಆಸಕ್ತಿಯಿದೆ. ಮಂಗಳೂರು ನಗರದಲ್ಲಿ ತಾವು ವಾಸಿಸುವ ಮನೆಯ ಸುತ್ತಮುತ್ತಲಿನ ಇರುವಷ್ಟು ಜಾಗದಲ್ಲಿ ಹೂಗಿಡಗಳನ್ನು ಬೆಳೆಸುವ ಮೂಲಕ ತಮ್ಮ ಕೃಷಿಯ ಮೇಲಿನ ಆಸಕ್ತಿಯನ್ನು ಉಳಿಸಿಕೊಂಡಿದ್ದಾರೆ.

೨೦೦೨ರಲ್ಲಿ ಮಠದ ಸಂಪರ್ಕಕ್ಕೆ ಬಂದ ಇವರು ವಿಶ್ವ ಗೋಸಮ್ಮೇಳನ, ಶ್ರೀ ರಾಮಾಯಣ ಮಹಾಸತ್ರದಂತಹ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು.
ಮಂಗಳೂರು ಮಧ್ಯವಲಯದ ಗುರಿಕ್ಕಾರರಾಗಿರುವ ಪತಿಯ ಜೊತೆ ತಾವೂ ಕೂಡ ಘಟಕಾಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಇವರ ಸೇವಾ ವಿಧಾನ ನಿಜಕ್ಕೂ ಮೆಚ್ಚುವಂತದ್ದು.

ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ಏಕಾಂಗಿಯಾಗಿ ಮನೆಮನೆಗಳಿಗೆ ಭೇಟಿ ನೀಡಿದ ಅನುಭವ ಮರೆಯಲಾರದ್ದು ಎನ್ನುವ ಅವರು ಆ ಸಂದರ್ಭದಲ್ಲಿ ಹಿರಿಯ ಪುತ್ರಿ ಬಾಣಂತಿಯಾಗಿ ಮನೆಯಲ್ಲಿರುವಾಗಲೂ ಶ್ರೀ ಮಠದ ಸೇವೆ ಎಂದು ತಾನೊಬ್ಬಳೇ ಬಾಣಂತಿ,ಮಗುವಿನ ಆರೈಕೆ ಪೂರೈಸಿ ಬಿರುಬಿಸಿಲಲ್ಲೂ ಮನೆಮನೆಗಳಿಗೆ ಭೇಟಿಯಿತ್ತ ಅನುಭವಗಳನ್ನು ಬಿಚ್ಚಿಡುತ್ತಾರೆ.

“ರಾತ್ರಿ ಒಂಭತ್ತು ಗಂಟೆಯ ವರೆಗೂ ಮನೆಮನೆಗಳಿಗೆ ಹೋಗಿ ಸಂಗ್ರಹಿಸಿದೆ. ಅದರ ನಡುವೆಯೂ ನೋವಿನ ಅನುಭವಗಳಾದವು. ಮಾತುಗಳ ಇರಿತಗಳನ್ನು ತಡೆದು ಶ್ರೀ ಗುರುಚರಣಗಳನ್ನು ಸ್ಮರಿಸುತ್ತಲೇ ನನ್ನ ಸೇವೆ ಮುಂದುವರಿಸಿದೆ. ಅಲ್ಲಿಯೂ ಸಂಕಷ್ಟಗಳನ್ನು ನಿವಾರಿಸಿದ್ದು ಶ್ರೀ ಗುರುಗಳ ಆಶೀರ್ವಾದ ‌. ಪತಿಗೆ ಅಪಘಾತವಾಗಿದ್ದಾಗಲೂ ನಾನು ಶ್ರೀಮಠದ ಸೇವೆಯಲ್ಲಿ ನಿರತಳಾಗಿದ್ದೆ” ಎನ್ನುವ ಶ್ರೀದೇವಿ ಭಟ್ ಆ ಸಂದರ್ಭದಲ್ಲಿ ಸಮಾಜದಿಂದ ಎದುರಿಸಬೇಕಾಗಿ ಬಂದ ಕೆಲವು ಘಟನೆಗಳನ್ನು ಬಹಳ ಭಾವುಕರಾಗಿ ನುಡಿಯುತ್ತಾ ಶ್ರೀಗುರುಗಳ ಕೃಪಾಕಟಾಕ್ಷದಿಂದ ಅಂದು ಅವುಗಳಿಂದ ಪಾರಾಗಿ ಬಂದೆವು. ಶ್ರೀ ಗುರುಗಳನ್ನು ಮನದಲ್ಲಿ ಸ್ಮರಿಸುತ್ತಲೇ ನಾನು ಯಾವುದೇ ಕಾರ್ಯಕ್ಕೆ ತೊಡಗುವುದು. ಶ್ರೀ ಚರಣಕ್ಕೆ ನನ್ನ ಸೇವೆ ಸಮರ್ಪಿತವಾಗಲಿ ಎಂಬ ಭಾವ ಮಾತ್ರ ನನ್ನದು. ಇದಕ್ಕೆ ಸಂಪೂರ್ಣ ಸಹಕಾರ ನನ್ನ ಮನೆಯವರದ್ದು ಮತ್ತು ಮಕ್ಕಳದ್ದು ದೊರಕಿದೆ” ಎಂದು ಹೃದಯ ತುಂಬಿ ನುಡಿಯುತ್ತಾರೆ ‌.

ಹೃದಯದಲ್ಲಿರುವುದು ಶ್ರೀಗುರುಗಳ ಮೂರ್ತಿ.ಅವರ ಮಾತುಗಳೇ ನಮಗೆ ಎಂದೂ ಸ್ಪೂರ್ತಿ. ಆದುದರಿಂದ ಸ್ವಯಂ ಆಸಕ್ತಿಯಿಂದಲೇ ಮಾಸದಮಾತೆಯಾಗಿ ಸೇವೆ ಮಾಡಲಾರಂಭಿಸಿದೆ ಎನ್ನುವ ಶ್ರೀದೇವಿ ಅವರು ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ತಮ್ಮ ಗುರಿ ತಲುಪಿದ್ದಾರೆ‌.

“ಮಾಸದ ಮಾತೆಯಾಗಿ ಸೇವೆ ಮಾಡುವುದರಲ್ಲಿ ಸಂಪೂರ್ಣ ಸಂತೃಪ್ತಿ ಇದೆ. ನಾನು ಕೇಳಿದವರೆಲ್ಲ ಸಂತೋಷದಿಂದಲೇ ಗೋ ಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ. ಅವರು ಸಂತಸದಿಂದ ಹಣ ನೀಡುವಾಗ ನಾವು ಮಾಡುವ ಕಾರ್ಯದ ಬಗ್ಗೆ ನಮಗೂ ಅಭಿಮಾನ ಮೂಡುತ್ತದೆ. ಪರಿಚಿತರು,ಆತ್ಮೀಯರು ಮಾತ್ರವಲ್ಲದೆ ಇತರ ಸಮಾಜದವರು ಸಹಾ ಅತ್ಯಂತ ಆಸಕ್ತಿಯಿಂದ ಈ ಕಾರ್ಯಕ್ಕೆ ಸಹಕಾರ ನೀಡಿರುವುದು ಶ್ರೀ ಗುರುಗಳ ಕೃಪೆಯಿಂದ” ಎಂದು ನುಡಿಯುವ ಅವರ ಮಾತುಗಳಲ್ಲಿ ಧನ್ಯತೆಯ ಭಾವವಿದೆ‌.

ತಾವು ನಡೆಸುತ್ತಿರುವ ಮೆಡಿಕಲ್ ನಲ್ಲಿ ಗೋಸೇವಾ ಹುಂಡಿಯನ್ನಿಟ್ಟಿರುವ ಇವರು ಪ್ರತೀ ತಿಂಗಳು ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ಅದಕ್ಕೆ ಹಾಕುತ್ತಾರೆ. ಕಾಲೇಜ್ ವಿದ್ಯಾರ್ಥಿನಿಯಾಗಿರುವ ಮಗಳು ಶ್ರೀಧನ್ಯಾ ಭಟ್ ಸಹಾ ಶ್ರೀ ಗುರುಸೇವೆ, ಶ್ರೀ ಮಠದ ಸೇವೆಯಲ್ಲಿ ಆಸಕ್ತಿ ಹೊಂದಿದ್ದು ತಾನು ಕೊಳಲು ವಾದನ ತರಗತಿ ನಡೆಸುತ್ತಾ ಅದರಿಂದ ದೊರೆತ ಒಂದು ಮೊತ್ತವನ್ನು ಪ್ರತೀ ತಿಂಗಳು ಗೋಮಾತೆಗಾಗಿ ನೀಡುತ್ತಿರುವುದು ಶ್ಲಾಘನೀಯ ‌. ಇದಕ್ಕೂ ಮೊದಲು ಶ್ರೀಮಠದ ಪ್ರಸ್ತುತಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಶ್ರೀ ಧನ್ಯಾ ಭಟ್ ಶ್ರೀದೇವಿ ಅವರ ಕಿರಿಯ ಮಗಳು.

ಹಿರಿಯ ಮಗಳು ಅನನ್ಯಾ ಸಹಾ ವಿವಾಹ ಪೂರ್ವದಲ್ಲಿ ಶ್ರೀ ಮಠದ ಸೇವೆಯಲ್ಲಿ ನಿರತಳಾಗಿದ್ದಳು. ಅವಳ ವಿದ್ಯಾಭ್ಯಾಸ, ವಿವಾಹ ಎಲ್ಲಾ ವಿಚಾರಗಳಲ್ಲೂ ಶ್ರೀ ಗುರುಗಳ ಅನುಗ್ರಹ ನಮ್ಮೊಂದಿಗಿತ್ತು . ಪುಟ್ಟ ಮೊಮ್ಮಗ ಕೂಡ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ ವಹಿಸುವುದರ ಬಗ್ಗೆ ಸಂತಸ ಹೊಂದಿರುವ ಶ್ರೀದೇವಿ ಎಸ್.ಭಟ್ ಅವರಿಗೆ ನಿರತವೂ ಶ್ರೀಗುರುಗಳ ಸೇವೆ, ಗೋಮಾತೆಯ ಸೇವೆ ದೊರಕುವಂತಾಗಲಿ ಎಂಬುದೇ ಹಂಬಲ. ಎಲ್ಲರ ಜೊತೆಯಲ್ಲೂ ಬೆರೆತು ಬಾಳುವ ಉನ್ನತ ಗುಣವನ್ನು ಮಾತ್ರ ಬದುಕಿನಲ್ಲಿ ಬಯಸುವ ಇವರ ಸೇವಾಕಾರ್ಯಗಳು ಇತರ ಮಾಸದ ಮಾತೆಯರಿಗೆ ಪ್ರೋತ್ಸಾಹದಾಯಕವಾಗಿವೆ.

Author Details


Srimukha

Leave a Reply

Your email address will not be published. Required fields are marked *